ADVERTISEMENT

ಕೋಲಾರ: ವೃದ್ಧರಿಗೆ ಹೆಚ್ಚುತ್ತಿದೆಯೇ ಕಿರುಕುಳ?

ಸಹಾಯ ಕೋರಿ ಹಿರಿಯ ಜೀವಗಳಿಂದ ಜಿಲ್ಲೆಯ ಸಹಾಯವಾಣಿಗೆ ತಿಂಗಳಿಗೆ 300ಕ್ಕೂ ಹೆಚ್ಚು ದೂರು!

ಕೆ.ಓಂಕಾರ ಮೂರ್ತಿ
Published 17 ಅಕ್ಟೋಬರ್ 2024, 6:12 IST
Last Updated 17 ಅಕ್ಟೋಬರ್ 2024, 6:12 IST
ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ
ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ   

ಕೋಲಾರ: ಮನೆಗಳಲ್ಲಿ ವೃದ್ಧರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಿರುವ ಹಿರಿಯ ನಾಗರಿಕರ ಸಹಾಯವಾಣಿಗೆ ತಿಂಗಳಿಗೆ 300ಕ್ಕೂ ಅಧಿಕ ದೂರುಗಳು ಬರುತ್ತಿವೆ.

ಆಸ್ತಿ ದಾಖಲೆ ಪತ್ರಕ್ಕೆ ಸಹಿ ಹಾಕುವಂತೆ ಮಕ್ಕಳು ಹಿಂಸೆ ಕೊಡುತ್ತಾರೆ, ಹೊತ್ತಿಗೆ ಸರಿಯಾಗಿ ಊಟ ಹಾಕುವುದಿಲ್ಲ, ಮಾತ್ರೆ–ಔಷಧಿ ತಂದು ಕೊಡುವುದಿಲ್ಲ, ಮಾನಸಿಕವಾಗಿ ಕಿರುಕುಳ ನೀಡುತ್ತಾರೆ, ಮನೆಯಿಂದ ಹೊರ ಹಾಕುತ್ತಾರೆ ಎಂದು ನೊಂದ ಹಿರಿಯ ಜೀವಗಳು ಸಹಾಯವಾಣಿಗೆ ಕರೆ ಮಾಡಿ ತಮ್ಮ ನೋವು ಹೇಳಿಕೊಳ್ಳುತ್ತಿವೆ.

ಪ್ರತಿ ತಿಂಗಳು ಬರುವ ಪಿಂಚಣಿ ಹಣವನ್ನೂ ಕುಟುಂಬದವರು ಕಸಿದುಕೊಳ್ಳುತ್ತಿರುವ ಬಗ್ಗೆಯೂ ಸಹಾಯವಾಣಿ ಕೇಂದ್ರದಲ್ಲಿ ದೂರುಗಳು ದಾಖಲಾಗುತ್ತಿವೆ.

ADVERTISEMENT

ಕೋಲಾರ ಹೊರವಲಯದ ಟಮಕದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ‘ದಿವ್ಯಜ್ಯೋತಿ ಹಿರಿಯ ನಾಗರಿಕರ ಸಹಾಯವಾಣಿ’ಗೆ ಸೆಪ್ಟೆಂಬರ್‌ ತಿಂಗಳಿನಲ್ಲೇ 308 ಕರೆಗಳು ಬಂದಿವೆ. ಜಿಲ್ಲೆಯಲ್ಲಿ 60 ವರ್ಷ ದಾಟಿದ ನಾಗರಿಕರ ಸಹಾಯಕ್ಕೆ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಸಂಸ್ಥೆ ಇದಾಗಿದೆ. ಮೂವರು ಆಪ್ತ ಸಮಾಲೋಚಕರು ಇದ್ದಾರೆ. ಕರ್ನಾಟಕ ಪೊಲೀಸ್‌ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ.

