ADVERTISEMENT

ಮುಳಬಾಗಿಲು: ವಕ್ಫ್ ಬೋರ್ಡ್ ವಿರುದ್ದ ನ. 26 ಬೆಂಗಳೂರು ಚಲೋ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:34 IST
Last Updated 15 ನವೆಂಬರ್ 2024, 15:34 IST
ವಕ್ಫ್‌ ಬೋರ್ಡ್ ವಿರುದ್ಧ ಭಾರತೀಯ ಕಿಸಾನ್ ಸಂಘದಿಂದ ನವೆಂಬರ್ 26ರಂದು ಹಮ್ಮಿಕೊಂಡಿರುವ ಬೆಂಗಳೂರು ಚಲೋ ಸಂಬಂಧ ಸಭೆ ನಡೆಯಿತು
ವಕ್ಫ್‌ ಬೋರ್ಡ್ ವಿರುದ್ಧ ಭಾರತೀಯ ಕಿಸಾನ್ ಸಂಘದಿಂದ ನವೆಂಬರ್ 26ರಂದು ಹಮ್ಮಿಕೊಂಡಿರುವ ಬೆಂಗಳೂರು ಚಲೋ ಸಂಬಂಧ ಸಭೆ ನಡೆಯಿತು    

ಮುಳಬಾಗಿಲು: ರೈತರು ಈ ನೆಲದ ಮೂಲ ನಿವಾಸಿಗಳು. ಭೂಮಿಯನ್ನೇ ನಂಬಿ ಇರುವ ರೈತರಿಗೆ ವಕ್ಫ್‌ ಕಾಯ್ದೆ ಕಂಟಕವಾಗಿದೆ. ಸರ್ಕಾರ ಕೂಡಲೇ ವಕ್ಫ್ ಕಾಯ್ದೆ ರದ್ದು ಮಾಡಿ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಎ.ಅಪ್ಪಾಜಿಗೌಡ ಹೇಳಿದರು.

ಶುಕ್ರವಾರ ನಡೆದ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯ ಕೋಲಾರ ಮತ್ತು ಮಾಲೂರು ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಕೆಲ ದೇವಾಲಯ, ಮಠ, ಸರ್ಕಾರಿ ಶಾಲೆ ಹಾಗೂ ಜಮೀನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಭಾರತೀಯ ಕಿಸಾನ್ ಸಂಘ ವಿರೋಧಿಸಿ ಹೋರಾಟ ನಡೆಸುವುದರ ಜೊತೆಗೆ ನವೆಂಬರ್ 26ರಂದು ಬೆಂಗಳೂರು ಚಲೋ ರೈತ ಗರ್ಜನೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಇದೇ ರ್‍ಯಾಲಿಗೆ ಮುಳಬಾಗಿಲು ತಾಲ್ಲೂಕಿನಿಂದ ಸ್ವಯಂ ಪ್ರೇರಣೆಯೊಂದಿಗೆ 500ಕ್ಕೂ ಹೆಚ್ಚಿನ ರೈತರು ತೆರಳುತ್ತಿದ್ದು ವಕ್ಫ್‌ ನೀತಿ ಸರ್ಕಾರ ಸಂಪೂರ್ಣವಾಗಿ ಕೈ ಬಿಡುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಉಗಿಣಿ ಆರ್.ನಾರಾಯಣಗೌಡ ಮಾತನಾಡಿ, ವಕ್ಫ್‌ನಿಂದ ರೈತರಿಗೆ ಗಂಡಾಂತರ ಎದುರಾಗಿದೆ. ಎಲ್ಲ ರೈತಪರ, ಕನ್ನಡಪರ, ದಲಿತ ಪರ ಸಂಘಟನೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಮಂಡಿ ಮಾಲೀಕರು, ಕೃಷಿ ಕಾರ್ಮಿಕರು, ಕಟ್ಟಡ ಇತರ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ರೈತರು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ರ್‍ಯಾಲಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಖಜಾಂಚಿ ವಿ.ಜಯಪ್ಪ ಮಾತನಾಡಿ, ಮುಖ್ಯಮಂತ್ರಿ ವಕ್ಫ್ ಕಾಯ್ದೆ ತಡೆಹಿಡಿಯಲಾಗಿದೆ ಎಂದು ಹೇಳಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿಧಾನಸಭೆ ವಿಶೇಷ ಅಧಿವೇಶನ ಕರೆದು ರೈತ ಹಾಗೂ ಸಮಾಜ ವಿರೋಧಿ ಭಾವನಾತ್ಮಕ ಸಂಬಂಧ ಹಾಳು ಮಾಡುತ್ತಿರುವ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಹೇಳಿದರು.

ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಖಜಾಂಚಿ ವಿ.ಜಯಪ್ಪ, ಜಿಲ್ಲಾ ಮಾಜಿ ಅಧ್ಯಕ್ಷ ಕೆ.ರೋಹನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಸತೀಶ್ ಕುಮಾರ್, ನಗರ ಘಟಕದ ಅಧ್ಯಕ್ಷ ಬೆಮೆಲ್ ಎನ್.ಎಂ.ಧನಂಜಯ, ಆರ್.ಶ್ರೀನಿವಾಸ್, ರಮೇಶ್, ಕೆ.ಎನ್.ಶ್ರೀರಾಮ್, ಲಿಂಗಪ್ಪ, ಎಚ್.ಗೊಲ್ಲಹಳ್ಳಿ ಜಯರಾಮ್, ಮೇಲಾಗಾಣಿ ರಮೇಶ್, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.