ಬಂಗಾರಪೇಟೆ: ಸರ್ಕಾರವು ಹಲವಾರು ವರ್ಷಗಳ ಹಿಂದೆ ಪ್ರತಿಯೊಂದು ಗೇಟ್‌ಗಳಲ್ಲಿ ಪ್ರಯಾಣಿಕರು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ತಂಗುದಾಣಗಳನ್ನು ನಿರ್ಮಿಸಿತ್ತು. ಸುಮಾರು 20ರಿಂದ 25ವರ್ಷಕ್ಕೂ ಮುಂಚೆ ನಿರ್ಮಿಸಿದ ಸಾರ್ವಜನಿಕ ತಂಗುದಾಣಗಳು ಇದೀಗ ಶಿಥಿಲಾವಸ್ಥೆ ತಲುಪಿದ್ದು ಮಳೆಗಾಲದಲ್ಲಿ ಕುಸಿದು ಬೀಳುವ ಅಪಾಯ ಎದುರಿಸುತ್ತಿವೆ.
ತಾಲ್ಲೂಕಿನಾದ್ಯಂತ ಶಾಸಕ ಮತ್ತು ಸಂಸದರ ಅನುದಾನದಲ್ಲಿ ನಿರ್ಮಿಸಿಲಾದ ತಂಗುದಾಣಗಳಲ್ಲಿ ಕೇವಲ ತುಂಬಾ ಹಳೆಯದಾಗಿವೆ, ಮೇಲ್ಛಾವಣಿ, ಬೀಮ್‌ಗೆ ಅಳವಡಿಸಿದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಸಿಮೆಂಟ್ ತುಂಡುಗಳು ಬೀಳುತ್ತಿವೆ. ತಂಗುದಾಣದಲ್ಲಿ ಬಸ್ ಪ್ರಯಾಣಕ್ಕಾಗಿ ಕಾಯುವ ಪ್ರಯಾಣಿಕರು ಅಪಾಯದ ಅಂಜಿಕೆಯಲ್ಲಿಯೇ ನಿಲ್ಲುವಂತಾಗಿದೆ.
ಕಾಮಸಮುದ್ರ ಮುಖ್ಯ ರಸ್ತೆಯಲ್ಲಿರುವ ಕಂತೇಪುರಮಠ ಸಾರ್ವಜನಿಕ ತಂಗುದಾಣ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದು, ಇದೀಗ ಶಿಥಿಲಗೊಂಡಿದೆ. ಕಬ್ಬಿಣ ಸರಳುಗಳು ಸವೆದು ಸಿಮೆಂಟ್ ತುಂಡುಗಳು ನೆಲಕ್ಕಚ್ಚುತ್ತಿವೆ.
ಸಕ್ಕನಹಳ್ಳಿ ತಂಗುದಾಣವೂ ಸಹ ಮಳೆ ಬಂದರೆ ಸಾಕು, ಪ್ರಯಾಣಿಕರ ತಲೆಯ ಮೇಲೆಯೇ ನೀರು ಸೋರುತ್ತದೆ. ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಮಳೆ ಬಂದರೆ ವಾಹನವನ್ನು ನಿಲ್ಲಿಸಿ ತಂಗುದಾಣದಲ್ಲಿ ಸ್ವಲ್ಪ ಸಮಯ ಆಶ್ರಯ ಪಡೆಯಲು ಬರುತ್ತಾರೆ. ಇಲ್ಲಿ ನೋಡಿದರೆ ಬಿಸಿಲಿನಿಂದಲೂ, ಮಳೆಯಿಂದಲೂ ರಕ್ಷಣೆ ಇಲ್ಲ.
ಗುಂಡಾರ್ಲಹಳ್ಳಿ ತಂಗುದಾಣದ್ದೂ ಅದೇ ಸ್ಥಿತಿ. ದೋಣಿಮಡುಗು ಗ್ರಾಮ ಪಂಚಾಯಿತಿಯ ಗುಂಡಾರ್ಲಹಳ್ಳಿ ಕ್ರಾಸ್ ಬಳಿ 25 ವರ್ಷಗಳಿಗೂ ಮೊದಲು ನಿರ್ಮಿಸಿದ ತಂಗುದಾಣವೂ ಶಿಥಿಲಗೊಂಡಿದೆ. ಗಿಡಗಂಟಿಗಳು ಬೆಳೆದು ಹಾವುಗಳ ಆಶ್ರಯತಾಣವಾಗಿದೆ.
