ADVERTISEMENT

ಕೆಜಿಎಫ್‌ ಹುಡುಗಿಯ ಮತ್ತೊಂದು ಸಾಧನೆ

ಏಷ್ಯನ್‌ ಸ್ನೂಕರ್‌ನಲ್ಲಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು–ಮೊದಲ ಸೀನಿಯರ್‌ ಮಟ್ಟದ ಟೂರ್ನಿ

ಕೆ.ಓಂಕಾರ ಮೂರ್ತಿ
Published 6 ಜುಲೈ 2024, 7:56 IST
Last Updated 6 ಜುಲೈ 2024, 7:56 IST
ಏಷ್ಯನ್‌ ಸ್ನೂಕರ್‌ ಕಂಚಿನ ಪದಕ ವಿಜೇತೆ ಕೀರ್ತನಾ ಪಾಂಡಿಯನ್‌
ಏಷ್ಯನ್‌ ಸ್ನೂಕರ್‌ ಕಂಚಿನ ಪದಕ ವಿಜೇತೆ ಕೀರ್ತನಾ ಪಾಂಡಿಯನ್‌   

ಕೋಲಾರ: ಕೆಜಿಎಫ್‌ ಹುಡುಗಿ ಕೀರ್ತನಾ ಪಾಂಡಿಯನ್‌ ಸ್ನೂಕರ್‌ ಕ್ರೀಡೆಯಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

ಶುಕ್ರವಾರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಏಷ್ಯನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದ್ದಾರೆ.

ಈ ಹಿಂದೆ ಜೂನಿಯರ್‌ (21 ವರ್ಷದೊಳಗಿನವರು) ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಕೀರ್ತನಾ ಸೀನಿಯರ್‌ ಮಟ್ಟದಲ್ಲಿ ಪಾಲ್ಗೊಂಡ ಮೊದಲ ಟೂರ್ನಿ ಇದಾಗಿದೆ. ಮೊದಲ ಯತ್ನದಲ್ಲೇ ಉತ್ತಮ ಸಾಧನೆ ಮಾಡಿದ್ದಾರೆ.

ADVERTISEMENT

ಜುಲೈ 2ರಂದು ಆರಂಭವಾದ ಈ ಚಾಂಪಿಯನ್‌ಷಿಪ್‌ನಲ್ಲಿ ಚೆನ್ನೈನ ಆಟಗಾರ್ತಿ ಅನುಪಮಾ ರಾಮಚಂದ್ರನ್‌ ಚಿನ್ನದ ಪದಕ ಜಯಿಸಿದರೆ ಥಾಯ್ಲೆಂಡ್‌ನ ಆಟಗಾರ್ತಿ ಪಂಚಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಕೀರ್ತಿನಾ ಸದ್ಯ ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ (ಫೈನಾನ್ಸ್‌) ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲೇ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿರುವ ಅವರು ವಸಂತನಗರದಲ್ಲಿರುವ ರಾಜ್ಯ ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಾಜಿ ಚಾಂಪಿಯನ್‌ ಮುಂಬೈನ ಯಾಸಿನ್ ಮರ್ಚೆಂಟ್‌ ಇವರ ಕೋಚ್‌.

ಸ್ನೂಕರ್‌ ಕ್ರೀಡಾಪಟು ಕೀರ್ತನಾ ಹಲವಾರು ಸವಾಲು ಮೆಟ್ಟಿ ನಿಂತು ವಿಶೇಷ ಸಾಧನೆ ಮಾಡಿದ್ದಾರೆ. ರಿಯಾದ್‌ನಲ್ಲೇ ಕಳೆದ ವರ್ಷ ನಡೆದ ವಿಶ್ವ 21 ವರ್ಷದೊಳಗಿನವರ ಸ್ನೂಕರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. 2022ರಲ್ಲಿ ವಿಶ್ವ 21 ವರ್ಷದೊಳಗಿನವರ ಸ್ನೂಕರ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

‘ವೃತ್ತಿಪರ ಸ್ನೂಕರ್‌ ಟೂರ್ನಿಯಲ್ಲಿ ಆಡಬೇಕು, ವಿಶ್ವ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಕೀರ್ತನಾ.

