ಕೋಲಾರ: ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಹುದ್ದೆ ನೇಮಕಾತಿಗೆ ಭಾನುವಾರ ನಡೆದ ಪರೀಕ್ಷೆ ಬರೆಯಲು ರಾಜ್ಯದ ನಾನಾ ಕಡೆಗಳಿಂದ ಕೋಲಾರ ನಗರಕ್ಕೆ ಬಂದಿದ್ದ ಸಾವಿರಾರು ಅಭ್ಯರ್ಥಿಗಳು ಮಲಗಲು, ಊಟ–ತಿಂಡಿ ಹಾಗೂ ಶೌಚಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡಬೇಕಾಯಿತು.
ಬೆಳಗಾವಿ, ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಶನಿವಾರವೇ ಕೋಲಾರ ನಗರಕ್ಕೆ ಬಂದಿದ್ದರು.
ತಂಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲೇ ಮಲಗಿದರು. ಕೆಲವರು ದೇವಸ್ಥಾನ, ಅಂಗಡಿ, ಮಳಿಗೆಗಳ ಮುಂದಿನ ಆವರಣದಲ್ಲಿ ನಿದ್ದೆ ಹೋದರು.
ಇನ್ನು ಹಲವರು ಶನಿವಾರ ರಾತ್ರಿಯಿಡೀ ಪರೀಕ್ಷಾ ಕೇಂದ್ರಗಳ ಬಳಿಯ ರಸ್ತೆ ಬದಿಯಲ್ಲೇ ಮಲಗಿದರು. ಕೆಲವರು ಮಾತ್ರ ಲಾಡ್ಜ್ ಸೇರಿದಂತೆ ವಿವಿಧೆಡೆ ವಸತಿ ವ್ಯವಸ್ಥೆ ಮಾಡಿಕೊಂಡಿದ್ದರು.
3,064 ಹುದ್ದೆಗಳ ಭರ್ತಿಗೆ ಕೋಲಾರ ನಗರದ ವಿವಿಧ ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಯಿತು. ಪೊಲೀಸ್ ಇಲಾಖೆಯ ಅಧಿಸೂಚನೆಯಲ್ಲಿರುವಂತೆ ಕೋಲಾರ ಜಿಲ್ಲೆಗೆ 44 ಹುದ್ದೆ ಹಾಗೂ ಕೆಜಿಎಫ್‌ಗೆ 14 ಹುದ್ದೆ ವರ್ಗೀಕರಣ ಮಾಡಲಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ನಗರ ತಲುಪಿದ ಹಲವರು ರಸ್ತೆ ಬದಿಯ ಗೂಡಂಗಡಿ, ತಳ್ಳು ಗಾಡಿಗಳಲ್ಲಿ ಊಟ, ತಿಂಡಿ ಮಾಡಿ ಉದ್ಯಾನಗಳಲ್ಲಿ ಕುಳಿತು ಓದಿದರು. ರಾತ್ರಿ ಆಗುತ್ತಿದ್ದಂತೆ ಮಲಗಲು ಸಮಸ್ಯೆ ಎದುರಾಯಿತು.
ಹೆಚ್ಚಿನವರು ಮಲಗಲು ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣವನ್ನೇ ಆಶ್ರಯಿಸಿದರು. ಬಸ್ ನಿಲ್ದಾಣ ರಾತ್ರಿಯೂ ಜನಜಂಗುಳಿಯಿಂದ ತುಂಬಿತ್ತು. ಇರುವ ಒಂದು ಶೌಚಾಲಯಕ್ಕೆ ಬೆಳಗ್ಗೆ ನಾಲ್ಕರಿಂದಲೇ ಮುಗಿಬಿದ್ದರು. ಅಲ್ಲೇ ಬಟ್ಟೆ ಬದಲಾಯಿಸಿಕೊಂಡು ಪರೀಕ್ಷೆ ಕೊಠಡಿಗೆ ತೆರಳಿದರು.
ರೈಲು ನಿಲ್ದಾಣದ ಆವರಣದಲ್ಲಿ ಮಲಗಿದ್ದ ಕೆಲವರು ಅಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪಕ್ಕದ ಬಯಲು ಪ್ರದೇಶಕ್ಕೆ ಹೋಗಿ ದೈನಂದಿನ ಕೆಲಸ ಪೂರ್ಣಗೊಳಿಸಿದರು.
