ಬಂಗಾರಪೇಟೆ (ಕೋಲಾರ ಜಿಲ್ಲೆ): ‘ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗುವುದು ವಿಳಂಬವಾಗುತ್ತದೆ’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್, ತಾಲ್ಲೂಕಿನ ಯರಗೋಳ್ ಜಲಾಶಯಉದ್ಘಾಟನೆ ವಿಳಂಬದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಜಲಾಶಯ ಭರ್ತಿಯಾಗಿರುವುದರಿಂದ ಶುಕ್ರವಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರಜೊತೆಗೂಡಿ ಬಾಗಿನಿ ಅರ್ಪಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಬಳಕೆಗೆ ಕುಡಿಯುವ ನೀರು ಇನ್ನೂ ಸಿಗದ ಬಗ್ಗೆ ಮಾತನಾಡಿದ ಅವರು, ‘ಇವತ್ತು ಮಾತುಕತೆ, ನಾಳೆ ನಿಶ್ಚಿತಾರ್ಥ, ನಾಡಿದ್ದು ಮದುವೆ… ನಂತರ ಸಕ್ರಿಯವಾಗಿ ಕೆಲಸ ಮಾಡಿದರೆ 9 ತಿಂಗಳಲ್ಲಿ ಮಗುವಾಗುತ್ತದೆ. ಒಮ್ಮೊಮ್ಮೆ ನರ ದೌರ್ಬಲ್ಯವಿದ್ದಾಗ ಮಕ್ಕಳಾಗುವುದು ವಿಳಂಬವಾಗುತ್ತದೆ’ ಎಂದರು.
ಜಲಾಶಯ ತಮ್ಮಯೋಜನೆ ಎಂಬಎಚ್.ಡಿ. ಕುಮಾರಸ್ವಾಮಿಹೇಳಿಕೆಕುರಿತು ಸುದ್ದಿಗಾರರು ಗಮನ ಸೆಳೆದಾಗ, ‘ಕೆಆರ್‌ಎಸ್, ಎತ್ತಿನಹೊಳೆ, ಯರಗೋಳ್, ಎಚ್.ಎನ್. ವ್ಯಾಲಿ, ಎಚ್‌ಎಂಟಿ, ಎಚ್‌ಎಎಲ್ ಎಲ್ಲವೂ ಕುಮಾರಸ್ವಾಮಿ ಅವರದ್ದೇ. ನಾವು ಅವರ ಕೃಪೆಯಿಂದ ಬದುಕುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.
‘ನನ್ನನ್ನು ಕೆಲವರು ಭಗೀರಥ, ಮಹಾನ್ ನಾಯಕ ಎನ್ನುತ್ತಾರೆ. ಇನ್ನು ಕೆಲವರು ನರಿ, ಶಕುನಿ, ದುರ್ಯೋಧನ ಎನ್ನುತ್ತಾರೆ. ನೀವು ಮಾಧ್ಯಮದವರು ಏನಾದರೂ ಹೊಸ ಹೆಸರು ಇದ್ದರೆ ಕೊಡಿ’ ಎಂದು ಹೇಳಿದರು.
‘ಯೋಜನೆ ವಿಳಂಬವಾಗಿರುವುದು ನಿಜ. ಅದಕ್ಕೆ ಕಾರಣ ಬಹಳಷ್ಟಿವೆ. 2016ರಲ್ಲಿ ನಾನು ಮಂತ್ರಿಯಾಗಿದ್ದಾಗ ಸ್ಥಳ ವೀಕ್ಷಣೆಗೆ ಬಂದಿದ್ದೆ. ಆಗ ಜಲಾಶಯದ ಕಾಮಗಾರಿ ಮುಗಿದಿರಲಿಲ್ಲ. ಕೆಲಸ ಮಾಡಿಸಿದ ಖುಷಿ ಇದೆ.ಸರ್ಕಾರಕ್ಕೆ ಯಾವಾಗ ಮನಸ್ಸು ಬರುತ್ತದೆಯೋ ಆಗ ಉದ್ಘಾಟಿಸಲಿ. ನಾವೀಗ ಆಡಳಿತದಲ್ಲಿ ಇಲ್ಲ. ಆದರೆ ಒತ್ತಡ ಹಾಕುತ್ತೇವೆ’ ಎಂದು ತಿಳಿಸಿದರು.
‘ಈ ಯೋಜನೆಯ ಶ್ರೇಯವನ್ನು ಯಾವುದೇ ಪಕ್ಷ ಪಡೆದುಕೊಳ್ಳಲಿ, ಅದಕ್ಕೆ ಸ್ವಾಗತ. ತಮಿಳರು ಬಂದು ‘ನಾವು ಮಾಡಿದ್ದೇವೆ’ ಎಂದರೆ ‘ಹೌದು ನೀವೇ ಮಾಡಿದ್ದು’ ಎನ್ನುತ್ತೇವೆ’ ಎಂದರು.
ಜಲಾಶಯಕ್ಕೆ ಕೆಲವರು ಶಿವಾಜಿ, ಇನ್ನು ಕೆಲವರು ಅಂಬೇಡ್ಕರ್ ಹೆಸರಿಡಬೇಕೆಂಬ ಆಗ್ರಹ ಕುರಿತು, ‘ಅಂಬೇಡ್ಕರ್ ಅವರ ಆಲೋಚನೆಗಳು ಹರಿದಂತೆ ನೀರು ಕೂಡ ಹರಿಯಬೇಕು ಅಷ್ಟೆ. ಯಾರ ಹೆಸರನ್ನಾದರೂ ಇಡಲಿ. ಶಿವಾಜಿ, ಹೆಡಗೇವಾರ್, ಗೋಲ್ವಾಲ್ಕರ್ ಹೆಸರು ಇಡಲಿನಮ್ಮ ಅಭ್ಯಂತರಇಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.