ADVERTISEMENT

ಬೆಮಲ್ ನೇಮಕಾತಿ: ಹೊರ ರಾಜ್ಯದವರಿಗೆ ಮಣೆ

ಕಾರ್ಮಿಕ ಸಂಘ, ಕನ್ನಡ ಪರ ಸಂಘಟನೆಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 15:38 IST
Last Updated 7 ಡಿಸೆಂಬರ್ 2023, 15:38 IST

ಕೆಜಿಎಫ್‌: ಬೆಮಲ್‌ ಕಾರ್ಖಾನೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿಗೆ ಆಡಳಿತ ವರ್ಗ ಉತ್ತರ ಭಾರತೀಯರಿಗೆ ಮಣಿ ಹಾಕುತ್ತಿದ್ದು, ಆ ಧೋರಣೆ ಕುರಿತು ಬೆಮಲ್‌ ಕಾರ್ಮಿಕ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಬೆಮಲ್‌ನಲ್ಲಿ 119 ಗ್ರೂಪ್‌ ಸಿ ಅಧಿಕಾರಿಗಳ ಹುದ್ದೆಗಳು ಖಾಲಿ ಇದ್ದು, ಅದಕ್ಕೆ 4,300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅದರಲ್ಲಿ ಮೆಕಾನಿಕಲ್‌ 52, ಎಲೆಕ್ಟ್ರಿಕಲ್‌ 27, ಸಿವಿಲ್‌ 7, ಮೆಷಿನಿಷ್ಟ್‌ 16, ಟರ್ನರ್‌ 16, ಸ್ಟಾಪ್‌ ನರ್ಸ್‌ 1 ಹುದ್ದೆಗಳಿವೆ. ಇದಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಕರೆದಿದ್ದು, ರಾಜ್ಯಕ್ಕಿಂತ ಹೊರ ರಾಜ್ಯದವರೇ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅದರಲ್ಲೂ ಕೋಲ್ಕತ್ತಾದಿಂದ ಹೆಚ್ಚಿನ ಅರ್ಜಿಗಳು ಬಂದಿವೆ. ಬಿಜಿಎಂಎಲ್‌ ಮುಚ್ಚಿದ ನಂತರ ಬೆಮಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬುದು ಸ್ಥಳೀಯರ  ಆಗ್ರಹವಾಗಿತ್ತು. ಅದಕ್ಕಾಗಿ ಹಲವಾರು ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿವೆ. ಇಂತಹ ಸಂದರ್ಭದಲ್ಲಿ ಬಹಳ ವರ್ಷಗಳ ಮೇಲೆ ನೇಮಕಾತಿ ನಡೆಯುತ್ತಿದ್ದು, ಸ್ಥಳೀಯರು ಅವಕಾಶ ವಂಚಿತರಾಗುತ್ತಾರೆ ಎಂಬ ಭೀತಿ ಸ್ಥಳೀಯರಲ್ಲಿ ಉಂಟಾಗಿದೆ.

ADVERTISEMENT

ಬೆಮಲ್‌ ನಿರ್ದೇಶಕ ಮಂಡಳಿಯಲ್ಲಿ ಉತ್ತರ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮತ್ತು ಅವರ ನಿರ್ಧಾರವೇ ಅಂತಿಮವಾಗುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುವುದಿಲ್ಲ ಎಂಬ ಸ್ಥಳೀಯರಲ್ಲಿ ಭಾವನೆ ಮೂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಮಿಕ ಸಂಘ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಈಚೆಗೆ ನಡೆದ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘದ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಸಂಘದ ಪದಾಧಿಕಾರಿಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ಕೊಡಬೇಕು ಎಂದು ವಾದ ಮಂಡಿಸಿದರು. ಅದಕ್ಕೆ ಸಂಬಂಧಿಸಿದಂತೆ ಪತ್ರವನ್ನು ಸಹ ನೀಡಲಾಗಿದೆ ಎಂದು ಬೆಮಲ್‌ ಕಾರ್ಮಿಕ ಸಂಘದ ಅಧ್ಯಕ್ಷ ರಾಮಚಂದ್ರ ರೆಡ್ಡಿ ತಿಳಿಸಿದ್ದಾರೆ.

ಡ್ರೈವರ್‌, ಜವಾನ ಮತ್ತಿತರ ಡಿ ಗ್ರೂಪ್ ಹುದ್ದೆಗಳಿಗೆ ರಾಜ್ಯದವರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬ ಸುತ್ತೋಲೆ ಇದೆ. ಬೆಮಲ್‌ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಅಖಿಲ ಭಾರತ ಮಟ್ಟದಲ್ಲಿಯೇ ನೇಮಕಾತಿ ನಡೆಯುತ್ತದೆ. ಅದಕ್ಕೆ ಕೇಂದ್ರ ಸರ್ಕಾರದ ಸಮ್ಮತಿಯೂ ಇದೆ.

ಬೆಮಲ್‌ ನಿರ್ದೇಶಕರು ರಾಜ್ಯದ ಜನತೆಗೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಈಗ ಡಿ ಗ್ರೂಪ್ ವೃಂದದ ನೇಮಕಾತಿ ಬೆಮಲ್‌ನಲ್ಲಿ ನಡೆಯುತ್ತಿಲ್ಲ. ಅಧಿಕಾರಿಗಳ ಹುದ್ದೆಗಳಿಗೆ ಉತ್ತರ ಭಾರತೀಯರನ್ನೇ ನೇಮಕ ಮಾಡುತ್ತಿದ್ದಾರೆ. ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸುವುದರಿಂದ ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ಕನ್ನಡ ಶಕ್ತಿ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಆರೋಪಿಸಿದರು.

ಬೆಮಲ್‌ನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗುತ್ತಿಗೆ ಮತ್ತು ತರಬೇತಿ ಪಡೆದ ಕಾರ್ಮಿಕರಿದ್ದು, ಅವರಿಗೆ ಕೆಲಸ ಕಾಯಂ ಮಾಡಬೇಕೆಂದು ಹಲವಾರು ಕಾರ್ಮಿಕರ ಸಂಘಟನೆಗಳು ಹೋರಾಟ ನಡೆಸಿಕೊಂಡು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಬೆಮಲ್‌ ಹೊರ ರಾಜ್ಯದವರಿಗೆ ಆದ್ಯತೆ ಕೊಡುತ್ತಿರುವುದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳೀಯರಿಗೆ ನೇಮಕಾತಿ ನೀಡದೆ ಅನ್ಯ ರಾಜ್ಯದವರಿಗೆ ಹುದ್ದೆಗಳನ್ನು ನೀಡಿದರೆ ಬೆಮಲ್ ಮುಖ್ಯ ದ್ವಾರಕ್ಕೆ ಬೀಗ ಹಾಕುವುದಾಗಿ ಸಿಪಿಐ ಮುಖಂಡ ಜ್ಯೋತಿಬಸು ಆಡಳಿತ ವರ್ಗಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.