ADVERTISEMENT

ಮುಳಬಾಗಿಲು | ಕಾರ್ಖಾನೆಗಳೂ ಇಲ್ಲ; ವಲಸೆಯೂ ತಪ್ಪಿದ್ದಲ್ಲ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 18 ಮಾರ್ಚ್ 2024, 7:03 IST
Last Updated 18 ಮಾರ್ಚ್ 2024, 7:03 IST
<div class="paragraphs"><p>ನೆರೆಯ ಆಂಧ್ರರಪ್ರದೇಶದ ಪಲಮನೇರು ಸಮೀಪ ಸರ್ಕಾರ ನಿರ್ಮಿಸಿರುವ ಗಾರ್ಮೆಂಟ್ಸ್ ಕಾರ್ಖಾನೆ </p></div>

ನೆರೆಯ ಆಂಧ್ರರಪ್ರದೇಶದ ಪಲಮನೇರು ಸಮೀಪ ಸರ್ಕಾರ ನಿರ್ಮಿಸಿರುವ ಗಾರ್ಮೆಂಟ್ಸ್ ಕಾರ್ಖಾನೆ

   

ಸಂಗ್ರಹ ಚಿತ್ರ

ಮುಳಬಾಗಿಲು: ತಾಲ್ಲೂಕಿನಲ್ಲಿ ಯಾವುದೇ ವಿಧವಾದ ಉದ್ಯೋಗ ನೀಡುವ ಕಾರ್ಖಾನೆ, ಗಾರ್ಮೆಂಟ್‌ ಹಾಗೂ ಕಂಪನಿಗಳು ಇಲ್ಲದೆ ಯುವಕರು ಉದ್ಯೋಗ ಹರಸಿ ದೂರದ ಊರುಗಳಿಗೆ ವಲಸ ಹೋಗುತ್ತಿದ್ದಾರೆ. 

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 483 ಗ್ರಾಮಗಳಿವೆ. ಎಸ್ಸೆಸ್ಸೆಲ್ಸಿ, ಪಿ.ಯು.ಸಿ, ಪದವಿ, ಡಿಪ್ಲೊಮಾ, ಐ.ಟಿ.ಐ, ಎಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಮುಗಿಸಿದ ಯುವ ಜನರು ಕೆಲಸ ಇಲ್ಲದೆ ಅಲ್ಪ ಮೊತ್ತದ ಸಂಬಳಕ್ಕೆ ದುಡಿಯುತ್ತಿದ್ದಾರೆ. ಮತ್ತೆ ಕೆಲವರು ಯಾವುದೇ ಬಗೆ ಉದ್ಯೋಗ ಸಿಗದ ಕಾರಣದಿಂದ ಕೆಲಸಕ್ಕಾಗಿ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

ಬೆಂಗಳೂರಿನಿಂದ ಕೇವಲ 90 ಕಿಲೋಮೀಟರ್ ದೂರದಲ್ಲಿ ಇರುವ ಮುಳಬಾಗಿಲು ತಾಲ್ಲೂಕಿನಲ್ಲಿ ಶಿಕ್ಷಣ ಪಡೆದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯಾವ ಸೌಲಭ್ಯವೂ ಇಲ್ಲ. ಇದರಿಂದ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಬಡವರು ಕೂಲಿ ಕೆಲಸಕ್ಕೆ ದೂರದ ಊರುಗಳಿಗೆ ಹೋಗ ಬೇಕಾದ ಅನಿವಾರ್ಯತೆ ಇದೆ.

