ADVERTISEMENT

'ಬಿಎಂಶ್ರೀ ಭವನ' ಕೋಲಾರ ಜಿಲ್ಲೆಯ ಪ್ರಥಮ ಕನ್ನಡ ಭವನ

ಕನ್ನಡದ ಕಂಪು ಹರಡುವಲ್ಲಿ ಬೆಮಲ್‌ ಕನ್ನಡಿಗರು ಸಫಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 7:15 IST
Last Updated 7 ಜುಲೈ 2024, 7:15 IST
ಬೆಮಲ್‌ ನಗರದಲ್ಲಿರುವ ಬಿಎಂಶ್ರೀ ಭವನ
ಬೆಮಲ್‌ ನಗರದಲ್ಲಿರುವ ಬಿಎಂಶ್ರೀ ಭವನ   

ಕೆಜಿಎಫ್‌: ರಾಜ್ಯದ ವಿವಿಧ ಮೂಲೆಗಳಿಂದ ಉದ್ಯೋಗ ಅರಸಿಕೊಂಡು ಬಂದು, ಕನ್ನಡದ ಕಂಪನ್ನು ಹರಡುವಲ್ಲಿ ಬೆಮಲ್‌ ಕನ್ನಡಿಗರು ಸಫಲರಾಗಿದ್ದಾರೆ. ಬೆಮಲ್‌ ಕಾರ್ಮಿಕರ ಹೆಮ್ಮೆಯ ಸಂಸ್ಥೆ ಕನ್ನಡ ಮಿತ್ರರು ನಿರ್ಮಿಸಿರುವ ಬಿಎಂಶ್ರೀ ಭವನ ಜಿಲ್ಲೆಯಲ್ಲಿಯೇ ಪ್ರಥಮ ಕನ್ನಡ ಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿವಿಧ ಪ್ರದೇಶ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕಾರ್ಮಿಕರು ‘ಕನ್ನಡ ಮಿತ್ರರು ಸಂಸ್ಥೆ’ ಕಟ್ಟಿಕೊಂಡು ನಾಟಕ, ಕಲೆ ಮತ್ತು ಸಂಸ್ಕೃತಿಗೆ ಇಂಬು ಕೊಟ್ಟಿದ್ದಾರೆ. ಬೆಮಲ್ ಸಂಸ್ಥೆ ಆರಂಭವಾದ ನಾಲ್ಕು ವರ್ಷಗಳಲ್ಲೇ ಅಂದರೆ 1967ರಲ್ಲಿ ಹಿರಿಯ ಕವಿ ತೀ.ತಾ.ಶರ್ಮ ಅವರ ಸಮ್ಮುಖದಲ್ಲಿ ಕನ್ನಡ ಮಿತ್ರರು ಸಂಸ್ಥೆ ಹುಟ್ಟು ಹಾಕಲಾಯಿತು. ಬೆಮಲ್‌ ಸಂಸ್ಥೆ ಕಟ್ಟಿಕೊಟ್ಟಿದ್ದ ಕಲಾಮಂದಿರ ಅವರ ಕಾರ್ಯ ಕ್ಷೇತ್ರವಾಗಿತ್ತು. ಆದರೆ, ತನ್ನದೇ ಸ್ವಂತ ಕಟ್ಟಡ ಹೊಂದಬೇಕು ಎಂಬ ಬಯಕೆಯಿಂದ ಕನ್ನಡ ಕಾರ್ಮಿಕರು ಪ್ರಯತ್ನ ಶುರು ಮಾಡಿದರು.

ಅದಕ್ಕಾಗಿ 1975ರಲ್ಲಿ ನಿವೇಶನ ಖರೀದಿ ಮಾಡಲಾಯಿತು. ಅದಕ್ಕೆ ಬೇಕಾದ ಸಂಪನ್ಮೂಲ ಒದಗಿಸಿಕೊಂಡರು. ಕವಿ ಗೋಪಾಲಕೃಷ್ಣ ಅಡಿಗರು ಶಂಕುಸ್ಥಾಪನೆ ಮಾಡಿದರು. ಆಗಿನ ಪ್ರಸಿದ್ಧ ಪ್ರಭಾತ್ ಕಲಾವಿದ ಬಿ.ಕೆ.ಸುಮಿತ್ರಾ ಅವರನ್ನು ಕರೆಸಿ ರಸಮಂಜರಿ ಕಾರ್ಯಕ್ರಮ ನಡೆಸಿ ಹಣ ಸಂಗ್ರಹಿಸಿದರು. ಒಂಬತ್ತು ವರ್ಷಗಳ ಸತತ ಪ್ರಯತ್ನದ ನಂತರ 1984ರಲ್ಲಿ ಕಟ್ಟಡದ ಉದ್ಘಾಟನೆಯನ್ನು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಕವಿ ಎಂ.ವಿ.ಸೀತಾರಾಮಯ್ಯ ಮತ್ತು ನಾಡೋಜ ಜಿ.ನಾರಾಯಣ ಅವರು ನೆರವೇರಿಸಿದರು.

