ಬಂಗಾರಪೇಟೆ: ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿರುವ ಅನೇಕ ವಾರ್ಡ್‌ಗಳಲ್ಲಿ ಶೌಚಾಲಯ, ರಸ್ತೆ, ಚರಂಡಿ, ರಸ್ತೆ ಹಾಗೂ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಕೆಲವು ಕಡೆಗಳಲ್ಲಿ ಶೌಚಾಲಯ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಹೊಂದಿದ್ದರೂ, ಅವುಗಳು ಉಪಯೋಗಕ್ಕೆ ಬಾರದೆ ನಿಷ್ಪ್ರಯೋಜಕವಾಗಿವೆ ಎಂದು ಜನಸಾಮಾನ್ಯರು ದೂರುತ್ತಾರೆ.
ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆ ವಾಸಿಸುತ್ತಿದ್ದು, ವಿವಿಧ ಕಾರಣಗಳಿಗಾಗಿ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿ ಬಂದು ಹೋಗುತ್ತಾರೆ. ಆದರೆ, ಹೀಗೆ ಬರುವವರಿಗೆ ತಾಲ್ಲೂಕು ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಹೊರತುಪಡಿಸಿದರೆ, ಇನ್ಯಾವುದೇ ಶೌಚಾಲಯಗಳು ಇಲ್ಲ. ಇದರಿಂದಾಗಿ ಜನರು ರಸ್ತೆ ಬದಿ ಮತ್ತು ಮನೆಗಳು ಮತ್ತು ಕಟ್ಟಡಗಳ ಸಂಧಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವೆಂಬಂತಾಗಿದೆ.
ನಗರದ 24 ಮತ್ತು 25ನೇ ವಾರ್ಡ್‌ಗಳಿಗೆ ಸೇರಿ ದೇಶಿಹಳ್ಳಿಯ ಕಾಮಸಮುದ್ರ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ನೀರಿನ ಪೂರೈಕೆ ಇಲ್ಲದಿರುವ ಕಾರಣದಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿರುವ ಶೌಚಾಲಯವು ನಿರರ್ಥಕವಾಗಿ ನಿಂತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ 20 ವರ್ಷಗಳ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಆ ಸ್ಥಳವನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅಲ್ಲಿ ನಿರ್ಮಿಸಲಾಗಿದ್ದ ಶೌಚಾಲಯವು ಇಂದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದರಿಂದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಕರ್ಣಾಟಕ ಬ್ಯಾಂಕ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪಿಎಲ್‌ಡಿ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ಗಳಿಗೆ ಬರುವ ಸಾರ್ವಜನಿಕರು ಮೂತ್ರ ವಿಸರ್ಜನೆ ಹಾಗೂ ಇನ್ನಿತರ ಶೌಚದ ಕಾರ್ಯಕ್ಕೆ ಪರದಾಡುವಂತಾಗಿದೆ.
ಕಾರಹಳ್ಳಿ ವೃತ್ತದಲ್ಲಿ ನಿರ್ಮಿಸಲಾದ ಸಮುದಾಯದ ಶೌಚಾಲಯವೂ ಸಮರ್ಪಕ ನಿರ್ವಹಣೆಯೇ ಇಲ್ಲವಾಗಿದೆ. ಶೌಚಾಲಯಕ್ಕೆ ನೀರಿನ ಕೊರತೆ ಕಾರಣಕ್ಕೆ ಜನರು ಬಳಸಲು ಸಾಧ್ಯವಾಗದಂತಾಗಿದೆ. ಹೀಗಾಗಿ ಅಂಗಡಿಗಳ ಮಾಲೀಕರು ಹಾಗೂ ಸಾರ್ವಜನಿಕರು ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ರಸ್ತೆ ಪಕ್ಕದ ಬಯಲು ಶೌಚವೇ ಅನಿವಾರ್ಯ ಎಂಬಂತಾಗಿದೆ.
