ಕೆಜಿಎಫ್: ಬೆಮಲ್ ಗುತ್ತಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಟ್ಟು ಬೇಡಿಕೆ ಈಡೇರಿಕೆಗೆ ಬೇರೆ ಮಾರ್ಗ ಹುಡುಕಬೇಕು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಲಹೆ ನೀಡಿದರು.
ಊರಿಗಾಂ ವೃತ್ತದಲ್ಲಿ ನಡೆಯುತ್ತಿರುವ ಬೆಮಲ್ ಗುತ್ತಿಗೆ ಕಾರ್ಮಿಕರ 11ನೇ ದಿನದ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆಮಲ್ ಉತ್ತಮ ಸ್ಥಿತಿಯಲ್ಲಿ ಇದ್ದರೂ ದಿನೇ ದಿನೇ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರ ಬೆಮಲ್ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿದೆ. ಬಿಜೆಪಿ ಸರ್ಕಾರ ಕಾಯಂ ಬಿಟ್ಟು ಹೊರಗುತ್ತಿಗೆ ಕೊಡುವ ಪದ್ಧತಿ ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆ ಕಾರ್ಮಿಕರಿಗೂ ನಮಗೂ ಸಂಬಂಧವಿಲ್ಲ. ಒಪ್ಪಂದ ಏನಿದ್ದರೂ ಗುತ್ತಿಗೆದಾರರೊಂದಿಗೆ ಎಂದು ಆಡಳಿತ ವರ್ಗ ಹೇಳುತ್ತಲೇ ಬಂದಿದೆ. ಕಳೆದ ಬಾರಿ ಮುಷ್ಕರ ನಡೆಸಿದ್ದ ಸಂದರ್ಭದಲ್ಲಿ ಆಡಳಿತ ವರ್ಗದೊಂದಿಗೆ ಮಾತನಾಡಿ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು. ಗುತ್ತಿಗೆ ನೌಕರರು ಇಲ್ಲ ಎಂದರೆ ಬೆಮಲ್ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಆಡಳಿತ ವರ್ಗ ಮನಗಾಣಬೇಕು ಎಂದು ಹೇಳಿದರು.
ಕಾರ್ಮಿಕರ ಬೇಡಿಕೆ ಸರಿಯಾಗಿದೆ. 11 ದಿನದಿಂದ ಹೋರಾಟ ಮಾಡುತ್ತಿರುವುದು ನ್ಯಾಯಯುತವಾಗಿದೆ. ಬೆಮಲ್ ಆಡಳಿತಕ್ಕೆ ಕಿವಿ, ಕಣ್ಣು ಏನೂ ಇಲ್ಲ. ಅವರಿಗೆ ಮಾನವೀಯತೆ ಇಲ್ಲ. ಮುಷ್ಕರರಿಂದ ಪರಿಹಾರ ಸಾಧ್ಯವಿಲ್ಲ. ಒಂದು ತಿಂಗಳು ಮುಷ್ಕರ ಮಾಡಿದರೂ ಆಡಳಿತ ವರ್ಗದ ಸ್ಪಂದನೆ ಸಿಗುತ್ತಿಲ್ಲ. ಸಂಸದರು ಭಾಷಣ ಮಾಡಿ ಹೋಗಿದ್ದಾರೆ. ಸಂಸತ್‌ನಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಏನೂ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಜಿಲ್ಲೆಯ ಎಲ್ಲ ಶಾಸಕರನ್ನು ಒಳಗೊಂಡು ಈ ಹೋರಾಟವನ್ನು ಬೆಂಗಳೂರಿನ ಕೇಂದ್ರ ಕಚೇರಿ ಎದುರು ಮಾಡೋಣ ಎಂದು ತಿಳಿಸಿದರು.
ಆದರೆ, ಮುಷ್ಕರ ಕೈಬಿಡಿ ಎಂದು ಶಾಸಕರು ಹೇಳುತ್ತಿದ್ದಂತೆಯೇ ಕಾರ್ಮಿಕರು ಉದ್ರಿಕ್ತಗೊಂಡರು. ಪರಿಹಾರ ಆಗುವ ತನಕ ಮುಷ್ಕರ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಭಾಷಣಕ್ಕೆ ಅಡ್ಡಿಪಡಿಸಿದಾಗ ಕೋಪಗೊಂಡ ಶಾಸಕ, ಸಂಸದರ ಮೇಲೆ ಹರಿಹಾಯ್ದರು. ಕೆಜಿಎಫ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ ಹಾಜರಿದ್ದರು.
ಸಿ.ಎಂ ಬಳಿಗೆ ನಿಯೋಗ ಬೆಮಲ್ ಗುತ್ತಿಗೆ
ನೌಕರರು ಯಾವುದೇ ಶಾಸಕರ ಜೊತೆ ಸಮಾಲೋಚನೆ ಮಾಡದೆ ಮುಷ್ಕರ ಮಾಡಿದ್ದಾರೆ. ಮುಷ್ಕರ ನಡೆಸಲು ಅನುಮತಿ ಕೊಡಿಸಿದ್ದೂ ಕೂಡ ನಾನೇ. ಮುಷ್ಕರ ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೆಮಲ್ ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದೆ. ಕಾರ್ಮಿಕರು ಬೀದಿಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಸಿ.ಎಂ ಬಳಿಗೆ ಕರೆದುಕೊಂಡು ಹೋಗಿ ಎಂದರೆ ನಾವು ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.