ADVERTISEMENT

ಬಂಗಾರಪೇಟೆ: ಬರಗಾಲದಿಂದ ಸೀತಾಫ‌ಲ ಇಳುವರಿ ಖೋತಾ

ಮಂಜುನಾಥ ಎಸ್.ಎಸ್.
Published 14 ಅಕ್ಟೋಬರ್ 2024, 6:28 IST
Last Updated 14 ಅಕ್ಟೋಬರ್ 2024, 6:28 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿರುವ ಸೀತಾಫ‌ಲ ಹಣ್ಣಿನ ಗಿಡಗಳು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿರುವ ಸೀತಾಫ‌ಲ ಹಣ್ಣಿನ ಗಿಡಗಳು   

ಬಂಗಾರಪೇಟೆ: ತಾಲ್ಲೂಕಿನಾದ್ಯಂದ ತೀವ್ರ ಮಳೆಯ ಕೊರತೆಯಿಂದಾಗಿ ರೈತರಿಗೆ ಹೊಲ, ಬೆಟ್ಟ–ಗುಡ್ಡಗಳು ಮತ್ತು ಕಾಡುಗಳಲ್ಲಿ ಲಭ್ಯವಾಗುತ್ತಿದ್ದ ಸೀತಾಫಲ ಹಣ್ಣುಗಳು ಈ ಬಾರಿ ಅಪರೂಪದಂತಾಗಿವೆ. ಮಳೆ ಇಲ್ಲದ ಕಾರಣ ಸೀತಾಫಲ ಹಣ್ಣುಗಳ ಗಿಡಗಳು ಒಣಗಿ ನಿಂತಿದ್ದು, ರೈತರಲ್ಲಿ ನಿರಾಸೆ ಮೂಡಿದೆ. 

ತಾಲ್ಲೂಕಿನಲ್ಲಿ ಎರಡು, ಮೂರು ವರ್ಷಗಳಿಂದ ನಿರೀಕ್ಷೆಗೂ ಮೀರಿ ಮಳೆ ಸುರಿದ ಕಾರಣ ನಿಸರ್ಗದತ್ತವಾಗಿ ಸಿಗುವ ಸೀತಾಫ‌ಲ ಹಣ್ಣುಗಳ ಭರ್ಜರಿ ಫ‌ಸಲು ಸಿಕ್ಕಿತ್ತು. ಆದರೆ, ಈ ಬಾರಿ ಬರಗಾಲವು ಸೀತಾಫ‌ಲ ಹಣ್ಣುಗಳ ಫಸಲನ್ನು ಕಣ್ಮರೆಯಾಗಿಸಿದೆ.

ಮಳೆಗಾಲದ ವಿಶೇಷ ಅತಿಥಿ ಎಂದೇ ಕರೆಯುವ ಸೀತಾಫ‌ಲ ಹಣ್ಣಿಗೆ ರೈತಾಪಿ ವಲಯದಲ್ಲಿ ವಿಶೇಷ ಸ್ಥಾನ ಇದೆ. ಕಾಡಂಚಿನ ಅದರಲ್ಲೂ ಹೊಲ, ಬೆಟ್ಟ, ಕಾಡಿನ ಮರಗಳ ಪೊದೆಗಳಲ್ಲಿ ಸೀತಾಫಲದ ಗಿಡಗಳು ಬೆಳೆಯುತ್ತಿದ್ದವು. ಎರಡು, ಮೂರು ವರ್ಷದಿಂದ ಉತ್ತಮ ಮಳೆಯಿಂದಾಗಿ ನಿರೀಕ್ಷೆಗೂ ಮೀರಿ ಗಿಡಗಳಲ್ಲಿ ಸೀತಾಫ‌ಲ ಭರ್ಜರಿ ಫ‌ಸಲು ಬಿಟ್ಟಿದ್ದವು.

ADVERTISEMENT

ಅಲ್ಲದೆ, ಸೆಪ್ಪೆಂಬರ್‌ ತಿಂಗಳ ಆರಂಭದಲ್ಲಿ ಎಲ್ಲಿ ನೋಡಿದರೂ ಮಹಿಳಾ ವ್ಯಾಪಾರಿಗಳು ಸೀತಾಫಲ ಹಣ್ಣುಗಳನ್ನು ತಮ್ಮ ಬುಟ್ಟಿಗಳಲ್ಲಿ ಮಾರಲು ಜೋಡಿಸಿಟ್ಟುಕೊಂಡಿರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿರುತ್ತಿತ್ತು. ಆದರೆ, ಈ ವರ್ಷ ವಾಡಿಕೆಯಷ್ಟು ಮಳೆಯಾಗದೆ ಬರಗಾಲ ಆವರಿಸಿದ್ದು, ರೈತರು ಸಾಲ–ಸೋಲ ಮಾಡಿ ನಾಟಿ ಮಾಡಿದ್ದ ಬೆಳೆಗಳೇ ತೇವಾಂಶ ಇಲ್ಲದೆ ಒಣಗುತ್ತಿವೆ. ಅದೇ ರೀತಿ ಸೀತಾಫಲ ಹಣ್ಣಿಗೂ ಬರಗಾಲದ ಕರಿಛಾಯೆ ಅವರಿಸಿದೆ. 

