ಶ್ರೀನಿವಾಸಪುರ: ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬೆಳೆಯ ಬುಡಕ್ಕೆ ಕುಡುಗೋಲು ಹಾಕುತ್ತಿದ್ದಾರೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆ ಜಾನುವಾರು ಹೊಟ್ಟೆ ಸೇರುತ್ತಿದೆ.
ತಾಲ್ಲೂಕಿನಲ್ಲಿ ಟೊಮೆಟೊ ಬೆಳೆ ಮುಗಿದ ಬಳಿಕ, ಅದೇ ಆಧಾರ ಕಡ್ಡಿಗಳ ಮೇಲೆ ಬೀನ್ಸ್, ಆಗಲ ಕಾಯಿ ಮತ್ತು ಹೀರೇಕಾಯಿ ಬೆಳೆಯಲಾಗಿದೆ. ಆದರೆ ಈ ಮೂರೂ ಉತ್ಪನ್ನಗಳಿಗೆ ಸಗಟು ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗಿದೆ. ಉತ್ಪನ್ನವನ್ನು ಕಿತ್ತು ಮಾರುಕಟ್ಟೆಗೆ ಹಾಕಿದ ಕೂಲಿಯೂ ಸಿಗುತ್ತಿಲ್ಲ. ಇದರಿಂದ ಬೇಸತ್ತ ಕೆಲವು ರೈತರು ಫಸಲು ಸಹಿತ ಕೊಯ್ದು ದನಗಳಿಗೆ ಮೇವಾಗಿ ಬಳಸುತ್ತಿದ್ದಾರೆ.
‘ಬೀನ್ಸ್ ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ ರೂ.8 ರಿಂದ 10 ರಂತೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಮಾರಿದರೆ ಕಿತ್ತ ಕೂಲಿಯೂ ಕೈಗೆ ಬರುವುದಿಲ್ಲ. ಬೀನ್ಸ್ ಬಿಡಿಸಿದ ಕೂಲಿ, ಖಾಲಿ ಚೀಲದ ಬೆಲೆ, ಸಾಗಾಣಿಕೆ ವೆಚ್ಚ ಹಾಗೂ ಕಮೀಷನ್ ಕಳೆದರೆ ಏನೂ ಸಿಗುವುದಿಲ್ಲ. ಉಳಿದ ಬಳ್ಳಿ ತರಕಾರಿಗಳ ಬೆಲೆ ಪರಿಸ್ಥಿತಿಯೂ ಇದೇ ಆಗಿದೆ’ ಎಂಬುದು ಪನಸಮಾಕನಹಳ್ಳಿ ಗ್ರಾಮದ ರೈತ ಮಂಜುನಾಥರೆಡ್ಡಿ ಅವರ ಅಳಲು.
‘15 ಕೆ.ಜಿ ತೂಗುವ ಟೊಮೆಟೊ ಬಾಕ್ಸೊಂದು ಸಗಟು ಮಾರುಕಟ್ಟೆಯಲ್ಲಿ ₹40 ರಿಂದ ₹70 ರವರೆಗೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಮಾರಿದರೆ, ಕಿತ್ತು ಮಾರುಕಟ್ಟೆಗೆ ಸಾಗಿಸಿದ ಖರ್ಚು ಹೊರಡುವುದಿಲ್ಲ. ತೋಟದಲ್ಲಿ ಬಿಟ್ಟರೆ ಹಣ್ಣಾಗಿ ಸೋರುತ್ತದೆ. ನೆಲದ ಆರೋಗ್ಯ ಕೆಡುತ್ತದೆ’ ಎನ್ನುತ್ತಾರೆ ರೈತ ಮುನಿಯಪ್ಪ.
‘ಟೊಮೆಟೊ ಮುಗಿದ ಮೇಲೆ, ಕೃಷಿಖರ್ಚು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಅದೇ ಆಧಾರ ಕಡ್ಡಿಗಳ ಮೇಲೆ ಬೀನ್ಸ್, ಹೀರೆಕಾಯಿ, ಹಾಗಲ ಕಾಯಿ, ಚಿಕಡಿಯಂಥ ಬಳ್ಳಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ತರಕಾರಿಗಳನ್ನು ಒಂದೇ ಸಲ ಸಾವಿರಾರು ಎಕರೆಗಳಲ್ಲಿ ಬೆಳೆಯುವುದರಿಂದ ಬೇಡಿಕೆಗಿಂತ ಹೆಚ್ಚು ಪ್ರಮಾಣದ ತರಕಾರಿ ಉತ್ಪಾದನೆಯಾಗುತ್ತದೆ. ಬೇಡಿಕೆ ಕುಸಿದಾಗ ಸಹಜವಾಗಿಯೇ ಬೆಲೆ ಕುಸಿತ ಉಂಟಾಗುತ್ತದೆ’ ಎಂಬುದು ತರಕಾರಿ ವರ್ತಕರ ಅಭಿಪ್ರಾಯ.
ತರಕಾರಿಗೆ ಇಂಥ ಪರಿಸ್ಥಿತಿ ಬಂದಿರುವುದು ಇದೇ ಮೊದಲು. ಯಾವುದೇ ಸಂದರ್ಭದಲ್ಲೂ ಒಂದಲ್ಲ ಒಂದು ತರಕಾರಿಗೆ ಬೆಲೆ ಇರುತ್ತದೆ. ಆದರೆ ಎಲ್ಲ ತರಕಾರಿಗೂ ಬೆಲೆ ಕುಸಿತ ಉಂಟಾಗಿದೆ. ಆದರೆ ಬೆಲೆ ಕುಸಿತದ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಿ ಒಳ್ಳೆ ಲಾಭ ಮಾಡಿಕೊಳ್ಳುತ್ತಿದ್ದಾರೆ.
‘ಕೊತ್ತಂಬರಿ ಸೊಪ್ಪನ್ನು ಕಿತ್ತು ಸೀಮೆ ಹಸುಗಳಿಗೆ ಹಾಕಲಾಗುತ್ತಿದೆ. ಅಂಥ ಸರಕನ್ನು ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ₹20ರಂತೆ ಮಾರಾಟ ಮಾಡುತ್ತಿದ್ದಾರೆ. ಟೊಮೆಟೊ ಬೆಲೆ ಕೆಜಿಯೊಂದಕ್ಕೆ ₹20. ಎಲ್ಲ ತರಕಾರಿಗಳ ಬೆಲೆ ಪರಿಸ್ಥಿತಿಯೂ ಇದೇ ಆಗಿದೆ. ಗ್ರಾಹಕರನ್ನು ಆ ದೇವರೇ ಕಾಪಾಡಬೇಕು’ ಎನ್ನುತ್ತಾರೆ ಗ್ರಾಹಕ ಗುರುಪ್ರಸಾದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.