ಜನರಿಗೆ ಅನುಕೂಲವಾಗುವಂತೆ ಹಲವು ವರ್ಷಗಳ ಹಿಂದೆಯೇ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಆ ಜಾಗಗಳು ಇದೀಗ ಅನೈತಿಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿವೆ ಎಂದು ಉದ್ಯೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪಗಳು ಒಂದೆಡೆಯಾದರೆ, ಶೌಚಾಲಯಕ್ಕೆ ನೀರಿನ ಸೌಲಭ್ಯವೇ ಇಲ್ಲ. ಇದರಿಂದಾಗಿ ಶೌಚಾಲಯಗಳನ್ನು ಬಳಸಲು ಯೋಗ್ಯವಾಗಿಲ್ಲ. ಉಪಯೋಗಿಸದೆ ನಿರ್ವಹಣಾ ವೆಚ್ಚ ನೀಡಲು ಜನರು ಮುಂದಾಗುತ್ತಿಲ್ಲ ಎಂಬುದು ಬಡಾವಣೆ ಜನರ ಆರೋಪವಾಗಿದೆ.
ದೇಶಿಹಳ್ಳಿ ಯಲ್ಲಿನ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಅಡಿಯಲ್ಲಿ ಸಮುದಾಯದ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯ, ಜನರ ಉಪಯೋಗಕ್ಕೆ ಇಲ್ಲದಂತಾಗಿದೆ. ದೇಶಿಹಳ್ಳಿಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಇಲ್ಲಿನ ಜನರ ಅನುಕೂಲಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಶೌಚಾಲಯ ನಿರ್ಮಾಣ ನಿರ್ಧರಿಸಲಾಗಿತ್ತು. ಮೂರು ವರ್ಷಗಳಲ್ಲಿ ಈ ಶೌಚಾಲಯ ನಿರ್ಮಾಣವಾಗಿದೆ. ಪುರಸಭೆಯ ವತಿಯಿಂದ ನಿರ್ಮಿಸಿರುವ ಈ ಶೌಚಾಲಯದ ನಿರ್ವಹಣೆಯೇ ಇದೀಗ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೋಟ್ 3: ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಂದು ಕುಟುಂಬವು ಶೌಚಾಲಯ ಹೊಂದಿ, ಆರೋಗ್ಯಯುತವಾದ ಜೀವನವನ್ನು ನಡೆಸಬೇಕೆಂದು ಸರ್ಕಾರ ಹೇಳುತ್ತದೆ. ಆದರೆ ಪಟ್ಟಣದಲ್ಲಿ ನಿರ್ಮಿಸಿರುವ ಸಮುದಾಯದ ಶೌಚಗೃಹಗಳು ಇದಕ್ಕೆ ತದ್ವಿರುದ್ಧವಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದೆ ವ್ಯರ್ಥ ವಾಗಿರುವುದು ವಿಪರ್ಯಾಸವಾಗಿದೆ ಎಂದು ಅಮರಾವತಿ ಬಡಾವಣೆಯ ರವಿ ಕುಮಾರ ಹೇಳಿದರು. ಕೋಟ್4 : ಶೌಚಾಲಯಕ್ಕಾಗಿ ವ್ಯವಸ್ಥಿತ ಕಟ್ಟಡ ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದರೂ ಇದು ಉಪಯೋಗಕ್ಕೆ ಬಾರದ್ದರಿಂದ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡದೊಳಗೆ ಇರಬೇಕಾಗದ ವಸ್ತುಗಳು ಕಾಣೆಯಾಗಿವೆ ಕೆರೆಕೋಡಿ ಬಜ್ ವು ಮೇನ್ ಸಂಸ್ಥೆಯ ಉದ್ದೋಗಿನಿ ರೂಪ ಹೇಳಿದರು. ಕೋಟ್ 5:ಜನರ ಬಯಲು ಶೌಚ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಕೊಟ್ಯಂತರ ಹಣ ವಿನಿಯೋಗಿಸುತ್ತಿದೆ. