ADVERTISEMENT

ಸ್ವರ್ಗದ ಬದಲು ನರಕ ಸೃಷ್ಟಿಸಿದ ಬಿಜೆಪಿ: ಸುದರ್ಶನ್‌ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 15:48 IST
Last Updated 3 ಜುಲೈ 2021, 15:48 IST

ಕೋಲಾರ: ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸ್ವರ್ಗದ ಬದಲು ನರಕ ಸೃಷ್ಟಿಸುತ್ತಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸ್ವರ್ಗ ಸೃಷ್ಟಿಸುವುದಾಗಿ ಬಿಜೆಪಿ ಮುಖಂಡರು ಚುನಾವಣೆಗೂ ಮುನ್ನ ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ದೇಶ ಮತ್ತು ರಾಜ್ಯದ ಜನರಿಗೆ ನರಕ ತೋರಿಸುತ್ತಿದ್ದಾರೆ’ ಎಂದು ಕುಟುಕಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಮಸೂದೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಸಾಕಷ್ಟು ಜನಪರ ಕಾಯ್ದೆಗಳು ಜಾರಿಯಾದವು. ಆದರೆ, ಇದೀಗ ಬಿಜೆಪಿಯು ಪ್ರತಿ ಹಂತದಲ್ಲೂ ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಆಡಳಿತರೂಢ ಬಿಜೆಪಿಗೆ ಮಾನವೀಯತೆ ಇಲ್ಲ. ಸರ್ಕಾರದ ಬದಲು ವಿಪಕ್ಷಗಳು ಹಾಗೂ ನ್ಯಾಯಾಲಯಗಳು ಜನರನ್ನು ರಕ್ಷಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ನಿಜಕ್ಕೂ ದುರಂತ. ಬಿಜೆಪಿಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದೆ’ ಎಂದು ಕಿಡಿಕಾರಿದರು.

‘ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ತರಲು ಸಾಧ್ಯವಾಗದೆ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಅಗತ್ಯ ವಸ್ತುಗಳು, ತೈಲೋತ್ಪನ್ನಗಳ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ಬರ್ಬರವಾಗಿದೆ. ಜನರಿಂದ ವಸೂಲಿ ಮಾಡಿ ₹ 20 ಲಕ್ಷ ಕೋಟಿ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಏನು ಮಾಡಿದೆ ಎಂಬುದು ತಿಳಿಯದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ಲೆಕ್ಕಾಚಾರ: ‘ರಾಜ್ಯ ಸರ್ಕಾರ ಕೊರೊನಾ ಸೋಂಕಿತರ ಸಾವಿನ ಲೆಕ್ಕ ಮರೆ ಮಾಚಿದೆ. ಮೃತರಿಗೆ ಪರಿಹಾರ ನೀಡುವುದನ್ನು ತಪ್ಪಿಸಲು ಸುಳ್ಳು ಲೆಕ್ಕ ನೀಡಿ ಜನರನ್ನು ಯಾಮಾರಿಸುತ್ತಿದೆ. 2020ರ ಜ.1ರಿಂದ 2021ರ ಜೂನ್‌ 13ರವರೆಗೆ ರಾಜ್ಯದಲ್ಲಿ ಕೋವಿಡ್‌ನಿಂದ 3,27,985 ಮಂದಿ ಮೃತಪಟ್ಟಿದ್ದಾರೆ. ಆದರೆ, ಸರ್ಕಾರ 33,333 ಮಂದಿ ಮೃತಪಟ್ಟಿರುವುದಾಗಿ ಲೆಕ್ಕ ಕೊಟ್ಟಿದೆ. ಕಾಂಗ್ರೆಸ್‌ ಪಕ್ಷವು ಎಲ್ಲಾ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರದ ಸುಳ್ಳು ಲೆಕ್ಕಾಚಾರದ ಆಟ ಬಯಲಾಗಿದೆ’ ಎಂದು ಆರೋಪಿಸಿದರು.

‘ಬಿಜೆಪಿಯ ದುರಾಡಳಿತದಿಂದ ಜನ ರೋಸಿ ಹೋಗಿದ್ದು, ಸರ್ಕಾರದ ಬದಲಾವಣೆ ಬಯಸಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಖಂಡಿತ ಒಳ್ಳೆಯ ದಿನಗಳು ಬರುತ್ತವೆ. ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಡಕಿಲ್ಲ: ‘ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಒಡಕು ಇಲ್ಲ. ವಿಧಾನಸಭಾ ಚುನಾವಣೆ ಬಳಿಕ ಎಐಸಿಸಿ ವೀಕ್ಷಕರು ಹಾಗೂ ಪಕ್ಷದ ರಾಜ್ಯ ಉಸ್ತುವಾರಿಗಳು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಯನ್ನು ಘೋಷಣೆ ಮಾಡುತ್ತಾರೆ. ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಉದಾಹರಣೆ ಪಕ್ಷದ ಇತಿಹಾಸದಲ್ಲೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ವೈಯಕ್ತಿಕ ಅಭಿಪ್ರಾಯ ನೀಡದಂತೆ ವರಿಷ್ಠರು ಪಕ್ಷದ ಎಲ್ಲಾ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಯಾರ ಕಾಲನ್ನು ಯಾರೂ ಎಳೆಯುವಂತಿಲ್ಲ. ಎಲ್ಲರೂ ಒಗ್ಗೂಡಿ ತಂಡವಾಗಿ ಹೋಗುವಂತೆ ಮತ್ತು ಸಣ್ಣಪುಟ್ಟ ತಪ್ಪು ತಿದ್ದಿಕೊಳ್ಳುವಂತೆ ವರಿಷ್ಠರು ಸೂಚಿಸಿದ್ದಾರೆ’ ಎಂದರು.

25 ಕ್ಷೇತ್ರದಲ್ಲಿ ಗೆಲುವು: ‘ಜಿಲ್ಲಾ ಪಂಚಾಯಿತಿಯ 33 ಕ್ಷೇತ್ರಗಳ ಪೈಕಿ 25ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹಾಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಮನವಿಗೆ ಮುಖಂಡರು ಸ್ಪಂದಿಸಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಜಿಲ್ಲಾ ವಕ್ತಾರ ಸ್ಟ್ಯಾಂಡ್ಲಿ, ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯ್‌ಶಂಕರ್‌, ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.