ADVERTISEMENT

ಸಂಘದ ಸದಸ್ಯರಲ್ಲಿ ಸಾಹಿತ್ಯ, ಕಲೆ, ನಾಟಕಗಳ ಅಭಿರುಚಿ ಬೆಳೆಯುತ್ತಿದ್ದಂತೆಯೇ ಬಿಎಂಶ್ರೀ ಭವನದಲ್ಲಿ ಕನ್ನಡ ಪುಸ್ತಕಗಳ ಭಂಡಾರ ಇರುವ ಗ್ರಂಥಾಲಯ ಪ್ರಾರಂಭ ಮಾಡಲಾಯಿತು. ಸಣ್ಣ ಪುಟ್ಟ ಕಾರ್ಯಕ್ರಮ, ನಾಟಕಕ್ಕೆ ತಾಲೀಮು ಮೊದಲಾದ ಕಾರ್ಯಕ್ರಮಗಳಿಗೆ ಬಿ.ಎಂ.ಶ್ರೀ ಭವನ ಆಸರೆಯಾಯಿತು. ಬರುಬರುತ್ತಾ ಕನ್ನಡ ಸಾಂಸ್ಕೃತಿಕ ಚಟುವಟಿಕೆ ಹೆಚ್ಚಾದಂತೆ ಭವನ ಕಿಷ್ಕಿಂದೆಯೆನೆಸಿತು. ಕನ್ನಡ ಮಿತ್ರರು ಸಂಸ್ಥೆ 25ವರ್ಷ ದಾಟಿದ ಸಂದರ್ಭದಲ್ಲಿ ಅದರ ಒಡಲಲ್ಲಿಯೇ ಮತ್ತೊಂದು ರಜತ ಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ಮೊಳಕೆ ಒಡೆಯಿತು. ವಿವಿಧ ಸಂಪನ್ಮೂಲಗಳನ್ನು ಸಂಗ್ರಹಿಸಿ 1995ರಲ್ಲಿ ಗುಬ್ಬಿ ವೀರಣ್ಣ ರಂಗ ಮಂದಿರ ಕೂಡ ನಿರ್ಮಾಣವಾಯಿತು. ಮಂದಿರವನ್ನು ಉದ್ಘಾಟನೆ ಮಾಡಿದ್ದ ಗುಬ್ಬಿ ವೀರಣ್ಣ ಅವರ ಪುತ್ರ ಜಿ.ವಿ.ಶಿವಾನಂದ ಎಂಬುದು ಮತ್ತೊಂದು ಹೆಗ್ಗಳಿಕೆ.

ಬಿಎಂಶ್ರೀ ಭವನದ ಗ್ರಂಥಾಲಯ 

ನಾಡಿನ ಬಹುತೇಕ ಕನ್ನಡ ಕವಿಗಳು, ನಾಟಕಕಾರರು, ಸಾಹಿತಿಗಳು ಮತ್ತಿತರ ಕಲಾವಿದರು ಕನ್ನಡ ಮಿತ್ರರು ಸಂಸ್ಥೆ ಕಾರ್ಯಕ್ರಮಗಳಿಗೆ ಬಂದು ಖುಷಿ ಪಟ್ಟಿದ್ದಾರೆ. ಟಿವಿ ವ್ಯಾಮೋಹದ ಯುಗದಲ್ಲಿಯೂ ರಂಗ ಮಂದಿರ ತುಂಬಿಸುವ ಪ್ರೇಕ್ಷಕರನ್ನು ಕನ್ನಡ ಮಿತ್ರರು ಸಂಸ್ಥೆ ಹೊಂದಿದೆ. ಅಭಿಮಾನಿಗಳಿಂದಲೇ ಬೆಳೆಯುತ್ತಾ, ಕನ್ನಡವನ್ನು ಪಸರಿಸುತ್ತಾ ಸಾಗುತ್ತಿರುವ ಇಂತಹ ಕನ್ನಡ ಭವನಗಳು ಎಲ್ಲಾ ಗಡಿ ಪ್ರದೇಶದಲ್ಲಿಯೂ ಬರಬೇಕು ಎಂಬುದು ಬೆಮಲ್‌ ಅಧಿಕಾರಿ ಮತ್ತು ಸಾಹಿತಿ ರಾಜೀವಾಕ್ಷ ಸರಳಾಯ ಅವರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.