ಬಂಗಾರಪೇಟೆ: ತಾಲ್ಲೂಕಿನ ಬೋಡುಗುರ್ಕಿ ಗ್ರಾಮದಲ್ಲಿ ಅಂತರ್ಜಾತಿ ಎನ್ನುವ ಕಾರಣಕ್ಕೆ ಇಬ್ಬರು ಯುವ ಪ್ರೇಮಿಗಳನ್ನು ಬಲಿ ತೆಗೆದುಕೊಂಡಿರುವುದು ದುರಂತ. ಮಗನನ್ನು ಕಳೆದುಕೊಂಡ ಗ್ರಾಮದ ದಲಿತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಜತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಒತ್ತಾಯಿಸಿದರು.
ತಾಲ್ಲೂಕಿನ ಬೋಡುಗುರ್ಕಿ ಗ್ರಾಮದಲ್ಲಿ ಈಚೆಗೆ ಮೃತಪಟ್ಟ ದಲಿತ ಯುವಕ ಗಂಗಾಧರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸ್ವಾತಂತ್ರ ಬಂದು 75 ವರ್ಷಗಳಾದರೂ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ, ಮೌಢ್ಯತೆ ಹಾಗೂ ಮರ್ಯಾದೆ ಹತ್ಯೆ ಪ್ರಕರಣಗಳು ಮರುಕಳಿಸುತ್ತಿರುವುದು ದುರಂತ ಎಂದರು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಾನೂನು ಬಲಿಷ್ಟಗೊಳಿಸಬೇಕು. ಇಂತಹ ಕೃತ್ಯಗಳಲ್ಲಿ ಭಾಗಿ ಆಗುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಗೃಹಮಂತ್ರಿ ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆಯ ಮಹದೇವಪ್ಪ ಅವರು ಇಂತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಪೂರ್ಣ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಸಂಚಾಲಕ ದೇಶಿಹಳ್ಳಿ ಶ್ರೀನಿವಾಸ್, ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮೆಹಬೂಬ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.