‘ಕೋಲಾರಕ್ಕೆ ಪರೀಕ್ಷೆ ಬರೆಯಲು ವಿಜಯಪುರದಿಂದ ಐವರು ಬಂದಿದ್ದೆವು. ರಾತ್ರಿ ಲಾಡ್ಜ್ ಹುಡುಕಿಕೊಂಡು ಹೊರಟೆವು. ಕೊಠಡಿಗೆ ₹500 ಎಂದು ಹೇಳಿದರು. ಅದಕ್ಕಿಂತ ಕಡಿಮೆ ಮೊತ್ತದ ಕೊಠಡಿ ಸಿಗಲಿಲ್ಲ. ಬಸ್ ಟಿಕೆಟ್, ಊಟ ತಿಂಡಿಗೆ ₹1 ಸಾವಿರಕ್ಕೂ ಹೆಚ್ಚು ಖರ್ಚಾಗಿತ್ತು. ಲಾಡ್ಜ್‌ಗೆ ಹಣ ನೀಡಲು ಕಷ್ಟವೆಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಮಲಗಿದೆವು’ ಎಂದು ಪರೀಕ್ಷಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪರೀಕ್ಷೆ ಮುಗಿಸಿ ತೆರಳುವಾಗಲೂ ಅಭ್ಯರ್ಥಿಗಳ ಸಂಕಷ್ಟ ತಪ್ಪಲಿಲ್ಲ. ಪರೀಕ್ಷೆ ಮುಗಿಸಿ ಏಕಕಾಲಕ್ಕೆ ಎಲ್ಲರೂ ಒಮ್ಮೆಲೆ ಬಸ್ ನಿಲ್ದಾಣಕ್ಕೆ ಬಂದಿದ್ದರಿಂದ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ ಉಂಟಾಯಿತು. ಬೆಂಗಳೂರಿಗೆ ತೆರಳುವ ಬಸ್ ಏರಲು ಎಲ್ಲರೂ ಮುಗಿಬಿದ್ದರು. ಬಸ್ ಸಿಗದೆ ಕೆಲವರಿಗೆ ಸಮಸ್ಯೆ ಎದುರಾಯಿತು.
ಪರೀಕ್ಷಾರ್ಥಿಗಳು ಶನಿವಾರ ರಾತ್ರಿ ಅಲೆದಾಡುತ್ತಿರುವುದನ್ನು ಕಂಡ ಕೋಲಾರದ ಗಲ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಅರುಣ್ ಗೌಡ ಪಾಟೀಲ ಹಾಲಿಸ್ಟರ್ ಸಮುದಾಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟರು. ‘ರಾತ್ರಿ ಕೋಲಾರ ನಗರದ ಬಂಗಾರಪೇಟೆ ವೃತ್ತದ ಬಳಿ ಹೋಗುವಾಗ ಪರೀಕ್ಷಾರ್ಥಿಗಳು ಚಳಿಯಲ್ಲಿ ರಸ್ತೆಬದಿ ನಿಂತಿದ್ದರು. ಎಲ್ಲೂ ಕೊಠಡಿ ಸಿಗುತ್ತಿಲ್ಲ ಎಂದು ಹೇಳಿದರು. ತಕ್ಷಣ ಹಾಲಿಸ್ಟರ್ ಭವನದ ವ್ಯವಸ್ಥಾಪಕರ ಜೊತೆ ಮಾತನಾಡಿ ವ್ಯವಸ್ಥೆ ಮಾಡಿದೆ’ ಎಂದು ಅರುಣ್ ಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಶನಿವಾರ ಸಂಜೆಯೇ ಕೋಲಾರಕ್ಕೆ ಬಂದಿದ್ದೆ. ಎಲ್ಲೂ ಕೊಠಡಿ ಸಿಗಲಿಲ್ಲ. ರೈಲು ನಿಲ್ದಾಣದ ಆವರಣದಲ್ಲೇ ಮಲಗಿದೆ. ಭಾನುವಾರ ಬೆಳಿಗ್ಗೆ ಇಲ್ಲಿಂದಲೇ ಪರೀಕ್ಷಾ ಕೊಠಡಿಗೆ ತೆರಳಿದೆ. ತುಂಬಾ ಕಷ್ಟವಾಯಿತು ಪರೀಕ್ಷಾರ್ಥಿ ವಿಜಯಪುರ ಜಿಲ್ಲೆ ‘ಶೌಚ ಬಟ್ಟೆ ಬದಲಾಯಿಸಲು ತೊಂದರೆ’ ನಾನೂ ಶನಿವಾರ ಮಧ್ಯಾಹ್ನವೇ ಬಂದಿದ್ದೆ. ಹೊರಗಡೆ ಹೋಗಿ ಮತ್ತೆ ರಾತ್ರಿ ರೈಲು ನಿಲ್ದಾಣಕ್ಕೆ ಬಂದು ಮಲಗಿಕೊಂಡೆ. ನಿಲ್ದಾಣದಲ್ಲೇ ಸಿದ್ಧಗೊಂಡು ಹೋಗಿ ಪರೀಕ್ಷೆ ಬರೆದೆ. ಶೌಚಕ್ಕೆ ಬಟ್ಟೆ ಬದಲಾಯಿಸಲು ತೊಂದರೆ ಆಯಿತು– ಪರೀಕ್ಷಾರ್ಥಿ, ಯಾದಗಿರಿ ಜಿಲ್ಲೆ
‘ಸೊಳ್ಳೆ ಕಾಟ; ನಿದ್ದೆ ಬರಲಿಲ್ಲ’ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲೇ ರಾತ್ರಿ ಸ್ವಲ್ಪ ಹೊತ್ತು ಓದಿದೆ. ನಂತರ ಇಲ್ಲೇ ಮಲಗಿಕೊಂಡೆ. ಸೊಳ್ಳೆ ಕಾಟದಿಂದ ನಿದ್ದೆ ಬರಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳಲ್ಲೇ ಪರೀಕ್ಷೆ ಕೇಂದ್ರವಿದ್ದಿದ್ದರೆ ಒಳ್ಳೆಯದಾಗುತ್ತಿತ್ತು.– ಪರೀಕ್ಷಾರ್ಥಿ, ಕೊಪ್ಪಳ
ನಮ್ಮ ಗಮನಕ್ಕೆ ಬಂದ ಪರೀಕ್ಷಾರ್ಥಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆವು. ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಮೂರು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ-ಎಂ.ನಾರಾಯಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.