ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ನಿಲಯದ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ. ಗುಂಡಿಗೆ ಇಳಿಸಿದ ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.
‘ಅದು ಮಲದ ಗುಂಡಿ ಅಲ್ಲ; ಸ್ವಚ್ಛತಾ ಅಂದೋಲನ ಅಂಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
‘ಅದು ಮಲದ ಗುಂಡಿ’ ಎಂದು ಅಲ್ಲಿನ ಶಿಕ್ಷಕರೊಬ್ಬರು ಖಚಿತಪಡಿಸಿದ್ದಾರೆ. ‘ಅದು ಮಲದ ಗುಂಡಿ ಅಲ್ಲದಿದ್ದರೂ ಚೇಂಬರ್‌ನೊಳಗಾದರೂ ನಮ್ಮ ಮಕ್ಕಳನ್ನು ಏಕೆ ಇಳಿಸಬೇಕು’ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರ ಸಮ್ಮುಖದಲ್ಲೇ ಏಳರಿಂದ ಒಂಬತ್ತನೇ ತರಗತಿಯ ಐದಾರು ಮಕ್ಕಳನ್ನು ಮಲದ ಗುಂಡಿ ಸ್ವಚ್ಛಗೊಳಿಸಲು ಇಳಿಸಲಾಗಿದೆ. ಈ ಘಟನೆ ಮೂರ‍್ನಾಲ್ಕು ದಿನಗಳ ಹಿಂದೆ ನಡೆದಿರುವುದು ಖಚಿತವಾಗಿದೆ.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿರುವ 6ರಿಂದ 10ನೇ ತರಗತಿಯ ಸುಮಾರು 250 ಮಕ್ಕಳು ಈ ವಸತಿ ನಿಲಯದಲ್ಲಿ ಇದ್ದಾರೆ. ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್‌ಗೆ ಅಲ್ಲಿಯೇ ವಸತಿ ವ್ಯವಸ್ಥೆ ಇದೆ.
‘ಮಲದ ಪಿಟ್‌ನೊಳಗೆ ಇಳಿಸಿ ಕಸ ತೆಗೆಸಿದರು. ನಾವು ಬಕೆಟ್‌ನಲ್ಲಿ ಕಸ ತುಂಬಿ ಕೊಟ್ಟೆವು. ಕೆಲವರು ಮೇಲಿಂದ ನೀರು ಹಾಕಿದರು. ಐದಾರು ಮಕ್ಕಳು ಇದ್ದೆವು. ವಿಪರೀತ ಹಿಂಸೆ ಕೊಡುತ್ತಾರೆ. ಇಲ್ಲಿ ಇರುವುದೇ ಬೇಡ ಅನಿಸುತ್ತಿದೆ’ ಎಂದು ಮಕ್ಕಳು ವಿಡಿಯೊದಲ್ಲಿ ನೋವು ತೋಡಿಕೊಂಡಿದ್ದಾರೆ.
ಮಕ್ಕಳು ಗುಂಡಿಯೊಳಗಿರುವ ಫೋಟೊಗಳನ್ನು ಶಾಲೆಯ ಶಿಕ್ಷಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಯಾರಿಗೂ ಗೊತ್ತಾಗದಂತೆ ಮಕ್ಕಳನ್ನು ಮಾತನಾಡಿಸಿ ವಿಡಿಯೊ ಮಾಡಿದ್ದಾರೆ. ಆ ವಿಡಿಯೊ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಮಾಹಿತಿ ಬಂದ ಕೂಡಲೇ ವಸತಿ ನಿಲಯಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಪ್ರಾಂಶುಪಾಲರು, ಶಿಕ್ಷಕರು ಹಾಗೂ ಮಕ್ಕಳಿಂದ ಮಾಹಿತಿ ಕಲೆಹಾಕಿದ್ದೇವೆ. ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಂಡಿರುವುದು ತಪ್ಪು. ಈ ಸಂಬಂಧ ಆ ಮಕ್ಕಳಿಗೂ ಜಾಗೃತಿ ಮೂಡಿಸಿದ್ದೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನಾ ತಿಳಿಸಿದರು.
ಈ ವಿಷಯ ತಿಳಿಯುತ್ತಲೇ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಆರ್.ಶ್ರೀನಿವಾಸ್ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿರುವುದು ಹಾಗೂ ಅವರಿಗೆ ಹಿಂಸೆ ಕೊಟ್ಟಿರುವ ವಿಚಾರ ಗೊತ್ತಾಗಿದೆ. ಈ ಸಂಬಂಧ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಪ್ರಾಂಶುಪಾಲರು ಹಾಗೂ ವಾರ್ಡನ್ ಸೇರಿದಂತೆ ಯಾರೂ ವಸತಿ ನಿಲಯದಲ್ಲಿ ಇರುವುದಿಲ್ಲ. ಹಿಂಸೆ ತಾಳಲಾರದೆ ಕೆಲ ಮಕ್ಕಳು ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ಊಟ, ತಿಂಡಿಯೂ ಸರಿ ಇಲ್ಲ. ಮಲದ ಗುಂಡಿಗೆ ಮಕ್ಕಳನ್ನು ಇಳಿಸಿರುವ ಬಗ್ಗೆ ದೂರು ಕೊಟ್ಟರೆ ಅಧಿಕಾರಿಗಳು ನಮಗೇ ಬೈಯ್ದು, ಎಚ್ಚರಿಕೆ ಕೊಡುತ್ತಾರೆ’ ಎಂದು ಕೆಲ ಶಿಕ್ಷಕರು ಹಾಗೂ ಪೋಷಕರು ಪತ್ರಿಕೆಗೆ ತಿಳಿಸಿದರು.
‘ರಾತ್ರಿ ಲೈಟ್ ಆಫ್ ಮಾಡಿ ಬ್ಯಾಗ್ ಸಮೇತ ಹಾಸ್ಟೆಲ್ ಹೊರಗಡೆ ಮಂಡಿಯೂರಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಸುಸ್ತಾಗುತ್ತಿದೆ ಎಂದರೂ ಕೇಳಲ್ಲ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಮಕ್ಕಳಿಗೆ ತರಗತಿಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.