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ಫಲ ಜನತೆಗೆ ದೊರಕುತ್ತಿಲ್ಲ ದೇಶಿಹಳ್ಳಿಯ ನಿವಾಸಿ ಭಗೀರಥ ಹೇಳಿದರು. ಕೋಟ್ 6:ಸರ್ಕಾರವು ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಿಸಿರುವ ಸುಲಭ ಶೌಚಾಲಯಗಳನ್ನು ಸೂಕ್ತ ನಿರ್ವಹಣೆ ಕೊರತೆಯಿಂದ ಜನರು ಉಪಯೋಗಿಸುತ್ತಿಲ್ಲ. ಸಂಬಂಧ ಪಟ್ಟ ಪುರಸಭೆಯ ಆಡಳಿತ ಎಚ್ಚತ್ತುಕೊಂಡು ಶೌಚಾಲಯ ಜನರ ಬಳಕೆಗೆ ಮುಕ್ತಗೂಳಿಸಬೇಕು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಶ್ವತ್ಥ ಹೇಳಿದರು. ಕೋಟ್7:ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದಿದ್ದು, ಶೌಚಾಲಯ ಕಟ್ಟಿಕೊಳ್ಳಲು ಸ್ಥಳವಿಲ್ಲದ ಬಡವರು ತಮ್ಮ ಸಮಸ್ಯೆಗಳನ್ನು ಯಾರ ಬಳಿಯಲ್ಲೂ ಹೇಳದೆ ರಾತ್ರಿಯ ವೇಳೆ ಬಯಲಲ್ಲೇ ಬಹಿರ್ದೆಸೆಗೆ ಹೋಗಬೇಕಾದ ದುಸ್ಥಿತಿ ಯಾಗಿದೆ ಎಂದು ಶ್ರೀನಿವಾಸ ದೇಶಿಹಳ್ಳಿ ತಿಳಿಸಿದರು. ಕೋಟ್ 8 : ಹಳೆ ಬಸ್ ನಿಲ್ದಾಣದಲ್ಲಿರುವ ಶೌಚಗೃಹಗಳಿಗೆ ಸಮಪರ್ಕವಾದ ಸೌಲಭ್ಯ ಗಳಿಲ್ಲ. ಇಲ್ಲಿನ ಬಾಗಿಲು ಮುರಿದು ಹೋಗಿದೆ, ನೀರಿನ ವ್ಯವಸ್ಥೆ ಸರಿ ಇಲ್ಲ, ಸ್ವಚ್ಛತೆ ಇಲ್ಲ, ಮಹಿಳೆಯರು, ಪುರುಷರು, ಶೌಚಗೃಹ ಕಟ್ಟಡ ಹೋದರೆ ತಮಗೆ ರೋಗ ಭೀತಿ ಕಾಡುವುದೆಂಬ ಆತಂಕವೂ ಬಯಲು ಬಹಿರ್ದೆಸೆಗೆ ಹೋಗಲು ಪ್ರೇರೇಪಿಸುವಂತಿದೆ ಎಂದು ಪಲವತಿಮ್ಮನಹಳ್ಳಿ ಮುನಿಸ್ವಾಮಿ ಹೇಳಿದರು. ಕೋಟ್ 9: ಕಾರ್ಯವನ್ನು ನಿರ್ವಹಿಸದೇ ಇರುವ ಶೌಚಾಲಯಗಳನ್ನು ಸಣ್ಣ ಪುಟ್ಟ ದುರಸ್ಥಿಯನ್ನು ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ನೀಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಧಿಕಾರಿಗಳಾದ ಸತ್ಯನಾರಾಯಣ ಹೇಳಿದರು.
ಶೌಚಾಲಯಗಳು ಇಲ್ಲದ ಕಾರಣ ಜನರಿಗೆ ಬಯಲೇ ಶೌಚವೇ ಗತಿಯಾಗಿದೆ. ಕೆಲವು ಕಡೆ ಶೌಚಾಲಯಗಳಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ.ಪ್ರಭಾಕರ ರಾವ್ ಪುರಸಭೆ ಸದಸ್ಯ
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಯಗಳು ನಿರುಪಯುಕ್ತವಾಗಿವೆ.ಕೆರೆಕೋಡಿ ಜಗನ್ ಸ್ಥಳೀಯ ನಿವಾಸಿ
ಈಗಾಗಲೇ ನಿರ್ಮಿಸಿರುವ ಶೌಚಾಲಯಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿರುವುದುಸತ್ಯನಾರಾಯಣ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.