ADVERTISEMENT

ಬಂಗಾರಪೇಟೆ: ಯುವ ರೈತನ ಕೈಹಿಡಿದ ಡ್ರ್ಯಾಗನ್ ಫ್ರೂಟ್

ಟೊಮೆಟೊ, ಆಲೂಗಡ್ಡೆ ಬೆಳೆದು ಕೈಸುಟ್ಟುಕೊಂಡಿದ್ದ ರೈತ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 6:06 IST
Last Updated 6 ನವೆಂಬರ್ 2024, 6:06 IST
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯ ಹೋಬಳಿಯ ನತ್ತಬೆಲೆ ನಾಗೇಶ ತೋಟದಲ್ಲಿ ಬೆಳೆದ ಡ್ರ್ಯಾಗನ್ ಪ್ರೂಟ್ ಹಣ್ಣುಗಳು ಮಾರುಕಟ್ಟೆಗೆ ಸಾಗಿಸಲು ಜೋಡಿಸಿರುವುದು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯ ಹೋಬಳಿಯ ನತ್ತಬೆಲೆ ನಾಗೇಶ ತೋಟದಲ್ಲಿ ಬೆಳೆದ ಡ್ರ್ಯಾಗನ್ ಪ್ರೂಟ್ ಹಣ್ಣುಗಳು ಮಾರುಕಟ್ಟೆಗೆ ಸಾಗಿಸಲು ಜೋಡಿಸಿರುವುದು   

ಬಂಗಾರಪೇಟೆ: ಟೊಮೆಟೊ, ಆಲೂಗಡ್ಡೆ ಸೇರಿದಂತೆ ಇತರ ವಾಣಿಜ್ಯ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಂಡಿದ್ದ ಜ್ಯೋತೇನಹಳ್ಳಿ ಆಲಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನತ್ತಬೆಲೆ ಗ್ರಾಮದ ಯುವ ರೈತರೊಬ್ಬರು ಇದೀಗ ವಿದೇಶಿ ತಳಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ. 

ನತ್ತಬೆಲೆ ಯುವ ರೈತ ನಾಗೇಶ್ ಅವರು ಮೊದಲಿಗೆ ತಮ್ಮ ಜಮೀನಿನಲ್ಲಿ ಟೊಮೆಟೊ, ಆಲೂಗಡ್ಡೆ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆ ಬೆಳೆದು, ಜೀವನ ನಡೆಸುತ್ತಿದ್ದರು. ಆದರೆ, ಅದು ನಿರೀಕ್ಷಿತ ಮಟ್ಟದ ಲಾಭ ತಂದುಕೊಟ್ಟಿರಲಿಲ್ಲ. ಜೊತೆಗೆ ಕೆಲವೊಮ್ಮೆ ಅದರಿಂದ ನಷ್ಟವಾಗಿದ್ದೇ ಹೆಚ್ಚು. ಈ ಮಧ್ಯೆ ನಾಗೇಶ್ ಅವರು ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ಲಾಭ ಕಂಡುಕೊಂಡಿದ್ದಾರೆ. 

ಅಷ್ಟಕ್ಕೂ ಅವರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಯಾವುದೇ ತರಬೇತಿ ಅಥವಾ ಶಿಬಿರಕ್ಕೆ ಹೋಗಿಲ್ಲ. ಬದಲಿಗೆ ತಮ್ಮ ಮೊಬೈಲ್‌ನಲ್ಲಿ ಯೂಟೂಬ್ ವಿಡಿಯೊ ನೋಡಿಯೇ ಡ್ರ್ಯಾಗನ್ ಫ್ರೂಟ್ ಬೆಳೆಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಈ ಪ್ರಕಾರ ಯಲಹಂಕದಿಂದ ಪಿಂಕ್ ತಳಿಯ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ತಮ್ಮ ಮೂರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿ, ಪೋಷಣೆ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ ಅವರು ಇದೀಗ ಗ್ರಾಮಸ್ಥರ ಕೇಂದ್ರಬಿಂದುವಾಗಿದ್ದಾರೆ. 

ADVERTISEMENT

ತಾಲ್ಲೂಕು ಟೊಮೆಟೊ ಸೇರಿದಂತೆ ಇನ್ನಿತರ ತರಕಾರಿ ಬೆಳೆಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಜನರು ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ಇತರೆ ರಾಜ್ಯಗಳಿಗೆ ಮಾರಾಟ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಒಮ್ಮೆ ಯಾವುದಾದರೂ ರೈತ ಯಾವುದೇ ಒಂದು ಬೆಳೆ ಬೆಳೆದು ಲಾಭ ಮಾಡಿಕೊಂಡರೆ, ಇತರೆ ರೈತರು ಅದೇ ರೈತನನ್ನು ಅನುಸರಿಸಿ ರೈತ ಬೆಳೆದ ಬೆಳೆಯ ಬೆಲೆ ಕುಸಿತ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ರೈತ ನಷ್ಟಕ್ಕೊಳಗಾಗುತ್ತಾನೆ. ನಾಗೇಶ್ ಸಹ ತರಕಾರಿ ಬೆಳೆ ಬೆಳೆದು ಬೆಲೆ ಇಲ್ಲದೆ ನಷ್ಟಕ್ಕೆ ತುತ್ತಾಗಿದ್ದರು.

