ಕೋಲಾರ: ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಿಂದ ಗುರುವಾರ ಸಂಜೆ ಮಹಿಳೆಯರು ಅಪಹರಿಸಿದ್ದ ಶಿಶುವನ್ನು ತಮಿಳುನಾಡಿನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮೂವರು ಮಹಿಳೆಯರು ನವಜಾತ ಗಂಡು ಶಿಶುವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಆಟೊದಲ್ಲಿ ಪರಾರಿಯಾದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಸುಳಿವಿನ ಮೇಲೆ ಕಾರ್ಯಾಚರಣೆ ಕೈಗೊಂಡ ಕೋಲಾರ ವಿಭಾಗದ ಡಿವೈಎಸ್ಪಿ ಮಲ್ಲೇಶ್ ನೇತೃತ್ವದ ತಂಡ ಆರೋಪಿಗಳನ್ನು ಕೇವಲ ಆರು ಗಂಟೆಗಳೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇನ್‌ಸ್ಪೆಕ್ಟರ್‌ಗಳಾದ ಹರೀಶ್, ವಸಂತ್, ಶಂಕರಾಚಾರ್, ತಾಂತ್ರಿಕ ತಜ್ಞ ನಾಗರಾಜ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ ಹಾಗೂ ಪೂವರಸನ್ ಎಂಬ ದಂಪತಿಗೆ ಸೇರಿದ ಆರು ದಿನಗಳ ಶಿಶು ಇದಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ನಂತರದ ಕೊಠಡಿಯಲ್ಲಿ ಬಾಣಂತಿ ನಂದಿನಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗಿತ್ತು.
ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಹೊಂಚು ಹಾಕಿದ್ದ ಕಳ್ಳರು, ನಂದಿನಿ ಮತ್ತು ಅವರ ತಾಯಿ ರಾಧಮ್ಮ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ರಾಧಮ್ಮ ವಾರ್ಡ್‌ನಿಂದ ಹೊರಗೆ ಹೋಗಿದ್ದರು, ಆ ಸಂದರ್ಭದಲ್ಲಿ ನಂದಿನಿ ಮಗುವನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ದರು. ಈ ಮಧ್ಯೆ ಒಂದು ಬಾರಿ ಶೌಚಾಲಯಕ್ಕೆ ಹೋಗಿ ಬಂದು ಮತ್ತೆ ಮಲಗಿದ್ದರು.
ಹೊರಗೆ ಹೋಗಿದ್ದ ರಾಧಮ್ಮ ವಾರ್ಡಿಗೆ ಬರುವಷ್ಟರಲ್ಲಿ ಮಗು ಇಲ್ಲದಿರುವುದನ್ನು ಕಂಡು ಗಾಬರಿಗೊಂಡಿದ್ದರು. ಆಗ ಅಕ್ಕಪಕ್ಕದವರನ್ನು ಕೇಳಿದಾಗ ಯಾರೊ ಬಂದು ಎತ್ತುಕೊಂಡು ಹೋದರು ಎಂದು ಹೇಳಿದ ಕೂಡಲೇ ನಂದಿನಿ ಆತಂಕದಿಂದ ಕಿರುಚಾಡಿದ್ದರು. ಕೂಡಲೇ ವಾರ್ಡ್‌ಗೆ ಬಂದ ವೈದ್ಯಾಧಿಕಾರಿಗಳು ನಂದಿಯನ್ನು ಸಮಾಧಾನಪಡಿಸಿ, ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದ್ದರು. 4 ಗಂಟೆ ಸುಮಾರಿಗೆ ಮೂವರು ಮಹಿಳೆಯರು ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಕೋಲಾರ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.