ADVERTISEMENT

ಬೆಂಗಳೂರಿನಿಂದ ಮಾಲೂರಿಗೆ ‘ಪುಸ್ತಕ ಮನೆ’

‌ಲಕ್ಷಾಂತರ ಪುಸ್ತಕಗಳ ಭಂಡಾರ ಸ್ಥಳಾಂತರಿಸಿದ ಹರಿಹರಪ್ರಿಯ

ಕೆ.ಓಂಕಾರಮೂರ್ತಿ
Published 16 ಜನವರಿ 2024, 22:22 IST
Last Updated 16 ಜನವರಿ 2024, 22:22 IST
ಮಾಲೂರಿನ ಹೊರವಲಯದಲ್ಲಿ ಹರಿಹರಪ್ರಿಯ ನಿರ್ಮಿಸಿರುವ ‘ಪುಸ್ತಕ ಮನೆ’
ಮಾಲೂರಿನ ಹೊರವಲಯದಲ್ಲಿ ಹರಿಹರಪ್ರಿಯ ನಿರ್ಮಿಸಿರುವ ‘ಪುಸ್ತಕ ಮನೆ’   

ಕೋಲಾರ: ಅಪರೂಪದ ಲಕ್ಷಾಂತರ ಪುಸ್ತಕಗಳ ಸಂಗ್ರಹದ ಗಣಿ ಎನಿಸಿರುವ ‘ಪುಸ್ತಕ ಮನೆ’ಯನ್ನು ರಾಜಧಾನಿ ಬೆಂಗಳೂರಿನಿಂದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರಿಸಲಾಗಿದೆ.‌

ಇದು ಬೆಂಗಳೂರಿನ ಓದುಗರಿಗೆ ನಷ್ಟ ಉಂಟು ಮಾಡಿದರೆ ಕೋಲಾರ ಜಿಲ್ಲೆಯ ಓದುಗ ಪ್ರಿಯರಿಗೆ ಖುಷಿಯ ವಿಚಾರವಾಗಿದೆ.

ವಿದ್ವಾಂಸ ಹರಿಹರಪ್ರಿಯ ಐದಾರು ದಶಕಗಳಿಂದ ಈ ಪುಸ್ತಕಗಳನ್ನು ಸಂಗ್ರಹಿಸಿದ್ದು, ಇಷ್ಟು ದಿನ ಬೆಂಗಳೂರಿನ ವಾಜರಹಳ್ಳಿಯ ತಮ್ಮ ನಿವಾಸದಲ್ಲಿ ಇರಿಸಿದ್ದರು. ಐದು ದಿನಗಳ ಹಿಂದೆ ಎಲ್ಲಾ ಪುಸ್ತಕಗಳನ್ನು ಆರು ಲಾರಿಗಳಲ್ಲಿ ಸ್ಥಳಾಂತರಿಸಿದ್ದಾರೆ. ರಾಜಧಾನಿಯ ಪುಸ್ತಕಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಟ ಹೇಳಿಕೊಂಡಿದ್ದಾರೆ.

ADVERTISEMENT

ಮಾಲೂರಿನ ಹೊರವಲಯದ ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿನ ತಮ್ಮ ಪುತ್ರಿ ಜಾಗೃತಿಪ್ರಿಯ ಸಾತವಲ್ಲಿ ನಿವೇಶನದಲ್ಲಿ ನಿರ್ಮಿಸಿರುವ ಶೆಡ್ಡಿನಾಕಾರದ ಮನೆಯಲ್ಲಿ ಪುಸ್ತಕಗಳನ್ನು ಇರಿಸಿದ್ದಾರೆ. ಇನ್ನೂ ಜೋಡಿಸಬೇಕಿದೆ. 