ಜಿಲ್ಲೆಯ ಕೋಲಾರ ತಾಲ್ಲೂಕಿನ ನರಸಾಪುರ, ಜೋಡಿ ಕೃಷ್ಣಾಪುರ, ವೇಮಗಲ್ ಕಡೆ ಕಾರ್ಖಾನೆ, ಕಂಪನಿಗಳು ಇವೆ. ಇದರಿಂದ ಸ್ವಲ್ಪಮಟ್ಟಿಗೆ ಉದ್ಯೋಗ ಲಭಿಸಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ. ರಾಜ್ಯದ ಗಡಿಯಲ್ಲಿ ಇರುವ ಮುಳಬಾಗಿಲು ತಾಲ್ಲೂಕಿನಲ್ಲಿಯೂ ರಾಷ್ಟ್ರೀಯ ಹೆದ್ದಾರಿ75 ಹಾದು ಹೋಗಿದೆ. ಸಾರಿಗೆ ಸಂಪರ್ಕ ಅನುಕೂಲಕರವಾಗಿದೆ. ಹೆದ್ದಾರಿ ಸಮೀಪದಲ್ಲೇ ಕಾರ್ಖಾನೆ ಅಥವಾ ಕಂಪನಿಗಳನ್ನು ಪ್ರಾರಂಭಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂಬುದು ಜನರ ಬಹುದಿನಗಳ ಬೇಡಿಕೆ.

ಜಿಲ್ಲೆಯ ಕೆ.ಜಿ.ಎಫ್, ಬಂಗಾರಪೇಟೆ, ಶ್ರೀನಿವಾಸಪುರ, ಕೋಲಾರ ಹಾಗೂ ಮಾಲೂರು ತಾಲ್ಲೂಕುಗಳಲ್ಲಿ ರೈಲ್ವೆ ವ್ಯವಸ್ಥೆ ಇದೆ. ಪ್ರತಿನಿತ್ಯ ಸಾವಿರಾರು ಮಂದಿ ಕೆಲಸಕ್ಕಾಗಿ ಬೆಂಗಳೂರು, ಹೊಸಕೊಟೆ ಕಡೆ ಕೆಲಸಕ್ಕೆ ಹೋಗಿ ಬರಲು ಅನುಕೂಲ ಇದೆ. ಮುಳಬಾಗಿಲು ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕಿನ ಜನರು ಉದ್ಯೋಗ ನಿಮಿತ್ತ ಪ್ರತಿದಿನ ಸಾವಿರಾರು ಮಂದಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಾರೆ. ಆದರೆ, ಮುಳಬಾಗಿಲು ರಾಜ್ಯದ ಗಡಿಯಲ್ಲಿದ್ದು ಯಾವುದೇ ಉದ್ಯೋಗ ನೀಡುವ ದೊಡ್ಡ ಯೋಜನೆಗಳಿಲ್ಲ. ಉದ್ಯೋಗ ಸೃಷ್ಟಿಯಾದರೆ ಮಾತ್ರ ತಾಲ್ಲೂಕು ಅಭಿವೃದ್ಧಿಗೊಳ್ಳಲಿದೆ ಎನ್ನುವುದು ಜನರ ಅಭಿಪ್ರಾಯ.

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ರೈಲ್ವೆ ವ್ಯವಸ್ಥೆ ಇದೆ. ಆದರೆ, ಮುಳಬಾಗಿಲು ತಾಲ್ಲೂಕಿನಲ್ಲಿ ಮಾತ್ರ ರೈಲ್ವೆ ವ್ಯವಸ್ಥೆ ಅನುಕೂಲ ಇಲ್ಲದಿರುವುದರಿಂದ ದೂರದ ಬೆಂಗಳೂರು ಕಡೆಗೆ ಉದ್ಯೋಗಕ್ಕಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಸ್ಥಳೀಯವಾಗಿ ಸಿಗುವ ಕೆಲಸ ಮಾಡಿಕೊಂಡು ಕೆಲವರು ಜೀವನ ಸಾಗಿಸುತ್ತಿದ್ದರೆ ಮತ್ತೆ ಕೆಲವು ವಿದ್ಯಾವಂತರು ಓದಿಯೂ ಕೆಲಸ ಇಲ್ಲದೆ ಖಾಲಿ ಇದ್ದಾರೆ.

