ADVERTISEMENT

ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ್ದ ವರನಿಗೆ ಎದುರಾಗಿದೆ ಸಂಕಷ್ಟ

ಬಾಲ್ಯವಿವಾಹ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 17 ಮೇ 2021, 2:11 IST
Last Updated 17 ಮೇ 2021, 2:11 IST
ಉಮಾಪತಿ
ಉಮಾಪತಿ    

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವೇಗಮಡುಗು ಗ್ರಾಮದಲ್ಲಿ ಒಂದೇ ಮೂಹರ್ತದಲ್ಲಿ ಅಕ್ಕ–ತಂಗಿಯನ್ನು ಮದುವೆಯಾಗಿದ್ದ ಉಮಾಪತಿ ಅವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ನಂಗಲಿ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಮುಳಬಾಗಿಲು ತಾಲ್ಲೂಕು ಚಿನ್ನಬಾಲೇಪಲ್ಲಿ ಗ್ರಾಮದ ಉಮಾಪತಿ ಅವರು ವೇಗಮಡುಗು ಗ್ರಾಮದ ಸುಪ್ರಿಯಾ ಮತ್ತು ಲಲಿತಾ ಸಹೋದರಿಯರನ್ನು ಮೇ 7ರಂದು ಮದುವೆಯಾಗಿದ್ದರು. ಇವರ ವಿವಾಹದ ಆಮಂತ್ರಣ ಪತ್ರಿಕೆ ಮತ್ತು ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ADVERTISEMENT

ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಮುಳಬಾಗಿಲು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ರಮೇಶ್‌ ಅವರು ಪರಿಶೀಲನೆ ಮಾಡಿದಾಗ ಲಲಿತಾ ಅವರ ವಯಸ್ಸು 16 ವರ್ಷವೆಂಬ ಸಂಗತಿ ಬಯಲಾಗಿದೆ. ಹೀಗಾಗಿ ರಮೇಶ್‌ ಅವರು ಬಾಲ್ಯವಿವಾಹ ಆರೋಪದಡಿ ಉಮಾಪತಿ ಸೇರಿದಂತೆ 7 ಮಂದಿ ವಿರುದ್ಧ ನಂಗಲಿ ಠಾಣೆಗೆ ದೂರು ಕೊಟ್ಟಿದ್ದರು.

ಉಮಾಪತಿ, ಅವರ ತಂದೆ ಚಿಕ್ಕಚನ್ನರಾಯಪ್ಪ ಮತ್ತು ತಾಯಿ ದೊಡ್ಡ ಲಕ್ಷ್ಮಮ್ಮ, ಬಾಲಕಿಯ ತಂದೆ ನಾಗರಾಜಪ್ಪ ಮತ್ತು ತಾಯಿ ರಾಣೆಮ್ಮ, ವಿವಾಹದ ಆಮಂತ್ರಣ ಪತ್ರಿಕೆ ಮುದ್ರಿಸಿದ್ದ ಮುಳಬಾಗಿಲಿನ ಗಾಯತ್ರಿ ಆಫ್‌ಸೆಟ್‌ ಪ್ರಿಂಟರ್ಸ್‌ ಮಾಲೀಕರು, ಮದುವೆ ನಡೆದ ಚನ್ನರಾಯಸ್ವಾಮಿ ದೇವಾಲಯದ ಅರ್ಚಕರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.