ADVERTISEMENT

ಕಾರ್ಮಿಕರ ದಾಂದಲೆ: ಆ್ಯಪಲ್‌–ವಿಸ್ಟ್ರಾನ್‌ ವಾಣಿಜ್ಯ ಒಪ್ಪಂದಕ್ಕೆ ಕುತ್ತು?

ಸತ್ಯಾಸತ್ಯತೆ ಪರಿಶೀಲನೆಗೆ ಉನ್ನತ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:30 IST
Last Updated 18 ಡಿಸೆಂಬರ್ 2020, 19:30 IST
–ಸಂಗ್ರಹ ಚಿತ್ರ
–ಸಂಗ್ರಹ ಚಿತ್ರ   

ಕೋಲಾರ: ವಿಸ್ಟ್ರಾನ್‌ ಕಂಪನಿಯಲ್ಲಿನ ಕಾರ್ಮಿಕರ ದಾಂದಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರತಿಷ್ಠಿತ ಆ್ಯಪಲ್‌ ಐ–ಫೋನ್‌ ಸಂಸ್ಥೆಯು ಕಂಪನಿ ಜತೆಗಿನ ವಾಣಿಜ್ಯ ಒಪ್ಪಂದ ರದ್ದುಪಡಿಸುವ ಮಾತು ಕೇಳಿಬಂದಿದ್ದು, ಸಂಸ್ಥೆಯು ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆಗೆ ಉನ್ನತ ಸಮಿತಿಯನ್ನು ಕಂಪನಿಗೆ ಕಳುಹಿಸಿದೆ.

ವೈದ್ಯಕೀಯ ಉಪಕರಣ ಮತ್ತು ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ವಿಸ್ಟ್ರಾನ್ ಕಂಪನಿಯ ಜತೆಗೆ ಆ್ಯಪಲ್‌ ಸಂಸ್ಥೆಯು ಐ–ಫೋನ್‌ ಉತ್ಪಾದನೆ ಸಂಬಂಧ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ.

ಕಾರ್ಮಿಕರ ಹಿತರಕ್ಷಣೆ ಮತ್ತು ಕಾರ್ಮಿಕ ಕಾನೂನು ಪಾಲನೆಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವ ಆ್ಯಪಲ್‌ ಸಂಸ್ಥೆಯು ಕಾರ್ಮಿಕರ ವಿಚಾರವಾಗಿ ತನ್ನ ಸಹವರ್ತಿ ಕಂಪನಿಗಳಿಗೆ ಕೆಲ ಷರತ್ತು ವಿಧಿಸಿದೆ. ಕಾರ್ಮಿಕರಿಗೆ ಸಕಾಲಕ್ಕೆ ವೇತನ ಮತ್ತು ಸೌಲಭ್ಯ ನೀಡಬೇಕು. ಇದರಲ್ಲಿ ಯಾವುದೇ ಲೋಪವಾಗಬಾರದು ಎಂಬುದು ಆ್ಯಪಲ್‌ ಸಂಸ್ಥೆಯ ಮುಖ್ಯ ಕರಾರು.

ADVERTISEMENT

ಕಾರ್ಮಿಕರ ವೇತನದ ವಿಚಾರವಾಗಿ ತಾಲ್ಲೂಕಿನ ವಿಸ್ಟ್ರಾನ್‌ ಕಂಪನಿಯ ಘಟಕದಲ್ಲಿ ನಡೆದಿರುವ ಅಹಿತಕರ ಘಟನೆಯು ಆ್ಯಪಲ್‌ ಮತ್ತು ವಿಸ್ಟ್ರಾನ್‌ ಕಂಪನಿ ನಡುವಿನ ಬಾಂಧವ್ಯಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ವಿಸ್ಟ್ರಾನ್‌ ಕಂಪನಿ ವಿರುದ್ಧ ಕೇಳಿಬಂದಿರುವ ವೇತನ ಪಾವತಿಯಲ್ಲಿನ ಲೋಪದ ವಿಚಾರವಾಗಿ ಖುದ್ದು ಪರಿಶೀಲನೆ ನಡೆಸಲು ಆ್ಯಪಲ್‌ ಸಂಸ್ಥೆಯು ತನ್ನ 4 ಪ್ರತಿನಿಧಿಗಳನ್ನು ಕಂಪನಿಗೆ ಕಳುಹಿಸಿಕೊಟ್ಟಿದೆ.