ಆರಂಭದಲ್ಲಿ ಬೆಳೆಗೆ ಸುಮಾರು ₹15 ಲಕ್ಷ ಬಂಡವಾಳ ಹಾಕಿದ್ದ ರೈತ ಒಂದೇ ಕೊಯ್ಲಿಗೆ ಸುಮಾರು ₹5 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ. ಬೆಳೆಯಲ್ಲಿ ಒಮ್ಮೆ ಇಳುವರಿ ಕಂಡರೆ 9 ತಿಂಗಳ ಕಾಲ ತಿಂಗಳಿಗೆ 4 ಬಾರಿ ಕೊಯ್ಲು ಬರುತ್ತದೆ. ಒಂದು ಎಕರೆಗೆ 1 ಟನ್‌ನಷ್ಟು ಇಳುವರಿ ಬರುತ್ತಿದ್ದು, ಪ್ರತಿ ಕೆ.ಜಿಗೆ ₹150ರಂತೆ ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಿಗೆ ನೇರವಾಗಿ ತೋಟದಿಂದಲೇ ಮಾರಾಟ ಮಾಡುತ್ತಿದ್ದಾರೆ. 

ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯ ಹೋಬಳಿಯ ನತ್ತಬೆಲೆ ನಾಗೇಶ ತೋಟದಲ್ಲಿ ಬೆಳೆದ ಡ್ರ್ಯಾಗನ್ ಪ್ರೂಟ್ ಗಿಡಗಳು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯ ಹೋಬಳಿಯ ನತ್ತಬೆಲೆ ನಾಗೇಶ ತೋಟದಲ್ಲಿ ಬೆಳೆದ ಡ್ರ್ಯಾಗನ್ ಪ್ರೂಟ್ ಹಣ್ಣುಗಳು ಮಾರುಕಟ್ಟೆಗೆ ಸಾಗಿಸಲು ಜೋಡಿಸಿರುವುದು
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯ ಹೋಬಳಿಯ ನತ್ತಬೆಲೆ ನಾಗೇಶ ತೋಟದಲ್ಲಿ ಬೆಳೆದ ಡ್ರ್ಯಾಗನ್ ಪ್ರೂಟ್ ಗಿಡಗಳು
ನತ್ತಬೆಲೆ ಯುವ ರೈತ ನಾಗೇಶ್ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ಸಹಾಯಧನ ಪಡೆದು ಡ್ರ‍್ಯಾಗನ್ ಫ್ರೂಟ್ ಬೆಳೆದು ಯುವ ರೈತರಿಗೆ ಮಾದರಿಯಾಗಿದ್ದಾರೆ
ಶಿವಾರೆಡ್ಡಿ ಹಿರಿಯ ಸಹಾಯಕ ನಿರ್ದೇಶಕ 

ಹಣ್ಣು ಬೆಳೆಯುವ ವಿಧಾನ

ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ಮೊದಲಿಗೆ ಜಮೀನು ಹದ ಮಾಡಬೇಕು. ನಂತರ ಬದುಗಳನ್ನು ನಿರ್ಮಿಸಿ ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. ಒಂದು ಕಲ್ಲುಕಂಬದ ಮೇಲೆ ಬೈಕ್‌ನ ಹಳೆಯ ಟೈರ್‌ಗಳನ್ನು ಕಬ್ಬಿಣದ ಸರಳುಗಳ ಜೊತೆ ಜೋಡಿಸಬೇಕು. ಒಂದು ಕಂಬದಿಂದ 8 ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು ಬದುವಿಂದ ಬದುವಿಗೆ 12 ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಒಂದು ಎಕರೆಗೆ 500 ಕಂಬಗಳು ಬರುತ್ತವೆ. ಒಂದು ಕಂಬಕ್ಕೆ 4–5 ಹಣ್ಣಿನ ಸಸಿಗಳಂತೆ ಒಟ್ಟು 2000ಕ್ಕೂ ಹೆಚ್ಚು ಕೆಂಪು ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಒಂದು ಎಕರೆಗೆ ₹5–6 ಲಕ್ಷ ಖರ್ಚು ಮಾಡಿದ್ದು ಇಂದು ಫಲ ನೀಡುತ್ತಿದೆ ಎಂದು ರೈತ ನಾಗೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.