ಕೆಜಿಎಫ್: ಕೂಡಲೇ (ಸೋಮವಾರ, ನ.18) ಕೆಲಸಕ್ಕೆ ಹಾಜರಾಗದೆ ಇದ್ದಲ್ಲಿ ಬದಲಿ ಕಾರ್ಮಿಕರನ್ನು ಬಳಸಲಾಗುವುದು ಎಂದು ಬೆಮಲ್‌ಗೆ ಕಾರ್ಮಿಕರನ್ನು ಸರಬರಾಜು ಮಾಡುವ ಏಜೆನ್ಸಿ ಮುಷ್ಕರನಿರತ ಕಾರ್ಮಿಕರಿಗೆ ಬೆದರಿಕೆ ಹಾಕಿದೆ.
ಬೆಮಲ್ ಗುತ್ತಿಗೆ ಕಾರ್ಮಿಕರ ಮುಷ್ಕರ 14ನೇ ದಿನವನ್ನು ಪೂರೈಸಿದ್ದು, ಸೋಮವಾರ ಕೂಡಲೇ ಕೆಲಸಕ್ಕೆ ಹಾಜರಾಗದಿದ್ದರೆ ತಕ್ಷಣದಿಂದ ತೆಗೆದುಹಾಕಿ, ಬದಲಿ ಕಾರ್ಮಿಕರನ್ನು ನೇಮಿಸಲಾಗುವುದು ಎಂದು ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಏಜೆನ್ಸಿಗಳು ತಿಳಿಸಿವೆ.
ಈ ಎಚ್ಚರಿಕೆಯ ನಡುವೆಯೂ ಗುತ್ತಿಗೆ ಕಾರ್ಮಿಕರು ಮುಷ್ಕರವನ್ನು ಮುಂದುರೆಸಿದ್ದು, ವೇತನ ಪರಿಷ್ಕರಣೆ ಮತ್ತು ಖಾಯಂ ಉದ್ಯೋಗ ಸೇರಿದಂತೆ ಬೇಡಿಕೆ ಈಡೇರಿಸುವವರೆಗೆ ಮುಷ್ಕರವನ್ನು ಕೈಬಿಡುವುದಿಲ್ಲ ಎಂದಿದ್ದಾರೆ.
ಕಾರ್ಮಿಕರನ್ನು ಒದಗಿಸುವ ಮೂರು ಏಜೆನ್ಸಿಗಳಿಗೆ ಪತ್ರ ಬರೆದಿರುವ ಬೆಮಲ್ ಆಡಳಿತ ವರ್ಗ, ಒಪ್ಪಂದದ ಪ್ರಕಾರ ಕಾರ್ಮಿಕರನ್ನು ಒದಗಿಸದೆ ಇರುವುದರಿಂದ ಬೆಮಲ್‌ನ ದೈನಂದಿನ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಇದು ಒಪ್ಪಂದ ಉಲ್ಲಂಘನೆಯಾಗಿದ್ದು, ಕೂಡಲೇ ಮಾನವ ಸಂಪನ್ಮೂಲಗಳನ್ನು ನೀಡದಿದ್ದಲ್ಲಿ ಒಪ್ಪಂದದ ಪ್ರಕಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಪತ್ರದ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರಿಗೆ ಸೂಚನೆ ಕಳಿಸಿರುವ ಏಜೆನ್ಸಿಗಳು, ಮುಷ್ಕರವನ್ನು ನಿಲ್ಲಿಸಿ ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಬೇರೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ಮುಷ್ಕರನಿರತ ಕಾರ್ಮಿಕರ ಸೇವೆಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿವೆ.
ಮುಷ್ಕರ ನಿಲ್ಲಿಸುವುದಿಲ್ಲ
ನಮ್ಮ ಸಮಸ್ಯೆ ಈಡೇರಿಕೆಗಾಗಿ ಕೇಂದ್ರ ಸಚಿವ ಕುಮಾರಸ್ವಾಮಿ, ಸಂಸದ ಮಲ್ಲೇಶಬಾಬು ಮುತುವರ್ಜಿ ವಹಿಸಿದ್ದಾರೆ. ಆದರೆ ಆಡಳಿತ ವರ್ಗ ಕಾರ್ಮಿಕರಿಗಲ್ಲದೆ, ಜನಪ್ರತಿನಿಧಿಗಳಿಗೂ ದಿಕ್ಕು ತಪ್ಪಿಸುತ್ತಿದೆ. ಸಚಿವ ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಬೆಮಲ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದರಲ್ಲಿ ನಮ್ಮ ಪ್ರತಿನಿಧಿಗಳು ಕೂಡ ಭಾಗವಹಿಸಲು ಆಹ್ವಾನ ನೀಡಿದ್ದಾರೆ. ಅಂದು ನಡೆಯುವ ಸಭೆಯ ನಡವಳಿಕೆಯನ್ನು ಗಮನಿಸಿ, ಸಭೆ ಕಾರ್ಮಿಕರಿಗೆ ಪ್ರಯೋಜನವಾಗುವಂತಿದ್ದರೆ, ಕೆಲಸಕ್ಕೆ ಹಾಜರಾಗುತ್ತೇವೆ. ಅಲ್ಲಿಯವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಕಾರ್ಮಿಕ ಮುಖಂಡರು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಷ್ಟು ದಿನ ಹೋರಾಟ ಮಾಡಿದ್ದೇವೆ. ಇನ್ನೂ ನಾಲ್ಕು ದಿನ ಕಾಯುತ್ತೇವೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದ ಸಂಸ್ಥೆ ಹಿಂಬಾಗಿಲಿನಿಂದ ಬೇರೆ ರಾಜ್ಯದ ಕಾರ್ಮಿಕರನ್ನು ಕರೆಸುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಇದ್ದ ಒಪ್ಪಂದ ಏಪ್ರಿಲ್‌ಗೆ ಮುಕ್ತಾಯವಾಗಿದೆ. ಹೊಸ ಒಪ್ಪಂದ ಆಗಬೇಕು. ಅದು ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆಯಬೇಕು ಎಂದು ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.