ADVERTISEMENT

ಉತ್ತರ ವಿ.ವಿ | ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ; ಸೆ.14ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 20:14 IST
Last Updated 11 ಸೆಪ್ಟೆಂಬರ್ 2024, 20:14 IST

ಕೋಲಾರ: ಯುಯುಸಿಎಂಎಸ್‌ ತಂತ್ರಾಂಶದಲ್ಲಿ ತಾಂತ್ರಿಕ ತೊಂದರೆ ಉಂಟಾದ ಕಾರಣ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ (ಪ್ರಮುಖವಾಗಿ ಎಂ.ಎ ಇತಿಹಾಸ) ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ದಿನವಿಡೀ ಪರದಾಡಿದರು.

ವಿಶ್ವವಿದ್ಯಾಲಯ ಈ ಮೊದಲು ಘೋಷಿಸಿದಂತೆ ದಂಡವಿಲ್ಲದೆ ಅರ್ಜಿ ಸಲ್ಲಿಸಲು ಸೆ.12 ಕಡೆಯ ದಿನವಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದರು. ಪ್ರಮುಖವಾಗಿ ಎಂ.ಎ ಇತಿಹಾಸ ಕೋರ್ಸ್‌ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇತಿಹಾಸ ಬೋಧಿಸುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ತಂತ್ರಾಂಶ ಸರಿಯಾಗಿ ಸ್ಪಂದಿಸಿಲ್ಲ. ಈ ಸಂಬಂಧ ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದ ಭಾಗದ ವಿದ್ಯಾರ್ಥಿಗಳು ದೂರಿದರು.

ಈ ಕಾರಣ ಅರ್ಜಿ ಸಲ್ಲಿಸಲು ದಿನಾಂಕವನ್ನು ಸೆ.14ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ವಿಶ್ವವಿದ್ಯಾಲಯ ನೀಡಿರುವ ವೆಬ್‍ಸೈಟ್‌ ಲಿಂಕ್ (https://uucms.karnataka.gov.in/) ಬಳಸಿಯೇ ಅರ್ಜಿ ಸಲ್ಲಿಸಬೇಕಿದೆ.

ADVERTISEMENT

‘ತಂತ್ರಾಂಶ ಸರಿ ಹೋಗಿದ್ದು, ಸೆ.14ರವರೆಗೆ ದಂಡವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಉತ್ತರ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾದ (ಆಡಳಿತ) ಪ್ರೊ.ಡಿ.ಕುಮುದಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.