ಸರೇಶ.ಎಂ
ಬೇತಮಂಗಲ: ಕೆಜಿಎಫ್ ತಾಲ್ಲೂಕಿನ ಗೋಪೇನಹಳ್ಳಿ ಯುವಕ ಸಂಕೀರ್ಥ ಕ್ರೀಡೆ ಮತ್ತು ಸಾಂಸ್ಕೃತಿ ಕ್ಷೇತ್ರದಲ್ಲಿ ಸಾಧನೆಯ ಭರವಸೆ ಮೂಡಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ಪ್ರತಿಭೆಯ ಮೂಲಕ ಕೊಕ್ಕೊ ಮತ್ತು ಡೊಳ್ಳು ಕುಣಿತಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ದೊರೆಸ್ವಾಮಿ ಹಾಗೂ ಭುವನೇಶ್ವರಿ ದಂಪತಿಯ ನಾಲ್ಕನೇ ಪುತ್ರ ಸಂಕೀರ್ಥ ಸದ್ಯ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರದಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದಾರೆ.
ಕಷ್ಟಗಳೊಂದಿಗೆ ಬೆಳೆದು, ಸರ್ಕಾರಿ ಶಾಲಾ ಹಾಗೂ ಕಾಲೇಜಿನಲ್ಲಿ ಶಿಕ್ಷಣ ಪಡೆದು ಕೊಕ್ಕೊ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಸಂಕೀರ್ಥಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ವರೆಗೂ ಕ್ರೀಡೆಯ ಗಂಧ ಗಾಳಿ ತಿಳಿದಿರಲಿಲ್ಲ. 2011-12ನೇ ಸಾಲಿನಲ್ಲಿ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪಿಯುಸಿಗೆ ದಾಖಲಾದ ಮೇಲೆ ಕೊಕ್ಕೊ ಆಕರ್ಷಿಸಿತು. ಸ್ನೇಹಿತರು ಮತ್ತು ಉಪನ್ಯಾಸಕ ಎನ್.ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಕ್ಕೊ ಅಭ್ಯಾಸ ಆರಂಭಿಸಿದರು.
ಅಲ್ಲಿ ಅವರ ಕ್ರೀಡಾ ಪಯಣಕ್ಕೆ ಚಾಲನೆ ದೊರೆಯಿತು. ಓದಿನೊಂದಿಗೆ ತಾಲ್ಲೂಕು, ಜಿಲ್ಲಾ ಮತ್ತು ವಲಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಜ್ಯಮಟ್ಟದ ಪಂದ್ಯ ಆಯ್ಕೆ ಆಗಿ, ಅಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಸಂಕೀರ್ಥ ಪ್ರತಿನಿಧಿಸಿದ ತಂಡಗಳಲ್ಲೆ ಕೊಕ್ಕೊ ಪಂದ್ಯದಲ್ಲಿ ಪ್ರಶಸ್ತಿ ಗಳಿಸಿದೆ. ಈ ಮೂಲಕ ಗ್ರಾಮಕ್ಕೆ ಕೀರ್ತೀ ತಂದಿದ್ದಾನೆ ಎನ್ನುತ್ತಾರೆ ಗೋಪೇನಹಳ್ಳಿ ಗ್ರಾಮಸ್ಥರು.
ಬೇತಮಂಗಲ ಹೋಬಳಿಯ ಬಂಗಾರು ತಿರುಪತಿ ದೇವಾಲಯದ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾಖಲಾದ ಬಳಿಕ ಕೊಕ್ಕೊದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಾಣವಾಯಿತು. ಆಗ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸತೀಶ್ ಅವರ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಅಂತರ ಕಾಲೇಜು ಹಾಗೂ ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಕ್ರೀಡಾ ಕೂಟಗಳಲ್ಲಿ ತಮ್ಮ ತಂಡವನ್ನು ಜಯಸುವಲ್ಲಿ ಯಶಸ್ವಿ ಆಗಿದ್ದಾರೆ.
2012ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ರಾಜ್ಯವನ್ನು ಸಂಕೀರ್ಥ ಪ್ರತಿನಿಧಿಸಿದ್ದರು.
