ಬಂಗಾರಪೇಟೆ: ಕೃಷಿಯು ಲಾಭದಾಯಕವಲ್ಲ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಕೈಸುಟ್ಟುಕೊಂಡವರೇ ಹೆಚ್ಚು. ಆದರೆ, ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ರೈತ ನಾರಾಯಣ ಎಂಬುವರು ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಮೂಲಕ ವಾರ್ಷಿಕ ₹20–₹25 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ನಾರಾಯಣಸ್ವಾಮಿ ಅವರು, ಕಾಮಸಮುದ್ರ ಮುಖ್ಯ ರಸ್ತೆಯಲ್ಲಿರುವ ಕೀಲುಕೊಪ್ಪ ಗ್ರಾಮದಲ್ಲಿರುವ ತಮ್ಮ ಹದಿನಾಲ್ಕುಎಕರೆ ಜಮೀನಿನಲ್ಲಿ 5 ಸಾವಿರ ಶ್ರೀಗಂಧ ಮರ, ಒಂದು ಸಾವಿರ ತೆಂಗು, 600 ಹೆಬ್ಬೇವು ಗಿಡಗಳು, 10 ಸಾವಿರ ಸೀಬೆ ಹಣ್ಣು ಗಿಡಗಳ ಬೇಸಾಯಕ್ಕಾಗಿ ಆರಂಭದಲ್ಲಿ ₹50 ಲಕ್ಷ ವೆಚ್ಚ ಮಾಡಿದ್ದು, ನಂತರದ ವರ್ಷಗಳಲ್ಲಿ ಅವುಗಳ ನಿರ್ವಹಣೆಗಾಗಿ ಒಂದಷ್ಟು ಹಣವನ್ನು ವೆಚ್ಚ ಮಾಡಿದ್ದಾರೆ.
ನಾಲ್ಕು ಕೊಳವೆಬಾವಿಗಳ ಮೂಲಕ ಆ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಅದಕ್ಕೆ ಹನಿ ಮತ್ತು ತುಂತುರು ನೀರಾವರಿ ನೆಚ್ಚಿಕೊಂಡಿದ್ದಾರೆ. ಇದೀಗ ಆ ಗಿಡಗಳು ಫಸಲು ನೀಡುತ್ತಿದ್ದು, ವಾರ್ಷಿಕ ₹20-25 ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅವರು ಹಣ್ಣಿನ ಬೇಸಾಯವು ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನೂರು ಕುರಿಗಳನ್ನು ಸಾಗಿರುವ ಅವರು ಅವುಗಳ ನಿರ್ವಹಣೆಗಾಗಿ ಅತ್ಯಾಧುನಿಕ ರೀತಿಯ ಕುರಿಶೆಡ್ ನಿರ್ಮಾಣ ಮಾಡಿದ್ದಾರೆ. ತಮ್ಮ ಕೃಷಿ ಚಟುವಟಿಕೆಗಳಿಗೆ ಕುರಿಗಳ ಗೊಬ್ಬರವನ್ನೇ ಬಳಸುತ್ತಾರೆ. ಸಾವಯವ ಕೃಷಿ ಅನುಸರಿಸಿ ಬೆಳೆದ ಈ ಹಣ್ಣುಗಳನ್ನು ಗ್ರಾಹಕರು ತೋಟಕ್ಕೆ ಬಂದು ಹಣ್ಣು ಖರೀದಿಸುತ್ತಾರೆ ಎನ್ನುತ್ತಾರೆ ರೈತ ನಾರಾಯಣಸ್ವಾಮಿ.
‘3 ವರ್ಷಗಳ ಹಿಂದೆ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೆ. ಆದರೆ, ಬೆಳೆಗಳ ನಿರ್ವಹಣೆ, ಶೇಖರಣೆ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ನಷ್ಟವಾಯಿತು. ಇದರ ನಂತರ ಹಣ್ಣಿನ ಬೇಸಾಯ ಮಾಡಲು ನಿರ್ಧರಿಸಿದೆ. ಯಾವುದೇ ತರಬೇತಿ ಪಡೆಯದೆ ಯೂಟ್ಯೂಬ್‌ನಲ್ಲಿ ಬೇಸಾಯದ ವಿಡಿಯೊಗಳನ್ನು ನೋಡಿ ಹಣ್ಣಿನ ಬೇಸಾಯ ಆರಂಭಿಸಿದೆ. ಈಗ ದಿನಕ್ಕೆ ನೂರಾರು ಕೆ.ಜಿ ಸೀಬೆ ಬೆಳೆಯುತ್ತಿದ್ದು, ಫಸಲನ್ನು ಮಾರುಕಟ್ಟೆಗೆ ಹೊಯ್ದು ಮಾರಾಟ ಮಾಡುತ್ತಿದ್ದೇನೆ’ ಎಂದು ಕೃಷಿಕ ನಾರಾಯಣಪ್ಪ ತಿಳಿಸಿದರು.