‘ಹಿರಿಯ ನಾಗರಿಕರು ಗೌರವಯುತವಾಗಿ ಬದುಕಲು ಸಹಾಯ ಕಲ್ಪಿಸುತ್ತಿದ್ದೇವೆ. ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವ ವೃದ್ಧರಿಗೆ ಕಾನೂನು ನೆರವು ಒದಗಿಸಿದ್ದೇವೆ. ಆಪ್ತ ಸಮಾಲೋಚನೆ ನಡೆಸಿ, ಮಕ್ಕಳನ್ನು ಕರೆಸಿ ಬುದ್ಧಿವಾದ ಹೇಳಿ ವೃದ್ಧರನ್ನು ಕಳುಹಿಸಿದ್ದೇವೆ. ಮತ್ತೆ ಕುಟುಂಬದ ಜೊತೆ ಬಾಳು ಸಾಗಿಸುವಂತೆ ಮಾಡಿದ್ದೇವೆ. ಕುಟುಂಬದ ಮೇಲೆ ಸದಾ ನಿಗಾ ಇರಿಸುತ್ತೇವೆ’ ಎಂದು ಸಹಾಯವಾಣಿಯ ಯೋಜನಾಧಿಕಾರಿ ಸಿ.ಎಚ್‌.ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಉಪವಿಭಾಗಾಧಿಕಾರಿ ಕಚೇರಿಗೆ ದೂರು ದಾಖಲಿಸಿ 90 ದಿನಗಳಲ್ಲಿ ನ್ಯಾಯ ದೊರಕಿಸಿಕೊಡಲಾಗುತ್ತದೆ. ತಿಂಗಳಿಗೆ ₹ 10 ಸಾವಿರದವರೆಗೆ ಜೀವಾನಾಂಶವನ್ನೂ ಕೊಡಿಸಲಾಗುತ್ತದೆ’ ಎಂದರು.

ಹಿರಿಯ ನಾಗರಿಕರ ಸಂಕ್ಷಣೆಗೆ 2007ರಲ್ಲಿ ಕಾಯ್ದೆ ತರಲಾಗಿದೆ. ಮನೆಯಿಂದ ಮಕ್ಕಳು ಅಥವಾ ಇನ್ನಿತರರು ಹೊರಹಾಕಿದರೆ ದೂರು ದಾಖಲಿಸಬಹುದು. ಹಲವರ ಮಕ್ಕಳು ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದು, ಇಲ್ಲಿ ವೃದ್ಧರು ಒಂಟಿಯಾಗಿರುತ್ತಾರೆ. ಈ ಸಂಬಂಧಿಸಿದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವೃದ್ಧರ ಪಟ್ಟಿ ಇರಬೇಕು. ಸಮಸ್ಯೆ ಬಂದಾಗ ಭೇಟಿ ನೀಡಿ ಆಲಿಸಬೇಕು. ಈ ಸಂಬಂಧ ಕಾನೂನು ಸೇವಾ ಪ್ರಾಧಿಕಾರ ಕೂಡ ನಿರ್ದೇಶನ ನೀಡಿದೆ.

ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡು ಪೋಷಕರನ್ನು ಆಚೆ ಹಾಕುತ್ತಿರುವ ಸಂಬಂಧ ಸಹಾಯವಾಣಿಗೆ ಕರೆ ಬರುತ್ತಿವೆ. ಸಂಧಾನ ಅಥವಾ ಎಸಿ ನ್ಯಾಯಾಲಯ ಮೂಲಕ ಬಗೆಹರಿಸುತ್ತಿದ್ದೇವೆ
ಸಿ.ಎಚ್‌.ಹರೀಶ್‌ ಯೋಜನಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ
ಅಮ್ಮನನ್ನು ಪುತ್ರ ಸೊಸೆ ಹೊರಹಾಕಿದರು!
ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಾಕಿ ಸಲುಹಿದ ಪೋಷಕರನ್ನು ಹೊರೆ ಎಂದು ಭಾವಿಸಿ ಮಕ್ಕಳು ಮನೆಯಿಂದ ಹೊರಹಾಕುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿರುವುದು ಗೊತ್ತಾಗಿದೆ. ಆಸ್ತಿಗೆ ಸಹಿ ಹಾಕಿಸಿಕೊಂಡು ಹೊರಗೆ ನೂಕಿರುವ ಪ್ರಕರಣವೂ ಪತ್ತೆಯಾಗಿದೆ. ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದಲ್ಲಿ ವಿಧವೆ ವೃದ್ಧೆಯೊಬ್ಬರು ತನ್ನ ಪುತ್ರ ಹಾಗೂ ಸೊಸೆ ಜೊತೆ ತಮ್ಮ ಮನೆಯಲ್ಲಿ ವಾಸವಿದ್ದರು. ಆದರೆ ಯಾವುದೋ ಕಾರಣಕ್ಕೆ ಕುಟುಂಬದವರು ವೃದ್ಧೆಯನ್ನು ಮನೆಯಿಂದ ಹೊರಹಾಕಿದ್ದರು. ಮಾನಸಿಕವಾಗಿ ಕುಗ್ಗಿ ಹೋದ ಅವರು ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಹಿರಿಯ ಜೀವದ ಪರವಾಗಿ ಸಹಾಯವಾಣಿ ಸಂಸ್ಥೆಯು ಕೋಲಾರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿತು. ಪ್ರಕರಣ ಅವಲೋಕಿಸಿದ ಉಪವಿಭಾಗಾಧಿಕಾರಿಯು ವೃದ್ಧೆಗೆ ಮನೆ ಬಿಡಿಸಿ ಕೊಡುವಂತೆ ಆದೇಶ ಮಾಡಿದ್ದಾರೆ ಎಂದು ಸಹಾಯವಾಣಿ ಯೋಜನಾಧಿಕಾರಿ ಹರೀಶ್‌ ತಿಳಿಸಿದರು.