2012ರಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟ ಕೊಕ್ಕೊ ಪಂದ್ಯದಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವೀತಿಯ ಬಹುಮಾನ ಪಡೆಯಲು ಮುಖ್ಯ ಪಾತ್ರ ವಹಿಸಿದರು. 2016ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿಯಲ್ಲಿ ಭಾಗವಹಿಸಿ ಬೆಂಗಳೂರು ವಿಶ್ವವಿದ್ಯಾಲಯ ತಂಡ ಪ್ರತಿನಿಧಿಸಿದ್ದರು. 2017ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ. 2019ರಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಕೊಕ್ಕೊ ಹಾಗೂ ಅಥ್ಲೆಟಿಕ್ಸ್ ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಶ್ರದ್ಧೆ ಕಠಿಣ ಪರಿಶ್ರಮದಿಂದ ಸಂಕೀರ್ಥ ಕೊಕ್ಕೊದಲ್ಲಿ ಸಾಧನೆ ತೋರಿದ್ದಾರೆ. ಕಲಿಕೆಯ ತುಡಿತ ಆತನನ್ನು ಇಲ್ಲಿ ವರೆಗೆ ತಂದಿದೆ
-ಬಿ.ಪಿ. ಸತೀಶ್ ದೈಹಿಕ ಶಿಕ್ಷಣ ನಿರ್ದೇಶಕ
ಸಂಕೀರ್ಥನಲ್ಲಿರುವ ಪ್ರತಿಭೆಯಿಂದ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ
-ಡೊಳ್ಳು ಚಂದ್ರು ಅಂತರಾಷ್ಟ್ರೀಯ ಕಲಾವಿದ
ಸಂಕೀರ್ಥ ಪದವಿ ಶಿಕ್ಷಣ ಮುಗಿಸಿದ ಬಳಿಕ ಉನ್ನತ ಶಿಕ್ಷಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗಕ್ಕೆ ದಾಖಲಾದರು. ಅಲ್ಲಿ ಅಂತರರಾಷ್ಟ್ರೀಯ ಡೊಳ್ಳು ಕುಣಿತ ಕಲಾವಿದ ಡೊಳ್ಳು ಚಂದ್ರು ಪರಿಚಯದಿಂದ ಡೊಳ್ಳು ಕುಣಿತದ ಗೀಳು ಆರಂಭವಾಯಿತು. ಅನೇಕ ಕಾರ್ಯಕ್ರಮಗಳಲ್ಲಿ ಡೊಳ್ಳು ಭಾರಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. ಜಾನಪದ ಜಾತ್ರೆ ಸ್ಟಾರ್ ಸುವರ್ಣ ವಾಹಿನಿಯ ಸ ಬೆಳಕು ಕಾರ್ಯಕ್ರಮ ಭಜರಂಗಿ ದೊಡ್ಮನೆ ಹುಡ್ಗ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಡೊಳ್ಳು ಕುಣಿತ ಕಲಾವಿದರಾಗಿ ಭಾಗವಹಿಸಿದ್ದಾರೆ. 2019ರಲ್ಲಿ ನವದೆಹಲಿಯ ಗಣರಾಜ್ಯೋತ್ಸವ ಪರೇಡನಲ್ಲಿ ಡೊಳ್ಳು ಕುಣಿತ ಪ್ರದರ್ಶನ ನೀಡಿದ್ದಾರೆ. ಜನಪದ ಉತ್ಸವ ಸುಗ್ಗಿ-ಹುಗ್ಗಿ ಸೇರಿದಂತೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ.
ಸಾಂಸ್ಕೃತಿಕ ಸೌರಬ ಕರ್ನಾಟಕ ನಾಟಕ ಅಕಾಡಮಿಯ ಕಾರ್ಯಕ್ರಮ ಖಾದಿ ಉತ್ಸವ ಗಿರಿಜನ ಉತ್ಸವ ರಾಜ್ಯಮಟ್ಟದ ಯುವ ಜನೋತ್ಸವ ತಿರುಚಿನಪಲ್ಲಿ ನಡೆದ ಇಂಟರ್ನ್ಯಾಷನಲ್ ಯೂಥ್ ಫೆಸ್ಟಿವಲ್ ಕನ್ನಡ ಸಾಹಿತ್ಯ ಸಮ್ಮೇಳನ ಒರನಾಡು ಉತ್ಸವದಲ್ಲಿ ಸಂಕೀರ್ಥ ಡೊಳ್ಳು ಕುಣಿತ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ ಬೆಂಗಳೂರು ಬೊಮ್ಮನಹಳ್ಳಿಯಲ್ಲಿ ನಡೆದ ಜಾನಪದ ಉತ್ಸವದಲ್ಲಿ ಸಂಕೀರ್ಥಗೆ ‘ಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಡತನದಲ್ಲಿ ಬೆಳೆದ ನನಗೆ ಬಡ ಮಕ್ಕಳು ಎದುರಿಸುವ ಕಷ್ಟಗಳ ಅರಿವಿದೆ. ಕ್ರೀಡೆ ಮತ್ತು ಸಾಂಸ್ಕೃತಿ ಕ್ಷೇತ್ರದ ಮೇಲೆ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತು ನೀಡುತ್ತಿದ್ದೇನೆ. ಇದರ ಜತೆ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಆಸೆ ಇದೆ.
-ಸಂಕೀರ್ಥ ಕ್ರೀಡಾಪಟು–ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.