ADVERTISEMENT

ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಶಾಸಕಿ ಆಗ್ರಹ

ಅಂತ್ಯ ಕಾಣದ ಬೆಮಲ್‌ ಗುತ್ತಿಗೆ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:05 IST
Last Updated 14 ನವೆಂಬರ್ 2024, 14:05 IST
ಕೆಜಿಎಫ್‌ ಫೈಲೈಟ್ಸ್‌ ವೃತ್ತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಬೆಮಲ್‌ ಗುತ್ತಿಗೆ ಕಾರ್ಮಿಕರು ಗುರುವಾರ ಮಳೆಯಲ್ಲಿಯೂ ಮುಷ್ಕರ ನಡೆಸಿದರು
ಕೆಜಿಎಫ್‌ ಫೈಲೈಟ್ಸ್‌ ವೃತ್ತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಬೆಮಲ್‌ ಗುತ್ತಿಗೆ ಕಾರ್ಮಿಕರು ಗುರುವಾರ ಮಳೆಯಲ್ಲಿಯೂ ಮುಷ್ಕರ ನಡೆಸಿದರು   

ಕೆಜಿಎಫ್‌: ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ಧಿಷ್ಟಕಾಲದ ಮುಷ್ಕರ ನಡೆಸುತ್ತಿರುವ ಬೆಮಲ್‌ ಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಕೋರಿ ಶಾಸಕಿ ಎಂ.ರೂಪಕಲಾ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಜಿಎಂಎಲ್‌ ಮುಚ್ಚುವ ಪ್ರಸ್ತಾವನೆ ಇದ್ದಾಗ, ಅದಕ್ಕೆ ಬದಲಿ ವ್ಯವಸ್ಥೆಯಾಗಿ ಬೆಮಲ್‌ ಜನರಿಗೆ ಉದ್ಯೋಗ ಖಾತ್ರಿ ನೀಡಿತ್ತು. ಆಗಿನ ವ್ಯವಸ್ಥೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ವಿದ್ಯಾವಂತರಿಗೆ ಬೆಮಲ್‌ ಉದ್ಯೋಗ ನೀಡುವ ಏಕೈಕ ಸಂಸ್ಥೆಯಾಗಿತ್ತು. ಬಿಜಿಎಂಎಲ್‌ ಕಾರ್ಮಿಕರ ಕುಟುಂಬಗಳಿಗೆ ಕೂಡ ಆಸರೆಯಾಗಿತ್ತು. ಪ್ರಸ್ತುತ ಬೆಮಲ್‌ನಲ್ಲಿ ಸುಮಾರು ನಾಲ್ಕು ಸಾವಿರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಈ ಉದ್ಯೋಗಿಗಳ ಬಹಳ ದಿನಗಳ ಬೇಡಿಕೆಗಳನ್ನು ಆಡಳಿತ ವರ್ಗ ಈಡೇರಿಸಿಲ್ಲ. ಸಂದಾನಕ್ಕೂ ಮುಂದಾಗುತ್ತಿಲ್ಲ. ಈ ಹಿನ್ನೆಯಲ್ಲಿ ಗುತ್ತಿಗೆ ಕಾರ್ಮಿಕರು ಅನಿರ್ದಿಷ್ಟಕಾಲದ ಮುಷ್ಕರ ನಡೆಸುತ್ತಿದ್ದಾರೆ. 

ವೇತನ ಪರಿಷ್ಕರಣೆ, ಅರ್ಹತೆ ಇರುವ ವಿದ್ಯಾವಂತ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಉದ್ಯೋಗ ಮತ್ತು ನಿವೃತ್ತಿಯ ನಂತರ ಸಲ್ಲಬೇಕಾದ ಸವಲತ್ತುಗಳನ್ನು ಕಲ್ಪಿಸುವುದು ಕಾರ್ಮಿಕರ ಪ್ರಮುಖ ಬೇಡಿಕೆಗಳಾಗಿವೆ. ಆದರೆ, ಆಡಳಿತ ವರ್ಗ ಇವರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಕೂಡಲೇ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಿ, ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸುಮಧುರ ಬಾಂಧವ್ಯ ಏರ್ಪಡುವಂತೆ ಮಾಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ADVERTISEMENT

10ನೇ ದಿನಕ್ಕೆ: ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮುಷ್ಕರ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಮಳೆಯಲ್ಲಿಯೂ ಕಾರ್ಮಿಕರು ಮುಷ್ಕರವನ್ನು ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.