ಆ್ಯಪಲ್‌ ಸಂಸ್ಥೆ ಪ್ರತಿನಿಧಿಗಳು ವಿಸ್ಟ್ರಾನ್‌ ಕಂಪನಿಯಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿ ಘಟನೆ ಸಂಬಂಧ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವರು ನೀಡುವ ವರದಿ ಆಧಾರದಲ್ಲಿ ವಿಸ್ಟ್ರಾನ್‌ ಮತ್ತು ಆ್ಯಪಲ್‌ ನಡುವಿನ ವಾಣಿಜ್ಯ ಒಪ್ಪಂದದ ಭವಿಷ್ಯ ನಿರ್ಧಾರವಾಗಲಿದೆ.

ಸಂಬಂಧ ಕಡಿತ: ಆ್ಯಪಲ್‌ ಸಂಸ್ಥೆಯು ಚೀನಾದಲ್ಲಿ ಐ–ಫೋನ್‌ ಉತ್ಪಾದನೆ ಸಂಬಂಧ ತೈವಾನ್‌ ಮೂಲದ ಪೆಗಟ್ರಾನ್‌ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಪೆಗಟ್ರಾನ್‌ ಕಂಪನಿಯು ಕಾರ್ಮಿಕ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಆ್ಯಪಲ್‌ ಸಂಸ್ಥೆಯು ತಿಂಗಳ ಹಿಂದೆಯಷ್ಟೇ ಆ ಕಂಪನಿ ಜತೆಗಿನ ವ್ಯವಹಾರಿಕ ಸಂಬಂಧ ಕಡಿದುಕೊಂಡಿತ್ತು.

ಪೆಗಟ್ರಾನ್ ಕಂಪನಿಯು ಉದ್ಯೋಗಿಗಳನ್ನು ನಿಯಮಬಾಹಿರವಾಗಿ ತಡರಾತ್ರಿವರೆಗೆ ದುಡಿಸಿಕೊಂಡ ಮತ್ತು ಆ್ಯಪಲ್‌ ಸಂಸ್ಥೆಯ ಸೇವಾ ನಿಯಮಾವಳಿ ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಆ್ಯಪಲ್‌ ಸಂಸ್ಥೆಯು ಪೆಗಟ್ರಾನ್‌ನ ಸೇವೆ ಸ್ಥಗಿತಗೊಳಿಸಿತ್ತು.

ಶ್ರೀಕಾಂತ್‌ ಬಿಡುಗಡೆ
ವಿಸ್ಟ್ರಾನ್‌ ಪ್ರಕರಣ ಸಂಬಂಧ ವೇಮಗಲ್‌ ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಎಸ್‌ಎಫ್‌ಐ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್‌ ಅವರನ್ನು ಗುರುವಾರ ರಾತ್ರಿ ಬಿಡುಗಡೆಗೊಳಿಸಿದ್ದಾರೆ. ವಿಸ್ಟ್ರಾನ್ ಕಂಪನಿಯಲ್ಲಿನ ದಾಂದಲೆಗೆ ಶ್ರೀಕಾಂತ್‌ ಪ್ರಚೋದನೆ ನೀಡಿದ್ದರು ಮತ್ತು ಕಂಪನಿಗೆ ಅತಿಕ್ರಮ ಪ್ರವೇಶ ಮಾಡಿದ್ದರು ಎಂಬ ಆರೋಪದಡಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆಯಲ್ಲಿ ಶ್ರೀಕಾಂತ್‌ ವಿರುದ್ಧದ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಟ್ಟು ಕಳುಹಿಸಲಾಗಿದೆ.

ಗಲಭೆ: ಸಿಐಡಿ ತನಿಖೆ ಸಾಧ್ಯತೆ?
ಬೆಂಗಳೂರು:
ವಿಸ್ಟ್ರಾನ್‌ ಘಟಕದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಿಐಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್ ಸೂದ್‌ ಸೇರಿ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಹಿಂಸಾಚಾರ, ಆ ಬಳಿಕ ನಡೆಯುತ್ತಿರುವ ತನಿಖೆಯ ಬಗ್ಗೆ ಪೂರ್ಣ ಮಾಹಿತಿ ಪಡೆದರು. ‘ವಿಸ್ಟ್ರಾನ್‌ನಲ್ಲಿ ನಡೆದ ಕಾರ್ಮಿಕರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲ ಉದ್ಯಮಗಳಿಗೂ, ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸಂಪೂರ್ಣ ರಕ್ಷಣೆ ನೀಡಬೇಕಾಗಿದೆ. ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ’ ಎಂದು ಯಡಿಯೂರಪ್ಪ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು. ಈ ಗಲಭೆಗೆ ಕುಮ್ಮಕ್ಕು ಕೊಟ್ಟವರು ಯಾರು? ಹಿಂದಿನ ಸೂತ್ರಧಾರಿಗಳು ಯಾರು ಎಂಬುದನ್ನು ಪತ್ತೆ ಮಾಡಬೇಕು ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.