‘ಸೀಬೆ ಗಿಡಗಳ ಮಧ್ಯೆ ತೆಂಗಿ ಮರ, ಪಪ್ಪಾಯಿ, ದಾಳಿಂಬೆ, ನಿಂಬೆ, ಹಿಪ್ಪು ನೇರಳೆ ಗಿಡಗಳನ್ನು ನೆಟ್ಟಿದ್ದೆ. ಅವು ಈಗ ಚೆನ್ನಾಗಿ ಬೆಳೆದುನಿಂತಿವೆ. ಅಲ್ಪಾವಧಿ ಬೆಳೆಗಳು ಹೆಚ್ಚು ಶ್ರಮ ಬಯಸುತ್ತವೆ. ಅದಕ್ಕೆ 6 ತಿಂಗಳಿಗೊಮ್ಮೆ ಬಿತ್ತನೆ ಮಾಡಬೇಕು. ಗೊಬ್ಬರ, ಕ್ರಿಮಿಕೀಟ ಸಿಂಪಡಣೆ ಮಾಡಬೇಕು. ಕಳೆ ಕೀಳಬೇಕು, ಕಟಾವು ಮಾಡಬೇಕು. ಇದಕ್ಕೆ ಹೆಚ್ಚು ಕೂಲಿ ಕಾರ್ಮಿಕರ ಅಗತ್ಯವಿದೆ ಮತ್ತು ಹೆಚ್ಚು ಹಣ ವೆಚ್ಚವಾಗುತ್ತದೆ. ಆದರೆ, ದೀರ್ಘಾವಧಿ ತೋಟಗಾರಿಕೆ ಬೆಳೆಯಲ್ಲ ಅಂತ ಸಮಸ್ಯೆಗಳಿಲ್ಲ’ ಎಂದು ಅವರು ಹೇಳುತ್ತಾರೆ.
ಹುಣಸನಹಳ್ಳಿಯ ನಾರಾಯಣಸ್ವಾಮಿ ಸೀಬೆ ಹಣ್ಣು ಬೇಸಾಯದ ಜೊತೆಗೆ ಸೀಬೆಹಣ್ಣಿನ ಮಧ್ಯೆ ತೆಂಗು ಮತ್ತು ಶ್ರೀಗಂಧದ ಸಸ್ಯಗಳನ್ನು ಬೆಳೆದಿದ್ದಾರೆ. ಇಲಾಖೆಯ ಸವಲತ್ತುಗಳನ್ನು ರೈತರಿಗೆ ತಲುಪಿಸಲಾಗುತ್ತದೆ. ಈ ಮೂಲಕ ಇತರ ರೈತರಿಗೂ ಪ್ರೇರಣೆಯಾಗಲು ಕ್ರಮ ವಹಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ ತಿಳಿಸಿದರು.
ತೋಟದಲ್ಲಿ ಕಳೆ ನಿಯಂತ್ರಿಸಲು ಮಲ್ಚಿಂಗ್ ಮಾದರಿ ಉಳುಮೆ ಮಾಡುತ್ತಾರೆ. ಗಿಡಗಳಿಗೆ ಉಂಟಾಗುವ ಕೀಟಬಾಧೆ ತಪ್ಪಿಸಲು ಕ್ರಿಮಿನಾಶಕ ಬಳಸದೆ ಬೇವಿನಎಣ್ಣೆ ಉಳಿ ಮಜ್ಜಿಗೆ ನಾಟಿ ಹಸುವಿನ ಗಂಜಲು ಸಿಂಪಡಣೆ ಮಾಡುತ್ತಾರೆ. ಈ ಮೂಲಕ ಅವರು ಹಣ್ಣಿನ ಬೇಸಾಯಕ್ಕೆ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಎರೆಹುಳುಗಳನ್ನು ಖರೀದಿಸಿ ಜಮೀನಿನಲ್ಲಿ ಉತ್ಪತ್ತಿಯಾಗುವ ಹಸಿರು ಮತ್ತು ಒಣ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸುತ್ತಿದ್ದಾರೆ.
ಒಮ್ಮೆ ಗಿಡ ನೆಟ್ಟರೆ ಆ ಮರಗಳು ಬೆಳೆದು 10ರಿಂದ 30 ವರ್ಷಗಳವರೆಗೆ ಫಸಲು ಕೊಡುತ್ತವೆ. ಜೊತೆಗೆ ಒಬ್ಬರೇ ನಿರ್ವಹಣೆ ಮಾಡಬಹುದು. ಅಲ್ಪಾವಧಿಯಲ್ಲಿ ನಷ್ಟ ಹೆಚ್ಚು. ಸೀಬೆ ಗಿಡಗಳು ವರ್ಷದಲ್ಲಿ ಎರಡು ಬಾರಿ ಹಣ್ಣುಬಿಡುತ್ತವೆ.-ನಾರಾಯಣಸ್ವಾಮಿ, ರೈತ
ರೈತ ನಾರಾಯಣಸ್ವಾಮಿ ತಮ್ಮ ಜಮೀನಿನಲ್ಲಿ ಸೀಬೆ ಹಣ್ಣಿನ ಗಿಡ ತೆಂಗು ಶ್ರೀಗಂಧದ ಗಿಡ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.-ಪ್ರತಿಭಾ, ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.