ವೃದ್ಧಾಶ್ರಮಕ್ಕೆ ಸೇರಿಸಿ ಪ್ಲೀಸ್‌…

ಹಲವು ವೃದ್ಧರು ಮನೆಯಲ್ಲಿ ಸ್ವಂತ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಕುಟುಂಬದ ಇತರ ಸದಸ್ಯರ ಕಿರುಕುಳ ಮೂದಲಿಕೆ ಮಾತು ಹಾಗೂ ಅವಮಾನ ತಾಳಲಾರದೆ ವೃದ್ಧಾಶ್ರಮಕ್ಕೆ ಸೇರಿಸುವಂತೆ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗಿರುವ ಹಿರಿಯ ನಾಗರಿಕರನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಕೆಲಸವೂ ನಡೆಯುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಿಲ್ಲಿಕುಂಟೆಯಲ್ಲಿ ‘ರೇವಂತ್‌ ವೃದ್ಧಾಶ್ರಮ’ ಇದೆ. ಇಲ್ಲಿ ಸುಮಾರು 24 ಮಂದಿ ವೃದ್ಧರು ಆಶ್ರಯ ಪಡೆದಿದ್ದಾರೆ. ಉಚಿತ ಊಟ ಆಶ್ರಯ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಇದು ಕೂಡ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹಿರಿಯ ನಾಗರಿಕರಿದ್ದಾರೆ. ಖಾಸಗಿ ಸಂಸ್ಥೆಗಳದ್ದೂ ಸೇರಿದಂತೆ 10 ವೃದ್ಧಾಶ್ರಮಗಳಿವೆ.

ಹಿರಿಯ ನಾಗರಿಕರ ಸಹಾಯವಾಣಿ

ಹಿರಿಯ ನಾಗರಿಕರು ಸಮಸ್ಯೆ ಎದುರಾದಾಗ ಅಥವಾ ನೆರವಿಗೆ ಈ ಕೆಳಕಂಡ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 1090. ಯೋಜನಾಧಿಕಾರಿ ಸಿ.ಎಚ್‌.ಹರೀಶ್‌ ಮೊ: 9535474179 ಕಾರ್ಯದರ್ಶಿ ಕೆ.ನರಸಿಂಹಪ್ಪ ಮೊ: 9448185384 ಅಥವಾ ದೂ: 08152 243074 

ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡು ಪೋಷಕರನ್ನು ಆಚೆ ಹಾಕುತ್ತಿರುವ ಸಂಬಂಧ ಸಹಾಯವಾಣಿಗೆ ಕರೆ ಬರುತ್ತಿವೆ. ಸಂಧಾನ ಅಥವಾ ಎಸಿ ನ್ಯಾಯಾಲಯ ಮೂಲಕ ಬಗೆಹರಿಸುತ್ತಿದ್ದೇವೆ
ಸಿ.ಎಚ್‌.ಹರೀಶ್‌, ಯೋಜನಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.