ಕೀರ್ತನಾ ತಂದೆ ಪಾಂಡಿಯನ್‌ ಕೆಜಿಎಫ್‌ನಲ್ಲಿ ಬೆಮಲ್‌ನಲ್ಲಿ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಮಗಳು ಕೀರ್ತನಾ ಅಭ್ಯಾಸಕ್ಕೆಂದು ಸುಮಾರು ಆರು ವರ್ಷ ನಿತ್ಯ ಕೆಜಿಎಫ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಳು. ಪ್ರಯಾಣದಲ್ಲೇ ಹೆಚ್ಚು ಸಮಯ ಹೋಗುತಿತ್ತು. ಈಗ ಬೆಂಗಳೂರಿನಿಲ್ಲೇ ಓದುತ್ತಿರುವ ಕಾರಣ ಅಲ್ಲೇ ಪಿಜಿ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಕಾಲೇಜಿಗೆ ಹೋಗಲು ಸುಲಭ ಹಾಗೂ ಸ್ನೂಕರ್‌ ಅಭ್ಯಾಸಕ್ಕೂ ಸುಲಭವಾಗಿದೆ’ ಎಂದು ಪಾಂಡಿಯನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾಸಿನ್‌ ಮರ್ಚೆಂಟ್‌ ಅವರಿಂದ ಸಲಹೆ ಮಾರ್ಗದರ್ಶನ ಪಡೆಯುತ್ತಿದ್ದಾಳೆ. ಅದಕ್ಕಾಗಿ ಆಗಾಗ್ಗೆ ಮುಂಬೈಗೆ ಹೋಗಿ ಬರುತ್ತಾಳೆ. ವಿಡಿಯೊ ಕಾಲ್‌ನಲ್ಲಿ ಸಲಹೆ ಪಡೆಯುತ್ತಿರುತ್ತಾಳೆ. ಶನಿವಾರ ಬೆಳಿಗ್ಗೆ ರಿಯಾದ್‌ನಿಂದ ಬೆಂಗಳೂರಿಗೆ ಬರುತ್ತಾಳೆ’ ಎಂದರು.

ಬೆಂಗಳೂರಿನಲ್ಲಿ ಎಂಬಿಎ ಓದುತ್ತಿರುವ ಕೀರ್ತನಾ ಜೂನಿಯರ್‌ ಮಟ್ಟದಲ್ಲಿ ಚಾಂಪಿಯನ್ ಆಗಿದ್ದ ಹುಡುಗಿ ಕೆಜಿಎಫ್‌ನಲ್ಲಿ ಪೋಷಕರ ಸಂಭ್ರಮ

ಈ ಸಾಧನೆ ಸಹಜವಾಗಿಯೇ ನಮಗೆ ಖುಷಿ ಉಂಟು ಮಾಡಿದೆ. ಇನ್ನೂ ದೊಡ್ಡಮಟ್ಟದಲ್ಲಿ ಸಾಧನೆ ಮಾಡುವ ಹಂಬಲ ಆಕೆಯಲ್ಲಿದೆ. ಅದಕ್ಕೆ ನಮ್ಮ ಪ್ರೋತ್ಸಾಹ ಮುಂದುವರಿಯಲಿದೆ

– ಪಾಂಡಿಯನ್‌ ಕೀರ್ತನಾ ತಂದೆ

ಮೊದಲ ಬಾರಿ ಸೀನಿಯರ್‌ ವಿಭಾಗದಲ್ಲಿ ಆಡಿದ್ದೇನೆ. ಮೊದಲ ಟೂರ್ನಿಯಲ್ಲೇ ಈ ಸಾಧನೆ ಮಾಡಿದ್ದು ಸಂತಸ ತಂದಿದೆ. ಇದೇ ರೀತಿ ಶ್ರಮ ಹಾಕಿ ಉನ್ನತ ಸಾಧನೆ ಮಾಡುವ ಗುರಿ ಇದೆ

–ಕೀರ್ತನಾ ಸ್ನೂಕರ್‌ ಕ್ರೀಡಾಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.