ADVERTISEMENT

ಬೆಂಗಳೂರು ಉತ್ತರ ವಿ.ವಿ: ವೆಬ್‌ಸೈಟ್‌ ಹ್ಯಾಕ್‌ ಅಲ್ಲ; ಒಳಗಿನವರ ಸಂಚು?

ಪೊಲೀಸರು, ಮಾಜಿ ಉದ್ಯೋಗಿಗಳಿಂದ ಅನುಮಾನ–ತನಿಖೆಗೆ ತಂಡ ರಚನೆ

ಕೆ.ಓಂಕಾರ ಮೂರ್ತಿ
Published 24 ಸೆಪ್ಟೆಂಬರ್ 2024, 6:21 IST
Last Updated 24 ಸೆಪ್ಟೆಂಬರ್ 2024, 6:21 IST
ನಿಖಿಲ್‌ ಬಿ.
ನಿಖಿಲ್‌ ಬಿ.   

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯುಯುಸಿಎಂಎಸ್‌ ತಂತ್ರಾಂಶದ ವೆಬ್‌ಸೈಟ್‌ ಹ್ಯಾಕ್‌ ಪ್ರಕರಣದಲ್ಲಿ ಹಲವು ಅನುಮಾನ ವ್ಯಕ್ತವಾಗುತ್ತಿದ್ದು, ವಿಶ್ವವಿದ್ಯಾಲಯದ ಒಳಗಿನವರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ.

ಜಿಲ್ಲಾ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ವೆಬ್‌ಸೈಟ್‌ ಹ್ಯಾಕ್‌ ಆಗಿರುವ ಸಾಧ್ಯತೆ ಕಡಿಮೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ ಅವರು ಹೆಚ್ಚಿನ ತನಿಖೆ ನಡೆಸಲು ಕೋಲಾರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್‌) ಇನ್‌ಸ್ಟೆಕ್ಟರ್‌ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಪೋರ್ಟಲ್‌ ನಿರ್ವಹಣೆಯಲ್ಲಿ ಯಾವ ರೀತಿ ತೊಡಕು ಉಂಟಾಗಿರುವುದು ಎಂಬುದರ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಸೂಚಿಸಿದ್ದಾರೆ.

ADVERTISEMENT

ಕೆಲ ವ್ಯಕ್ತಿಗಳು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹಣ ಪಡೆದು ಯುಯುಸಿಎಂಎಸ್‌ ವೆಬ್‌ಸೈಟ್‌ಗೆ ಕನ್ನ ಹಾಕಿ ಅಂಕ ಬದಲಾವಣೆ ಮಾಡುವುದು ಹಾಗೂ ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಿಸುವ ಕೃತ್ಯದಲ್ಲಿ ತೊಡಗಿರುವುದು ಗೊತ್ತಾಗಿದೆ. ವೆಬ್‌ಸೈಟ್‌ ಹಾಕ್‌ ಆಗಿದೆ ಎಂಬುದಾಗಿ ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ತಿಪ್ಪೇಸ್ವಾಮಿ ಸೆ.20ರಂದು ಸೆನ್‌ ಠಾಣೆಗೆ ದೂರು ನೀಡಿದ್ದರು.

ಕಿಡಿಗೇಡಿಗಳು ಯುಯುಸಿಎಂಎಸ್‌ ವೆಬ್‌ಸೈಟ್‌ಗೆ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಲಾಗಿನ್‌ ಆಗಿರುವ ಮಾಹಿತಿ ಇದೆ. ಲಾಗಿನ್ ಆಗಿರುವವರ ಮೊಬೈಲ್‌ ನಂಬರ್‌ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕುಲಸಚಿವರು ಪೊಲೀಸರಿಗೆ ಕೊಟ್ಟಿದ್ದಾರೆ.

ಹೊರಗಿನ ಕಿಡಿಗೇಡಿಗಳ ಜೊತೆ ವಿಶ್ವವಿದ್ಯಾಲಯದ ಒಳಗಿನವರೇ ಕೈಜೋಡಿಸಿ ಈ ಕೃತ್ಯ ಎಸಗಲು ಕಾರಣರಾಗಿದ್ದಾರೆ ಎಂಬುದಾಗಿ ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿ ಹಾಗೂ ಮಾಜಿ ಉದ್ಯೋಗಿಗಳು ಹೇಳುತ್ತಿದ್ದಾರೆ. ‘ಕೆಲ ಅಧಿಕಾರಿಗಳು ತಮ್ಮ ರಕ್ಷಣೆಗಾಗಿ ದೂರು ದಾಖಲಿಸಿದ್ದಾರೆ, ದೊಡ್ಡವರು ಉಳಿದುಕೊಳ್ಳಲು ಚಿಕ್ಕವರು ಸಿಕ್ಕಿಬೀಳುತ್ತಾರೆ ಅಷ್ಟೆ. ಒಳಗಿನವರ ಕೈವಾಡವಿಲ್ಲದೇ ವೆಬ್‌ಸೈಟ್‌ ಯೂಸರ್‌ ಐಡಿ, ಪಾಸ್‌ವರ್ಡ್‌ ಹೊರಗಿನವರ ಕೈಗೆ ಸಿಗಲ್ಲ’ ಎಂದು ಆರೋಪಿಸಿದ್ದಾರೆ.

