ADVERTISEMENT

3ಕ್ಕೆ ಸಿರಿಗನ್ನಡ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 13:49 IST
Last Updated 30 ಜನವರಿ 2019, 13:49 IST

ಕೋಲಾರ: ‘ಸಂಘಟನೆ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಫೆ.3ರಂದು ಸಿರಿಗನ್ನಡ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಜೆ.ಮೌನಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾಹಿತಿ ದೊಡ್ಡರಂಗೇಗೌಡ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ವೇದಿಕೆ ಪದಾಧಿಕಾರಿಗಳು ಭಾಗವಹಿಸುತ್ತಾರೆ. ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಸಮ್ಮೇಳನ ನಡೆಯಲಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ವಿವರಿಸಿದರು.

ADVERTISEMENT

‘ಮಹಾದ್ವಾರಕ್ಕೆ ರಾಷ್ಟ್ರಕವಿ ಎಂ.ಗೋವಿಂದ ಪೈ ಮತ್ತು ವೇದಿಕೆಗೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಹೆಸರಿಡಲಾಗಿದೆ. ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, 9 ಗಂಟೆಗೆ ಸರ್ವಜ್ಞ ಉದ್ಯಾನದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಚಾಲನೆ ನೀಡುತ್ತಾರೆ. ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಸಮ್ಮೇಳನ ಉದ್ಘಾಟಿಸುವರು’ ಎಂದು ಮಾಹಿತಿ ನೀಡಿದರು.

‘ಸ್ಮರಣ ಸಂಚಿಕೆ ಬಿಡುಗಡೆ, ನಗರದ ಹೊರವಲಯದ ಸೋಲಾರ್ ಸಿಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಿರಿಗನ್ನಡ ಭವನದ ಮಾದರಿಗೆ ಸಮ್ಮೇಳನದಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು. 12 ಗಂಟೆಗೆ ವಿಚಾರ ಗೋಷ್ಠಿಯಲ್ಲಿ ವಿಮರ್ಶಕ ಚಂದ್ರಶೇಖರ್ ನಂಗಲಿ ಅವರು ‘ಬಹು ಬಾಷೆಗಳಲ್ಲಿ ದ್ವಿಭಾಷ ನೀತಿ’ ಮತ್ತು ಎಲ್.ಜಿ.ಮೀರಾ ಅವರು ‘ಕನ್ನಡ ಜಾಗತೀಕರಣೋತ್ತರ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಯ ಪ್ರಶ್ನೆ’ ಕುರಿತು ವಿಚಾರ ಮಂಡಿಸುತ್ತಾರೆ. ಕವಿ ಎಚ್.ಎನ್.ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ಹೇಳಿದರು.

ವಿಶೇಷ ಉಪನ್ಯಾಸ: ‘ಸಮ್ಮೇಳನಾಧ್ಯಕ್ಷರ ಬದುಕು- ಬರಹ ಕುರಿತು ಮಧ್ಯಾಹ್ನ 2 ಗಂಟೆಗೆ ವಿಶೇಷ ಉಪನ್ಯಾಸ ನಡೆಯಲಿದೆ. ಉಪನ್ಯಾಸಕ ಡಿ.ಎಸ್.ಶ್ರೀನಿವಾಸಪ್ರಸಾದ್ ವಿಷಯ ಮಂಡಿಸುವರು. ಮಧ್ಯಾಹ್ನ 2.45ಕ್ಕೆ ಕವಿಗೋಷ್ಠಿ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಸಮಾರೋಪ ಭಾಷಣ ಮಾಡುತ್ತಾರೆ’ ಎಂದರು.

ರೋಟರಿ ಪ್ರಧಾನ ಕಾರ್ಯದರ್ಶಿ ಜಿ.ವೆಂಕಟರಮಣಪ್ಪ, ಮಾಜಿ ಅಧ್ಯಕ್ಷ ಎಚ್.ರಾಮಚಂದ್ರಪ್ಪ, ಸಿರಿಗನ್ನಡ ವೇದಿಕೆ ಉಪಾಧ್ಯಕ್ಷ ಸುಬ್ಬರಾಮಯ್ಯ, ಸಂಚಾಲಕ ಕೆ.ಸೋಮಶೇಖರ್, ಕೋಶಾಧ್ಯಕ್ಷ ರಾಜೇಶ್‌ಸಿಂಗ್‌, ಸಲಹೆಗಾರ ಕೃಷ್ಣಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವೆಂಕಟಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.