ಕೋಲಾರ: ಅಯೋಧ್ಯೆ ಜಮೀನು ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ನಡೆಯದಂತೆ ಜಿಲ್ಲಾಧಿಕಾರಿಯು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಕೋರ್ಟ್ ತೀರ್ಪಿನಿಂದ ಜನ ಜೀವನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಲಿಲ್ಲ.
ವಾಣಿಜ್ಯ ವಹಿವಾಟು ಹಾಗೂ ವಾಹನ ಸಂಚಾರ ಎಂದಿನಂತೆಯೇ ಇತ್ತು. ಜಿಲ್ಲಾ ಕೇಂದ್ರ ಸೇರಿದಂತೆ ಬಹುತೇಕ ಕಡೆ ಅಂಗಡಿಗಳು ತೆರೆದಿದ್ದವು. ಎಪಿಎಂಸಿ, ತರಕಾರಿ ಮತ್ತು ರೇಷ್ಮೆಗೂಡು ಮಾರುಕಟ್ಟೆಯಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಿತು. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿಲ್ಲ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹಾಗೂ ಖಾಸಗಿ ಬಸ್‌ಗಳು ಪ್ರತಿನಿತ್ಯದಂತೆ ರಸ್ತೆಗಿಳಿದವು. ಆಟೊ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರ ಸಹಜವಾಗಿತ್ತು. ಹೀಗಾಗಿ ಜನಜೀವನಕ್ಕೆ ತೊಂದರೆಯಾಗಲಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಂಡೇ ಕಂಡುಬಂತು.
ಹೋಟೆಲ್, ಆಸ್ಪತ್ರೆ, ಔಷಧ ಮಾರಾಟ ಮಳಿಗೆಗಳು ಹಾಗೂ ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಿತು.
2ನೇ ಶನಿವಾರವಾದ ಕಾರಣಕ್ಕೆ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ಸರ್ಕಾರಿ ರಜೆಯಿತ್ತು. ಹೀಗಾಗಿ ಜನರು ಸರ್ಕಾರಿ ಕಚೇರಿಗಳತ್ತ ಸುಳಿಯಲಿಲ್ಲ. ಜಿಲ್ಲಾಡಳಿತವು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ಶುಕ್ರವಾರವೇ ರಜೆ ಘೋಷಿಸಿತ್ತು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಮುಖ ಮಾಡಲಿಲ್ಲ.
ಶನಿವಾರ ಬೆಳಿಗ್ಗೆಯಿಂದ ಸೋಮವಾರ (ನ.11) ಬೆಳಿಗ್ಗೆ 6 ಗಂಟೆವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈ ಕಾರಣಕ್ಕೆ ಮದ್ಯದಂಗಡಿಗಳನ್ನು ಇಡೀ ದಿನ ಬಂದ್ ಮಾಡಲಾಗಿತ್ತು.
ಸಂದೇಶದ ಮೇಲೆ ನಿಗಾ: ಅಯೋಧ್ಯೆ ವಿವಾದ ಸಂಬಂಧ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ಸಾರ್ವಜನಿಕರು ಗೌರವಿಸಬೇಕು. ತೀರ್ಪಿನ ಸಂಬಂಧ ವಿಜಯೋತ್ಸವ ಅಥವಾ ಪ್ರತಿಭಟನೆ ನಡೆಸಬಾರದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಜಯೋತ್ಸವ ಹಾಗೂ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.
ಅನ್ಯ ಕೋಮಿನವರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ, ಕೋಮು ಸೌಹಾರ್ದತೆಗೆ ಭಂಗ ತರುವ ಸಂದೇಶ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು. ಪ್ರಚೋದನಕಾರಿ ಹೇಳಿಕೆ ನೀಡಬಾರದೆಂದು ಜಿಲ್ಲಾ ಪೊಲೀಸ್ ಘಟಕವು ಸಾರ್ವಜನಿಕರಿಗೆ ಕಟ್ಟಪ್ಪಣೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದರು.
ಪೊಲೀಸ್ ಸರ್ಪಗಾವಲು: ತೀರ್ಪಿನ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳು, ಧಾರ್ಮಿಕ ಸ್ಥಳಗಳ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಜತೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ಜಂಕ್ಷನ್‌ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
600 ಪೊಲೀಸರ ಜತೆಗೆ 300 ಮಂದಿ ಗೃಹರಕ್ಷಕ ದಳ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್), ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 3 ತುಕಡಿಗಳನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.