ನೆರೆಯ ಆಂಧ್ರಪ್ರದೇಶದ ಗಾರ್ಮೆಂಟ್‌ಗಳಿಗೆ ಮಹಿಳೆಯರು: ತಾಲ್ಲೂಕಿಗೆ ಹೊಂದಿಕೊಂಡಿರುವ ನೆರೆಯ ಆಂಧ್ರ ಪ್ರದೇಶದ ನಾಲ್ಕು ರಸ್ತೆಗಳಲ್ಲಿ ಆಂಧ್ರ ಸರ್ಕಾರ ಸುಮಾರು 2ಸಾವಿರ ಎಕರೆ ಪ್ರದೇಶಗಳಲ್ಲಿ ಗಾರ್ಮೆಂಟ್ಸ್ ಕಂಪನಿ ಪ್ರಾರಂಭಿಸಿದೆ. ತಾಲ್ಲೂಕಿನ ಸುಮಾರು 6 ಸಾವಿರ ಮಹಿಳೆಯರು ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗಡಿ ಪ್ರದೇಶದ ಮಹಿಳೆಯರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ.

ಜಾರಿಯಾಗದ ಕೈಗಾರಿಕಾ ಪ್ರದೇಶ: ತಾಲ್ಲೂಕಿನ ದೇವರಾಯಸಮುದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಈ ಹಿಂದಿನ ಸರ್ಕಾರ 2 ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಯೋಜನೆ ಹಮ್ಮಿಕೊಂಡಿತ್ತು. ಸ್ಥಳ ಗುರ್ತಿಸಿ ಸರ್ಕಾರಿ ಜಮೀನಿನ ವಿಸ್ತೀರ್ಣದ ಸರ್ವೆ ಕೆಲಸ ಪ್ರಾರಂಭಿಸಿತ್ತು. ಆದರೆ, ಸರ್ವೆ ಕಾರ್ಯ ಕುಂಠಿತವಾಗಿರುವುದರಿಂದ ಯೋಜನೆ ಹಳ್ಳ ಹಿಡಿದಿದೆ. ‌ಇದರಿಂದ ಉದ್ಯೋಗ ಸಿಗುವ ಖುಷಿಯಲ್ಲಿದ್ದ ಜನರಿಗೆ ನಿರಾಸೆ ಹೆಚ್ಚಾಗಿದೆ.

ಇನ್ನು ಚುನಾವಣಾ ಸಮಯದಲ್ಲಿ ಮತ ಪಡೆಯಲು ಕಸರತ್ತು ನಡೆಸುವ ರಾಜಕೀಯ ನಾಯಕರು ತಾವು ಗೆದ್ದರೆ ತಾಲ್ಲೂಕಿನಲ್ಲಿ ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ನಿರುದ್ಯೋಗ ಸಮಸ್ಯೆ ಈಡೇರಿಸುತ್ತೇವೆ ಎಂದು ಭರವಸೆ ನೀಡುವ ನಾಯಕರು ಗೆದ್ದ ತಕ್ಷಣ ಯಾವುದನ್ನೂ ಈಡೇರಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಜನರ ಕೈಗೆ ಕೆಲಸ ಕೊಡಿ

ಮುಳಬಾಗಿಲು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಪದವಿ ಐಟಿಐ ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿ ಪಡೆದ ಅನೇಕ ಮಂದಿ ಯುವಕರು ದೂರದ ಬೆಂಗಳೂರು ಕಡೆಗೆ ಹೋಗಿ ಬರಲು ಆಗದೆ ಸ್ಥಳೀಯವಾಗಿ ಕೆಲಸ ಸಿಗದೆ ಎಷ್ಟೋ ಮಂದಿ ಕೃಷಿಕರಾಗಿ ನರೇಗಾದಲ್ಲಿ ಕೂಲಿ ಕಾರ್ಮಿಕರಾಗಿ ಹಾಗೂ ಕೆಲವು ಕಡೆ ಸಾಮಾನ್ಯ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ  ತಾಲ್ಲೂಕಿನಲ್ಲಿ ಕಾರ್ಖಾನೆ ಕಂಪನಿ ಹಾಗೂ ಗಾರ್ಮೆಂಟ್ಸ್ ಸ್ಥಾಪಿಸಿ ಜನರ ಕೈಗೆ ಕೆಲಸ ನೀಡಬೇಕಾಗಿದೆ. ಬಾಬು ಎಂಜಿನಿಯರಿಂಗ್ ನಿರುದ್ಯೋಗಿ ಪದವೀಧರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.