ಕೋಲಾರ: ‘ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸಲು ಹುಟ್ಟಿಕೊಂಡಿರುವ ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆಯು ವಿಷಮುಕ್ತ ಆಹಾರ ಉತ್ಪಾದನೆ ಹಾಗೂ ವಿವಿಧ ಬೆಳೆಗಳಿಗೆ ಉಚಿತವಾಗಿ ವೈಜ್ಞಾನಿಕ ಸಲಹೆ ನೀಡುತ್ತಿರುವುದು ಸ್ವಾಗತಾರ್ಹ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಹೇಳಿದರು.
ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆಯು ವೈಜ್ಞಾನಿಕ ಕೃಷಿ, ರೋಗ ನಿಯಂತ್ರಣ ಕ್ರಮ, ಸಾವಯವ ಬೇಸಾಯ ಕುರಿತು ತಾಲ್ಲೂಕಿನ ಚೆಲುವನಹಳ್ಳಿಯ ರೈತ ರಾಜಣ್ಣ ಅವರ ಜಮೀನಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೃಷಿಕರಾದ ಚಂದ್ರಶೇಖರ್, ಸಿ.ನಾಗರಾಜ್ ಬೆಳೆ ಪದ್ಧತಿ ಅರಿವಿನ ಕೊರತೆಯಿಂದ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಂತಿದ್ದಾರೆ. ಅನ್ನದಾತರಿಗೆ ನೆರವಾಗುವ ಸದುದ್ದೇಶಕ್ಕೆ ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆ ಆರಂಭಿಸಲಾಗಿದೆ. ರೈತರು ಯಾವ ಬೆಳೆ ಯಾವಾಗ ಬೆಳೆಯಬೇಕು, ಯಾವ ಗೊಬ್ಬರ ಹಾಕಬೇಕು, ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ’ ಎಂದು ವಿವರಿಸಿದರು.
‘ರೈತರು ಕೃಷಿ ಸಂಬಂಧಿ ಸಮಸ್ಯೆಗಳನ್ನು ದೂರವಾಣಿ ಮೂಲಕ ಅಥವಾ ವಾಟ್ಸ್‌ಆ್ಯಪ್ ಮೂಲಕ ತಿಳಿಸಿದರೆ ಸಂಸ್ಥೆಯ ಸಂಪರ್ಕದಲ್ಲಿರುವ ಕೃಷಿ ತಜ್ಞರು ಉಚಿತವಾಗಿ ಅಗತ್ಯ ಮಾಹಿತಿ ಒದಗಿಸುತ್ತಾರೆ. ರೈತರಿಗೆ ನೀಡುತ್ತಿರುವ ಕೃಷಿ ಬೆಳೆ ಕ್ಯಾಲೆಂಡರ್‌ನಲ್ಲಿ ತಜ್ಞರು ಸಾಕಷ್ಟು ಮಾಹಿತಿ ನೀಡಿದ್ದಾರೆ, ಜತೆಗೆ ಬೆಳೆ ನಾಟಿ, ಬಳಸಿದ ಕೀಟನಾಶಕ, ಗೊಬ್ಬರ, ಕೊಯ್ಲು ಅಂಶಗಳನ್ನು ದಾಖಲಿಸಲು ಡೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.
‘ಸಂಸ್ಥೆ ಈಗಾಗಲೇ ಬೆಂಗಳೂರು, ದಾವಣಗೆರೆ, ಚಿಕ್ಕಬಳ್ಳಾಪುರದಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿದೆ. ಮುಂದೆ ಕೋಲಾರದಲ್ಲೂ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ನಾನು ಇದೇ ಜಿಲ್ಲೆಯವನಾಗಿದ್ದು, ಇಲ್ಲಿನ ರೈತರಿಗೆ ಉಚಿತ ಸಲಹೆ, ವೈಜ್ಞಾನಿಕ ಕೃಷಿ, ಸಾವಯವ ಕೃಷಿಗೆ ನೆರವಾಗುತ್ತೇನೆ’ ಎಂದು ಕೃಷಿ ಸಲಹಾ ಸ್ವಯಂ ಸೇವಾ ಸಂಸ್ಥೆ ಉಪಾಧ್ಯಕ್ಷ ಸಿ.ನಾಗರಾಜ್ ಭರವಸೆ ನೀಡಿದರು.
ಸಂಸ್ಥೆ ಪ್ರತಿನಿಧಿ ವಿನೋದ್‌ಕುಮಾರ್, ರೈತರಾದ ರಾಜಣ್ಣ, ಹನುಮಂತಪ್ಪ, ಅಪ್ಪಾಜಿಗೌಡ, ರಮೇಶ್, ನಾರಾಯಣಸ್ವಾಮಿ, ನಾಗರಾಜ್, ರಾಘವೇಂದ್ರ, ಶ್ರೀನಿವಾಸ್, ಚೇತನ್, ಚಂದ್ರ, ಮಂಜುನಾಥ್, ನಾಗೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.