‘‌ಎಂಬಿಎ ಹಾಗೂ ಎಂಸಿಎ ಅಂಕಪಟ್ಟಿ ತಿದ್ದುಪಡಿ ಮಾಡುವುದು ವರ್ಷದಿಂದ ನಡೆದಿದೆ. ಅಲ್ಲದೇ, ನಕಲಿ ಅಂಕಪಟ್ಟಿ ಸಂಬಂಧ ಈವರೆಗೆ ಕ್ರಮ ಆಗಿಲ್ಲ’ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ನಡೆಸುತ್ತಿರುವ ಯುನಿಫೈಡ್‌ ಯೂನಿವರ್ಸಿಟಿ ಕಾಲೇಜ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನ (ಯುಯುಸಿಎಂಎಸ್‌) ಅಧಿಕೃತ ಜಾಲತಾಣವನ್ನು ಉತ್ತರ ವಿಶ್ವವಿದ್ಯಾಲಯವು ಬಳಸುತ್ತಿದ್ದು, ಈ ತಂತ್ರಾಂಶದಡಿ ಆನ್‌ಲೈನ್‌ನಲ್ಲಿ ಪರೀಕ್ಷಾ ಚಟುವಟಿಕೆಗಳನ್ನು ನಡೆಸುತ್ತಿದೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದಾಖಲಾತಿ ನಮೂದು, ಅಂಕಪಟ್ಟಿ ನಮೂದು, ಫಲಿತಾಂಶ ಪ್ರಕಟ ಮಾಡುವ ಕೆಲಸವನ್ನು ಯುಯುಸಿಎಂಎಸ್‌ ತಂತ್ರಾಂಶ ನಿರ್ವಹಿಸುತ್ತದೆ.

ಯುಯುಸಿಎಂಎಸ್‌ ತಂತ್ರಾಂಶದ ವೆಬ್‌ಸೈಟ್‌ ಹ್ಯಾಕ್‌ ಎಂದು ದೂರು ವಿಶ್ವವಿದ್ಯಾಲಯದ ಒಳಗಿನವರ ಕೈವಾಡ ಶಂಕೆ ಪೊಲೀಸರಿಗೆ ಕುಲಸಚಿವರಿಂದ ಮಾಹಿತಿ ರವಾನೆ
ಹ್ಯಾಕ್‌ ಆಗಿರುವ ಸಾಧ್ಯತೆ ಕಡಿಮೆ
ಯುಯುಸಿಎಂಎಸ್‌ ಪೋರ್ಟಲ್‌ ಹ್ಯಾಕ್‌ ಆಗಿರುವ ಸಂಬಂಧ ದೂರು ಬಂದಿದ್ದು ಐಟಿ ಕಾಯ್ದೆ ಹಾಗೂ ಬಿಎನ್‌ಎಸ್‌ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಹ್ಯಾಕ್‌ ಆಗಿರುವ ಸಾಧ್ಯತೆ ಕಡಿಮೆ ಎಂಬುದು ಕಂಡುಬಂದಿದೆ. ಯಾರು ಭಾಗಿಯಾಗಿರಬಹುದು ಎಂಬುದನ್ನು ಪತ್ತೆ ಹಚ್ಚಲು ಸೆಂಟರ್‌ ಫಾರ್‌ ಇ–ಗವರ್‌ನೆನ್ಸ್‌ ಜೊತೆ ಚರ್ಚಿಸಿ ಮಾಹಿತಿ ಪಡೆಯಲಾಗುತ್ತಿದೆ. ಅತಿ ಶೀಘ್ರದಲ್ಲೇ ನಿಜಾಂಶ ಹೊರಗೆಳೆದು ಕೃತ್ಯ ಎಸಗಿದವರನ್ನು ಬಂಧಿಸುತ್ತೇವೆ ನಿಖಿಲ್ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ
ಯಾರ ರಕ್ಷಣೆಯೂ ಇಲ್ಲ; ಪೊಲೀಸರಿಗೆ ಮಾಹಿತಿ ರವಾನೆ
ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವಿಶ್ವವಿದ್ಯಾಲಯದವರು ಆಗಿದ್ದರೂ ಬಿಡಲ್ಲ ನಮ್ಮ ಬಳಿ ಇರುವ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದೇವೆ. ನಮ್ಮ ಬಳಿ ಎಲ್ಲಾ ಅಂಕಪಟ್ಟಿಯ ಮೂಲ ಪ್ರತಿಗಳು ಇವೆ. ಅವುಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿದರೆ ಎಲ್ಲೆಲ್ಲಿ ತಿದ್ದುಪಡಿ ಮಾಡಲಾಗಿದೆ ಯಾರು ಪಾಸ್‌ ಯಾರು ಫೇಲ್‌ ಎಂಬುದು ಗೊತ್ತಾಗುತ್ತದೆ. ವೆಬ್‌ಸೈಟ್‌ಗೆ ಮೂರು ಹಂತದ ಭದ್ರತೆ ಇದ್ದರೂ ಹ್ಯಾಕ್‌ ಆಗಿದೆ. ಸದ್ಯಕ್ಕೆ ಪಾಸ್ವರ್ಡ್‌ ಬದಲಾವಣೆ ಪದ್ಧತಿಯನ್ನು ಡಿಸೇಬಲ್‌ ಮಾಡಿಸಿದ್ದೇವೆ. ಇನ್ನುಮುಂದೆ ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್‌ ಮುಖ್ಯಸ್ಥರಿಗೆ ಕರೆ ಮಾಡಿ ಪಾಸ್ವರ್ಡ್‌ ಬದಲಾವಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಹಿಂದೆ ಮೊಬೈಲ್‌ಗೆ ಓಟಿಪಿ ಬಂದರೆ ಪಾಸ್ವರ್ಡ್‌ ಬದಲಾಯಿಸಿಕೊಳ್ಳಬಹುದಿತ್ತು ಪ್ರೊ.ಕೆ.ತಿಪ್ಪೇಸ್ವಾಮಿ ಕುಲಸಚಿವ (ಮೌಲ್ಯಮಾಪನ) ಬೆಂಗಳೂರು ಉತ್ತರ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.