‘ನನ್ನ ಬಳಿ ಸುಮಾರು ಐದು ಲಕ್ಷ ಪುಸ್ತಕಗಳ ಸಂಗ್ರಹವಿದೆ. ಬೆಂಗಳೂರಿನ ನಿವಾಸದ ಮಹಡಿಯಲ್ಲಿ ಇರಿಸಿದ್ದೆ. ಸಂಖ್ಯೆ ಹೆಚ್ಚಳದಿಂದ ತುಸು ಕಷ್ಟವಾಗತೊಡಗಿತು. ಭಾರದಿಂದ ಮನೆಗೆ ತೊಂದರೆ ಆಗಬಹುದೆಂದು ಎಂಜಿನಿಯರ್ ಸ್ನೇಹಿತರು ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಿದ್ದೇನೆ. ಜೊತೆಗೆ ಕೋಲಾರ ನನ್ನ ತವರು ಜಿಲ್ಲೆ. ಇಲ್ಲಿಯೇ ಸಾಂಸ್ಕೃತಿಕ ಅಧ್ಯಯನ ಕೇಂದ್ರ ರೂಪಿಸುವ ಯೋಜನೆ ಇದೆ’ ಎಂದು ಪುಸ್ತಕಮನೆ ಹರಿಹರಪ್ರಿಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಸ್ತಕ ಭಂಡಾರವು ವಿದ್ವಾಂಸರು, ಸಂಶೋಧಕರು, ಅಧ್ಯಯನಶೀಲರಿಗೆ ಆಕರ ಗ್ರಂಥಾಲಯವಾಗಿದೆ. ಇಲ್ಲಿಗೆ ಬಂದು ಓದಿ ಹೋಗಬಹುದು. ಕೇಳಿದ ಪುಸ್ತಕವನ್ನು ನಾನೇ ಖುದ್ದಾಗಿ ತೆಗೆದುಕೊಡುತ್ತೇನೆ. ಕನ್ನಡ, ತೆಲುಗು ಹಾಗೂ ಇಂಗ್ಲಿಷ್‌ ಪುಸ್ತಕಗಳಿವೆ. ಇದರಲ್ಲಿ ಶೇ 5ರಷ್ಟು ಪುಸ್ತಕಗಳು ಗೆಳೆಯರು ನೀಡಿದ್ದು. ಇನ್ನುಳಿದವನ್ನು ದುಡಿಮೆಯಿಂದ ಖರೀದಿಸಿದ್ದೇನೆ’ ಎಂದರು.

ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿರುವ 72 ವಯಸ್ಸಿನ ಹರಿಹರಪ್ರಿಯ, 10ನೇ ವಯಸ್ಸಿನಿಂದಲೇ ಪುಸ್ತಕ ಸಂಗ್ರಹಿಸುತ್ತಿದ್ದಾರೆ. ಬರವಣಿಗೆ, ಉಪನ್ಯಾಸಗಳಲ್ಲಿ ತೊಡಗಿರುವ ಅವರು ಸುಮಾರು 110 ಕೃತಿ ಬರೆದಿದ್ದಾರೆ. ಸಾಹಿತ್ಯ ಕೃತಿಗಳು ಸೇರಿದಂತೆ ತಾವು ಸಂಗ್ರಹಿಸಿದ ಪುಸ್ತಕಗಳನ್ನು 1992ರಿಂದ ಸಾರ್ವಜನಿಕ ವೀಕ್ಷಣೆಗೆ, ಮಾಹಿತಿಗೆ ಮುಕ್ತಗೊಳಿಸಿದ್ದಾರೆ.

‘ದುಡ್ಡು ತೆಗೆದುಕೊಂಡು ಭಾಷಣ ಮಾಡುತ್ತೇನೆ. ಅಷ್ಟನ್ನೂ ಪುಸ್ತಕ ಖರೀದಿಸಲು ಬಳಸುತ್ತೇನೆ. ಸರ್ಕಾರದಿಂದ ಯಾವುದೇ ನೆರವು ಪಡೆದಿಲ್ಲ. ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್‌ ಸೇರಿದಂತೆ ಹಲವರು ನೆರವು ನೀಡಲು ಮುಂದೆ ಬಂದಿದ್ದಾರೆ. ಪುಸ್ತಕ ಜೋಡಿಸಿಡಲು 300 ಬೀರುಗಳ ಅಗತ್ಯವಿದೆ. ಇನ್ನೂ ಹೆಚ್ಚಿನ ಜಾಗದ ಅವಶ್ಯವಿದೆ’ ಎಂದರು.

ಮಾಲೂರಿನ ‘ಪುಸ್ತಕ ಮನೆ’ಯಲ್ಲಿ ಪುಸ್ತಕ ವೀಕ್ಷಿಸಿದ ಹರಿಹರಪ್ರಿಯ 
ಹರಿಹರಪ್ರಿಯ ನಿರ್ಮಿಸಿರುವ ‘ಪುಸ್ತಕ ಮನೆ’
ಹರಿಹರಪ್ರಿಯ 
ಅರ್ಚಕರ ಮಗನಾದ ನಾನು ಪುಸ್ತಕಪ್ರಿಯ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತಿದ್ದರೆ ನಾನು ಮಾಲೂರಿನಲ್ಲಿ ಪುಸ್ತಕ ಮಂದಿರ ಕಟ್ಟುತ್ತಿದ್ದೇನೆ. ಸಾಂಸ್ಕೃತಿಕ ಸಮಾಜ ನಿರ್ಮಾಣ ನನ್ನ ಕನಸು ಪುಸ್ತಕಮನೆ
-ಹರಿಹರಪ್ರಿಯ ವಿದ್ವಾಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.