‘ಸರಿಯಾಗಿ ಮಳೆಯಾಗದ ಕಾರಣ ಸೀತಾಫ‌ಲ ಗಿಡಗಳು ಒಣಗಿದಂತೆ ಕಂಡುಬರುತ್ತಿದೆ. ಫಸಲು ಸರಿಯಾಗಿ ಆಗಿಲ್ಲ’ ಎಂದು ರೈತ ಸತೀಶ್ ರಾವ್ ಬೇಸರ ವ್ಯಕ್ತಪಡಿಸಿದರು.

ಉತ್ತಮ ಮಳೆಯಾಗಿದ್ದರೆ ಉತ್ತಮ ಫಸಲು ಬರುತ್ತಿತ್ತು. ಸೀತಾಫಲ ಸ್ಥಳೀಯರಿಗೆ ಆದಾಯದ ಮೂಲವೂ ಆಗಿತ್ತು. ಆದರೆ, ಈ ಸಲ ಅದು ಸಾಧ್ಯವಾಗಿಲ್ಲ ಎಂದು ರೈತ ಗೋವಿಂದ ಹೇಳಿದರು.

ಕದರಿನತ್ತ ಗ್ರಾಮದಲ್ಲಿನ ರೈತನೊಬ್ಬ ಕಿತ್ತು ಸಂಗ್ರಹಿಸಿದ ಸೀತಾಫ‌ಲ ಹಣ್ಣುಗಳು

ತಾಲ್ಲೂಕಿನಾದ್ಯಂತ ಇಂದಿಗೂ ಕೂಡ ಸೀತಾಫ‌ಲವನ್ನು ರೈತರು ವಾಣಿಜ್ಯ ಬೆಳೆಯನ್ನಾಗಿ ಕಂಡಿಯೇ ಇಲ್ಲ. ಇದಕ್ಕೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹವೂ ಸಿಕ್ಕಂತೆ ಕಂಡುಬರುತ್ತಿಲ್ಲ. ಮಳೆಗಾಲದಲ್ಲಷ್ಟೇ ಸೀತಾಫಲ ಹಣ್ಣಿನ ರುಚಿ ಸವಿಯಬೇಕಿದೆ. ಇದೀಗ ಮಳೆ ಕೊರತೆಯಿಂದಾಗಿ ಸೀತಾಫಲ ಹಣ್ಣುಗಳು ಸಹ ಅಪರೂಪದಂತಾಗಿವೆ. 

ಹೊಲಗಳಲ್ಲಿ ಇರುವ ಸೀತಾಫ‌ಲ ಹಣ್ಣಿನಿಂದ ಉತ್ತಮ ಆದಾಯ ಗಳಿಸುವ ನೀರಿಕ್ಷೆ ಹೊಂದಿದ್ದೆವು. ಆದರೆ ಈ ಬಾರಿಯ ಸಾಧ್ಯವಾಗಲಿಲ್ಲ
ಶ್ರೀನಿವಾಸರೆಡ್ಡಿ ಸೀತಾಫ‌ಲ ವ್ಯಾಪಾರಿ 

ರೈತರಲ್ಲಿ ಬೇಸರ

ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ರೈತರು ಕುರಿ ಮೇಕೆ ದನ ಕಾಯುವ ಹುಡುಗರು ಮತ್ತು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕೂಲಿ ಕಾರ್ಮಿಕರಿಗೆ ಸೀತಾಫಲ ಹಣ್ಣುಗಳು ಕಾಶ್ಮೀರದ ಸೇಬಿನಷ್ಟೇ ರುಚಿ ನೀಡುತ್ತಿದ್ದವು.

ಆದರೆ ಈ ಬಾರಿ ಸೀತಾಫಲ ಫಸಲಿನಲ್ಲಿ ಕೊರತೆಯಾಗಿರುವ ಕಾರಣ ರೈತರು ಕೃಷಿ ಕೂಲಿ ಕಾರ್ಮಿಕರಿಗೂ ಸೀತಾಫಲ ಗಗನಕುಸುಮದಂತಾಗಿದೆ. ಇದರಿಂದಾಗಿ ರೈತರಲ್ಲಿ ಬೇಸರ ಮನೆ ಮಾಡಿದೆ.  ಸ್ವಾವಲಂಬಿ ಜೀವನಕ್ಕೆ ಆಸರೆಯಾಗಿದ್ದ ಸೀತಾಫಲ ತಾಲ್ಲೂಕಿನಾದ್ಯಂತ ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಸೀತಾಫ‌ಲ ಹಣ್ಣಿನ ಘಮಲು ಕಂಡು ಬರುತ್ತಿತ್ತು.

ವೃದ್ಧರು ರೈತರು ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಬೆಟ್ಟಗುಡ್ಡ ಮತ್ತು ಕಾಡುಗಳಲ್ಲಿ ಸಿಗುತ್ತಿದ್ದ ಸೀತಾಫ‌ಲ ಹಣ್ಣುಗಳನ್ನು ಕಿತ್ತು ತಂದು ಪಟ್ಟಣದಲ್ಲಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಸೀತಾಫಲ ಹಣ್ಣಿನ ಕೊರತೆಯಿಂದಾಗಿ ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಸೀತಾಫಲ ಹಣ್ಣು ಮಾರುವವರನ್ನು ಕಾಣಬಹುದಾಗಿದೆ ಎಂದು ಸೀತಾಫಲ ವ್ಯಾಪಾರಿ ತಿಮ್ಮರಾಯಸ್ವಾಮಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.