ADVERTISEMENT

ಕಾಲಹರಣ ಬಿಟ್ಟು ಶಾಲೆಗೆ ಭೇಟಿ ಕೊಡಿ: ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್

ಸಭೆಯಲ್ಲಿ ಬಿಇಒಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 15:53 IST
Last Updated 10 ಮಾರ್ಚ್ 2021, 15:53 IST
ಕೋಲಾರದಲ್ಲಿ ಬುಧವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಆಯುಕ್ತ ಅನ್ಬುಕುಮಾರ್‌ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಆಯುಕ್ತ ಅನ್ಬುಕುಮಾರ್‌ ಮಾತನಾಡಿದರು.   

ಕೋಲಾರ: ‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯಲ್ಲಿ ಕಾಲಹರಣ ಮಾಡುವ ಬದಲು ಶಾಲೆಗಳಿಗೆ ಭೇಟಿ ಕೊಟ್ಟು ಮೂಲಸೌಕರ್ಯ ಮತ್ತು ಶಿಕ್ಷಕರ ಪಠ್ಯಕ್ರಮ ಸಾಧನೆ ಪರಿಶೀಲಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌ ಬಿಇಒಗಳಿಗೆ ತಾಕೀತು ಮಾಡಿದರು.

ಇಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬಿಇಒಗಳು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದರ ಜತೆಗೆ ಸಂಶೋಧನೆ ಹಾಗೂ ವಿನೂತನ ಆವಿಷ್ಕಾರಕ್ಕೆ ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರತಿ ಶಾಲೆಗೆ ಕುಡಿಯುವ ನೀರು, ಶೌಚಾಲಯ, ಅಡುಗೆ ಮನೆ, ಕಾಂಪೌಂಡ್, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಪೀಠೋಪಕರಣ ಸೌಕರ್ಯ ಕಲ್ಪಿಸುವ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಾಲೆಗಳಲ್ಲಿ ಮೂಲಸೌಕರ್ಯ ಸಮಸ್ಯೆ ಪರಿಹರಿಸಲು ಸರ್ಕಾರದ ಯೋಜನೆಗಳ ಜತೆಗೆ ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ನೆರವು ಪಡೆಯಿರಿ’ ಎಂದು ಸಲಹೆ ನೀಡಿದರು.

ADVERTISEMENT

‘ಶಾಲೆಗಳ ಮೂಲಸೌಕರ್ಯ ಮತ್ತು ಫಲಿತಾಂಶ ಗಮನಿಸಿ ಎ, ಬಿ, ಸಿ, ಡಿ ಮಾದರಿಯಲ್ಲಿ ವಿಂಗಡಿಸಬೇಕು. ಮೂಲಸೌಕರ್ಯಕ್ಕೆ ಅಂಕ ನಿಗದಿಪಡಿಸಿ ಸ್ಥಾನ ಗುರುತಿಸಬೇಕು. ಫಲಿತಾಂಶ ಕುಸಿದರೆ ಅದಕ್ಕೆ ಕಾರಣವೇನು, ಇಲಾಖೆಯಿಂದ ಆಗಿರುವ ಕೊರತೆ ಬಗ್ಗೆ ಪರಿಶೀಲಿಸಬೇಕು. ಬೋಧನಾ ಕ್ರಮದಲ್ಲಿ ಲೋಪವಿದ್ದರೆ ಶಿಕ್ಷಕರಿಗೆ ತರಬೇತಿ ನೀಡಬೇಕು’ ಎಂದು ಸೂಚಿಸಿದರು.

ಗುಣಮಟ್ಟ ಕಾಪಾಡಿ: ‘ಪ್ರತಿ ಶಾಲೆ ಎ ಮತ್ತು ಬಿ ಸ್ಥಾನದಲ್ಲಿ ಇರುವಂತೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ನರೇಗಾ ಅನುದಾನದಲ್ಲಿ ಶಾಲಾ ಕಾಪೌಂಡ್ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ವೃತ್ತಿಯಲ್ಲಿ ಸಾಧನೆ ಮಾಡುವ ಇಚ್ಛಾಶಕ್ತಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಿ’ ಎಂದು ಕಿವಿಮಾತು ಹೇಳಿದರು.

‘ಶಾಲೆಗಳ ಅಗತ್ಯತೆ ಸಂಬಂಧ ಕ್ರಿಯಾಯೋಜನೆ ರೂಪಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮೂಲಕ ಸರ್ಕಾರದ ಗಮನಕ್ಕೆ ತರಬೇಕು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿನ ಕೊರತೆಗಳನ್ನು ಪಟ್ಟಿ ಮಾಡಿ ಒಂದೇ ಬಾರಿ ಅನುದಾನ ಮಂಜೂರು ಮಾಡಿಸಿಕೊಳ್ಳಿ. ಸಿ ಮತ್ತು ಡಿ ಸ್ಥಾನದಲ್ಲಿರುವ ಶಾಲೆಗಳನ್ನು ಎ ಹಾಗೂ ಬಿ ಮಟ್ಟಕ್ಕೆ ತರಲು ಶ್ರಮವಹಿಸಿ’ ಎಂದು ಸಲಹೆ ನೀಡಿದರು.

1,236 ಶಾಲೆ: ‘ಜಿಲ್ಲೆಯಲ್ಲಿ 1,236 ಶಾಲೆಗಳಿವೆ. ಈ ಪೈಕಿ ಎ ಸ್ಥಾನದಲ್ಲಿ 420, ಬಿ ಸ್ಥಾನದಲ್ಲಿ 676 ಶಾಲೆಗಳಿವೆ. ಉಳಿದ ಶಾಲೆಗಳು ಸಿ ಮತ್ತು ಡಿ ಸ್ಥಾನದಲ್ಲಿವೆ’ ಎಂದು ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾಹಿತಿ ನೀಡಿದರು.

‘ಬಿಇಒಗಳು ದತ್ತು ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾದರಿ ಶಾಲೆಗಳಾಗಿ ಪರಿವರ್ತಿಸಬೇಕು. ದತ್ತು ಶಾಲೆಗಳಿಗೆ ಬಿಡುಗಡೆಯಾಗುವ ವಿಶೇಷ ಅನುದಾನವನ್ನು ಸದ್ಬಳಕೆ ಮಾಡಿ. ಈ ಶಾಲೆಗಳ ಉಸ್ತುವಾರಿ ಸಮರ್ಪಕವಾಗಿ ನಿರ್ವಹಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದರು.‌

‘ಶಾಲೆಯ ಸಮಸ್ಯೆಗಳನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಥವಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು’ ಎಂದರು ಸಲಹೆ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜಗೌಡ, ಗಿರಿಜಾದೇವಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.