ADVERTISEMENT

ಉಸ್ತುವಾರಿ ಸಚಿವರ ನೇಮಕಕ್ಕೆ ಮನವಿ: ಶಾಸಕ ವೈಎಎನ್‌ ಪತ್ರ

ಮುಖ್ಯಮಂತ್ರಿಗೆ ವಿಧಾನ ಪರಿಷತ್ ಶಾಸಕ ವೈಎಎನ್‌ ಪತ್ರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 14:59 IST
Last Updated 30 ಏಪ್ರಿಲ್ 2021, 14:59 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯ ನಿರ್ವಹಣೆಗೆ ಅನುಕೂಲವಾಗುವಂತೆ ಜಿಲ್ಲೆಗೆ ಶೀಘ್ರವೇ ಉಸ್ತುವಾರಿ ಸಚಿವರನ್ನು ನೇಮಿಸುವಂತೆ ಮನವಿ ಮಾಡಿ ವಿಧಾನ ಪರಿಷತ್ ಶಾಸಕ ವೈ.ಎ.ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳು ಹಾಗೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆದಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ನಾರಾಯಣಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ 2ನೇ ಅಲೆ ವ್ಯಾಪಕವಾಗಿದೆ. ಸೋಂಕು ನಿಯಂತ್ರಣಕ್ಕೆ ಮತ್ತು ಜನರ ರಕ್ಷಣೆಗೆ ಅನೇಕ ನಿರ್ಬಂಧ, ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ, ಔಷಧ ಪೂರೈಕೆ ಸೇರಿದಂತೆ ಸರ್ಕಾರ ಹಲವು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಅದೇ ರೀತಿ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳ ಕಟ್ಟುನಿಟ್ಟಿನ ಜಾರಿ ನಿಟ್ಟಿನಲ್ಲಿ ಜಿಲ್ಲೆಗೆ ಕೂಡಲೇ ಉಸ್ತುವಾರಿ ಸಚಿವರನ್ನು ನೇಮಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್, ಔಷಧ, ಮಾನವ ಸಂಪನ್ಮೂಲಗಳ ಕೊರತೆ ಕಾಡುತ್ತಿದೆ. ಇಂತಹ ಅಸಮರ್ಪಕ ನಿರ್ವಹಣೆ ಬಗ್ಗೆ ಜಿಲ್ಲೆಯ ಜನರು ಆಕ್ರೋಶಗೊಂಡಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ಆಯಾಮಗಳಲ್ಲೂ ಕ್ರಮ ವಹಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಸರ್ಕಾರದ ಕ್ರಮಗಳು ಮತ್ತು ಸೌಲಭ್ಯಗಳು ಕೋಲಾರದ ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂಬುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮನ್ವಯ ಕೊರತೆ: ಕೋವಿಡ್‌ ಸಂಕಷ್ಟದಲ್ಲೂ ಸರ್ಕಾರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಇದರಿಂದ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗೃಹ ಇಲಾಖೆ ನಡುವೆ ಸಮನ್ವಯ ಕೊರತೆ ಉಂಟಾಗಿದೆ. ಉಸ್ತುವಾರಿ ಸಚಿವರಿಲ್ಲದ ಕಾರಣಕ್ಕೆ ಜಿಲ್ಲಾಡಳಿತಕ್ಕೆ ಏಕಸೂತ್ರತೆ ಇಲ್ಲದಂತಾಗಿದೆ. ಇದರ ಪರಿಣಾಮ ಸಾಮಾನ್ಯ ಜನರ ಮೇಲಾಗುತ್ತಿದೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಗಂಭೀರ ಸ್ವರೂಪ ಕಣ್ಣಮುಂದೆ ಇರುವಾಗ ಆಡಳಿತ ವ್ಯವಸ್ಥೆ ರೂಪಿಸಿ ಎಲ್ಲಾ ಬಗೆಯ ಆರೋಗ್ಯ ಸೌಲಭ್ಯಗಳು ಜನರಿಗೆ ಶೀಘ್ರವೇ ತಲುಪುವಂತೆ ಮಾಡಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.