ADVERTISEMENT

ಸ್ಮಶಾನ: ಎಲ್ಲಾ ಸಮುದಾಯಕ್ಕೂ ಅವಕಾಶ

ಎಸ್‌.ಸಿ, ಎಸ್‌.ಟಿ ಮೇಲಿನ ದೌರ್ಜನ್ಯ ನಿಯಂತ್ರಣ, ಜಾಗೃತಿ ಸಮಿತಿ ಸಭೆ–ಜಿಲ್ಲಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 4:29 IST
Last Updated 22 ಸೆಪ್ಟೆಂಬರ್ 2022, 4:29 IST
ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಮಾತನಾಡಿದರು. ಎಸ್‌.ಪಿ ಡಿ.ದೇವರಾಜ್‌, ಕೆಜಿಎಫ್‌ ಎಸ್‌.ಪಿ ಧರಣಿದೇವಿ ಮಾಲಗತ್ತಿ, ಜಿ.ಪಂ. ಸಿಇಒ ಯುಕೇಶ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚೆನ್ನಬಸವಪ್ಪ ಇದ್ದಾರೆ
ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಮಾತನಾಡಿದರು. ಎಸ್‌.ಪಿ ಡಿ.ದೇವರಾಜ್‌, ಕೆಜಿಎಫ್‌ ಎಸ್‌.ಪಿ ಧರಣಿದೇವಿ ಮಾಲಗತ್ತಿ, ಜಿ.ಪಂ. ಸಿಇಒ ಯುಕೇಶ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚೆನ್ನಬಸವಪ್ಪ ಇದ್ದಾರೆ   

ಕೋಲಾರ: ‘ಸರ್ಕಾರಿ ಸ್ವತ್ತಿನಲ್ಲಿರುವ ಎಲ್ಲಾ ಸ್ಮಶಾನಗಳಲ್ಲಿ ಎಲ್ಲಾ ಸಮುದಾಯದವರು ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ವಿಚಾರ ಸರ್ಕಾರದ ಸುತ್ತೋಲೆಯಲ್ಲಿಯೇ ಇದೆ. ಅವಕಾಶ ನೀಡದಿದ್ದರೆ ದೌರ್ಜನ್ಯ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದಲಿತರಿಗೆಂದೇ ಪ್ರತ್ಯೇಕ ಸ್ಮಶಾನ ನೀಡಲು ಬರಲ್ಲ. ಸರ್ಕಾರಿ ಜಾಗದಲ್ಲಿರುವ ಎಲ್ಲಾ ಸ್ಮಶಾನವನ್ನು ಎಲ್ಲಾ ಸಮುದಾಯದವರು ಬಳಸಿಕೊಳ್ಳಬಹುದು. ಈ ಸಂಬಂಧ ಎಲ್ಲಾ ಸ್ಮಶಾನಗಳಲ್ಲಿ ಬೋರ್ಡ್ ಹಾಕಲಾಗುವುದು’ ಎಂದರು.

ADVERTISEMENT

ಸಮಿತಿ ಸದಸ್ಯರು ಮಾತನಾಡಿ, ‘ಹಳ್ಳಿಯಲ್ಲಿ ಈ ವಿಚಾರ ಗೊತ್ತಿಲ್ಲ. ಹೀಗಾಗಿ, ಸುತ್ತೋಲೆಯಲ್ಲಿರುವ ವಿಷಯ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಸ್ಮಶಾನದಲ್ಲಿ ದಲಿತರಿಗೆ ಜಾಗನೂ ಕೂಡಲ್ಲ, ದಾರಿಯನ್ನೂ ಬಿಡಲ್ಲ. ಸ್ಮಶಾನ, ದೇಗುಲ ವಿಚಾರದಲ್ಲಿ ಜಿಲ್ಲೆಯಲ್ಲಿ ಹೆಚ್ಚು‌ ಜಗಳ‌ ನಡೆಯುತ್ತಿವೆ. ಎಷ್ಟು ಕಡೆ ಸ್ಮಶಾನವಿದೆ ಎಂಬ ಮಾಹಿತಿ ಕೊಡಿ’ ಎಂದು ಆಗ್ರಹಿಸಿದರು.

ಸಾಲ ಬೋಗಸ್: ಎಸ್‌.ಸಿ, ಎಸ್‌.ಟಿ ಸಮುದಾಯದವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರು ವಿವಿಧ ಇಲಾಖೆಗಳಿಂದ ಸಾಲ ಪಡೆಯುತ್ತಿದ್ದಾರೆ ಎಂದೂ ಸದಸ್ಯರು ದೂರಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇಂಥ ಪ್ರಕರಣ ನಡೆದಿದೆ. ಅದಕ್ಕೆ ಪೂರಕವಾಗಿ ಬ್ಯಾಂಕ್ ಚೆಕ್ ಕೂಡ ಇದೆ. ಸಾಲ ಕೊಡುವಾಗ ಪರಿಶೀಲನೆ‌ ನಡೆಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಇಲಾಖೆ ಉಪನಿರ್ದೇಶಕ ಮುದ್ದಣ್ಣ, ‘ನಕಲಿ ಮಹಿಳೆ ಹೆಸರಲ್ಲಿ ಸಾಲಕ್ಕೆ ಅರ್ಜಿ ಬಂದಿತ್ತು. ಆದರೆ, ಸಾಲ ಮಂಜೂರಾಗಿಲ್ಲ‌’ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ‘ಬೇರೆ ಹೆಸರಲ್ಲಿ ಬೋಗಸ್ ಸಾಲ ಪಡೆಯುತ್ತಿರುವ ದೂರು ದಾಖಲಾಗಿದೆ. ಈ ಪ್ರಕರಣದಲ್ಲೂ ದೂರು ದಾಖಲಿಸಿ. ಯಾವ ಬ್ಯಾಂಕ್ ಭಾಗಿಯಾಗಿದೆ, ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ ಕುಮಾರ್‌, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಸರ್ಕಾರದಿಂದ ವಿತರಿಸುವ ಸಾಲಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಮಾಡಬಾರದು’ ಎಂದರು.

ಸಮಿತಿ ಸದಸ್ಯ ಮಾಲೂರು ಎನ್‌.ವೆಂಕಟರಾಮ್‌, ‘ಸಾಲ ನೀಡಲು ಸತಾಯಿಸುವ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿ. ವಾಲ್ಮೀಕಿ ಭವನ ಉದ್ಘಾಟನೆ ಮಾಡಿಸಿ. ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಿ’ ಎಂದು ಒತ್ತಾಯಿಸಿದರು.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿರುವುದಿಲ್ಲ ಎಂದು ಸದಸ್ಯರು ದೂರಿದರು.‌ ಆಗ ತಾಲ್ಲೂಕಿನ ಅಧಿಕಾರಿಗಳು, ‘ಹಲವಾರು ವರ್ಷಗಳಿಂದ ಶಾಸಕರಿಂದ ಫಲಾನುಭವಿಗಳ ಪಟ್ಟಿಯೇ ಬಂದಿಲ್ಲ’ ಎಂದರು.

ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚೆನ್ನಬಸವಪ್ಪ, ಹಿಂದುಳಿದ ಇಲಾಖೆಗಳ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣೇಕರ್‌, ಸಮಿತಿ ಸದಸ್ಯರಾದ ಬೆಳಮಾರನಹಳ್ಳಿ ಆನಂದ್‌, ವಿ.ನಾರಾಯಣಸ್ವಾಮಿ, ವರದೇನಹಳ್ಳಿ ವೆಂಕಟೇಶ್‌, ಚಲಪತಿ, ಮಂಜುನಾಥ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.