ADVERTISEMENT

ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ಆರೋಪ: ನಿರ್ದೇಶಕರ ಸಾಮೂಹಿಕ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:21 IST
Last Updated 21 ನವೆಂಬರ್ 2024, 15:21 IST
ಬಂಗಾರಪೇಟೆಯ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಗುರುವಾರ ಆಡಳಿತ ಮಂಡಳಿಯ 9 ನಿರ್ದೇಶಕರು ರಾಜೀನಾಮೆ ನೀಡಿದರು
ಬಂಗಾರಪೇಟೆಯ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಗುರುವಾರ ಆಡಳಿತ ಮಂಡಳಿಯ 9 ನಿರ್ದೇಶಕರು ರಾಜೀನಾಮೆ ನೀಡಿದರು   

ಬಂಗಾರಪೇಟೆ: ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಆಡಳಿತ ಮಂಡಳಿಯ 9 ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ತಾಲ್ಲೂಕಿನ ಐನೋರಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕಳೆದ ಹತ್ತು ತಿಂಗಳಲ್ಲಿ ₹ 3.38 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಸದಸ್ಯರು ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಇದರ ಬೆನ್ನೆಲ್ಲೇ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬುಧವಾರ ಸ್ಪಷ್ಟನೆ ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಗುರುವಾರ ಮತ್ತೊಂದು ಘಟನೆ ನಡೆದಿದ್ದು, ಸಂಘದಲ್ಲಿ ಅವ್ಯವಹಾರ ನಡೆದಿರುವುದು ನಿಜ ಅದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಸಂಘದ ಉಪಾಧ್ಯಕ್ಷ ನಾಗರಾಜ ರೆಡ್ಡಿ, ಆಡಳಿತ ಮಂಡಳಿಯ ನಿರ್ದೇಶಕರಾದ ಜಗದೀಶ್, ರಾಜಣ್ಣ, ಪ್ರಸಾದ್, ಮಾಲಾ, ಚಂದ್ರಪ್ಪ, ಪಾರ್ವತಮ್ಮ, ರತ್ನಮ್ಮ ಮತ್ತು ಶಾರದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘದ ಕಾರ್ಯದರ್ಶಿಗೆ ಒಪ್ಪಿಸಿದರು.

ADVERTISEMENT

ಸಂಘದ ನಿರ್ದೇಶಕ ಜಗದೀಶ್ ಮಾತನಾಡಿ, ಸಂಘದಲ್ಲಿ ಕಳೆದ ಐದು ವರ್ಷಗಳಿಂದ ಅವ್ಯವಹಾರ ನಡೆದಿರುವುದು ನಿಜ. ನಕಲಿ ಸಹಿ ಮಾಡುವ ಮೂಲಕ ಸಂಘದ ಕಾರ್ಯದರ್ಶಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದರಿಂದ ಸಂಘಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅವ್ಯವಹಾರದ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡರಿಗೆ ತಿಳಿಸಿದಾಗ ರೈತ ಸಂಘದ ಸದಸ್ಯರು ರೈತರ ಪರವಾಗಿ ಪ್ರತಿಭಟನೆ ಮಾಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ. ಸಂಘದಲ್ಲಿ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ಮತ್ತು ಸಭೆಯಲ್ಲಿ ತೀರ್ಮಾನಿಸಿದೆ, ಹಣಕಾಸಿನ ಅವ್ಯವಹಾರ ನಡೆದಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಿ ಬಡ ರೈತರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಸಿ 9 ನಿರ್ದೇಶಕರು ರಾಜೀನಾಮೆ ನೀಡಿದ್ದೇವೆ ಎಂದರು.

ಬಂಗಾರಪೇಟೆ ಪಟ್ಟಣದಲ್ಲಿ ಪುರಸಭೆಯ ಆವರಣದಲ್ಲಿ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಾಜೀನಾಮೆಯ ಪತ್ರವನ್ನು ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.