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡದೆ ಜೀವಾಪಾಯ ಅಥವಾ ಇತರ ಹಾನಿ ಸಂಭವಿಸುವುದಕ್ಕೂ ಮೊದಲು ಶಿಥಿಲಾವಸ್ಥೆಯ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡಗಳನ್ನು ನಿರ್ಮಿಸಲು ಸಂಬಂಧಿಸಿದವರು ತಯಾರಾಗಬೇಕಾಗಿದೆ ಎಂದು ಕೊತ್ತೂರು ಪ್ರಭಾಕರ್ ಒತ್ತಾಯಿಸಿದರು.
ರಾತ್ರಿ ಸಮಯದಲ್ಲಿ ಪುಂಡಪೋಕರಿಗಳು ಇದೇ ತಂಗುದಾಣದಲ್ಲಿ ಕುಳಿತು ಮದ್ಯಪಾನ ಮಾಡಿ ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟಣಗಳ ಪ್ಲಾಸ್ಟಿಕ್ ಕವರ್‌ಗಳನ್ನು ಇಲ್ಲೇ ಬಿಸಾಡುವುದರಿಂದ ನಿಲ್ದಾಣಗಳ ಅವಸ್ಥೆ ಹೇಳತೀರದು. ಕುಳಿತುಕೊಳ್ಳಲು ಹಾಕಲಾದ ಕಲ್ಲಿನ ಚಪ್ಪಡಿಗಳನ್ನು ಮುರಿದು ಹಾಕಿರುವುದರಿಂದ ಬಸ್ಸು ಬರುವತನಕ ಕುಳಿತು ವಿಶ್ರಮಿಸಿಕೊಳ್ಳಲೂ ಅವಕಾಶ ಇಲ್ಲದಂತಾಗಿದೆ ಎನ್ನುತ್ತಾರೆ ಬನಹಳ್ಳಿ ಮಂಜುನಾಥ.
ಗ್ರಾಮಗಳ ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣ ಸಹ ಶಿಥಿಲಾವ್ಯವಸ್ಥೆ ತಲುಪಿದ್ದು, ಪುಂಡ ಪೋಕರಿಗಳ ಅನೈತಿಕ ಚಟು ವಟಿಕೆ ತಾಣವಾಗಿದೆ. ರಾತ್ರಿ ಸಮಯದಲ್ಲಿ ಗೇಟ್‌ನಲ್ಲಿ ವಿದ್ಯುದ್ದೀಪ ಇಲ್ಲದ ಕಾರಣ ಈ ಗ್ರಾಮಗಳಿಗೆ ತೆರಳಲು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮದ ಬೂದಿಕೋಟೆ ರಮೇಶ ಬಿ ಅಳಲು ತೋಡಿಕೊಂಡಿದ್ದಾರೆ
ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗೇಟ್‌ನಲ್ಲಿ ನಿರ್ಮಿಸಲಾಗಿರುವ ತಂಗುದಾಣಗಳು ಶಿಥಿಲಾವಸ್ಥೆ ತಲುಪಿದ್ದು, ತಂಗುದಾಣದಲ್ಲಿ ಗಿಡಗಂಟಿಗಳು ಬೆಳೆದಿವೆ. ಗೋಡೆಗಳಲ್ಲಿನ ಸಿಮೆಂಟ್ ಕಿತ್ತು ಬಂದು ಬೀಳುವ ಸ್ಥಿತಿಯನ್ನು ತಲುಪಿದೆ. ಮತ್ತೊಂದು ತಂಗುದಾಣದಲ್ಲಿ ಕೆಲವರು ಮಧ್ಯದ ಬಾಟಲಿಗಳ ಚೂರುಗಳನ್ನು ಬಿಸಾಕಿದ್ದಾರೆ. ಇದರಿಂದ ಜನರು ತಂಗುದಾಣದ ಬಳಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಭಗೀರಥ ಆಗ್ರಹಿಸಿದರು.
ಶಿಥಿಲಾವ್ಯವಸ್ಥೆಯಲ್ಲಿರುವ ತಂಗುದಾಣಗಳಿಂದ ಪ್ರಯಾಣಿಕರ ಜೀವಕ್ಕೆ ಅಪಾಯವಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಸ ತಂಗುದಾಣಗಳನ್ನು ನಿರ್ಮಾಣ ಮಾಡಬೇಕು ಎಂಬುದು ಕಂತೇಪುರಮಠ ಶಿವಕುಮಾರ ಒತ್ತಾಯವಾಗಿದೆ.
ಶಿಥಿಲಾವ್ಯವಸ್ಥೆಯಲ್ಲಿರುವ ತಂಗುದಾಣಗಳನ್ನು ನೆಲೆಸಮ ಮಾಡಿ, ನೂತನ ತಂಗುದಾಣ ನಿರ್ಮಾಣಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಕ್ರಮ ವಹಿಸಲಾಗುವುದುರವಿಬಂಗಾರಪೇಟೆ, ಲೋಕೋಪಯೋಗಿ ಇಲಾಖೆ ಇಂಜನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.