ADVERTISEMENT

ಅರಣ್ಯ ಒತ್ತುವರಿ ತೆರವು: ಅಧಿಕಾರ ದುರುಪಯೋಗ ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 13:14 IST
Last Updated 3 ಸೆಪ್ಟೆಂಬರ್ 2023, 13:14 IST
ಶ್ರೀನಿವಾಸಪುರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಮಾತನಾಡಿದರು
ಶ್ರೀನಿವಾಸಪುರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಮಾತನಾಡಿದರು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು, ಒತ್ತುವರಿ ತೆರವು ಕಾರ್ಯಾಚರಣೆ ನೆಪದಲ್ಲಿ ಫಸಲು ನೀಡುತ್ತಿರುವ ಮಾವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ ಎಂದು ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಆಪಾದಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳ ಈ ಅಮಾನವೀಯ ನಡೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ ಹಾಗೂ ಖಂಡನೀಯ ಎಂದು ಹೇಳಿದರು.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಬಯಲು ಸೀಮೆಯ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆ ಕಾನೂನು ಬದ್ಧವಾಗಿ ರೈತರಿಗೆ ಮಂಜೂರು ಮಾಡಿದೆ. ರೈತರು ಸುಮಾರು 40 ವರ್ಷಗಳಿಂದ ಮಾವಿನ ಗಿಡ ನೆಟ್ಟು ಪೋಷಣೆ ಮಾಡಿದ್ದಾರೆ. ಮರಗಳು ಫಸಲು ನೀಡುತ್ತಿವೆ. ಆದರೆ ಅರಣ್ಯ ಇಲಾಖೆ ಪೊಲೀಸ್ ಭದ್ರತೆಯಲ್ಲಿ ತೋಟಗಳಿಗೆ ಯಂತ್ರ ನುಗ್ಗಿಸಿ ಮರಗಳನ್ನು ಧ್ವಂಸ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ಅರಣ್ಯ ಇಲಾಖೆ ಈಗ ಒತ್ತುವರಿ ಎಂದು ಪರಿಗಣಿಸಿ ತೆರವುಗೊಳಿಸುತ್ತಿದೆ. ಆದರೆ 40 ವರ್ಷಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು. ರೈತರು ಮಾವಿನ ಗಿಡ ನೆಟ್ಟು ಪೋಷಿಸುವಾಗ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದರೇ. ಕಂದಾಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎಂದು ದಾಖಲಿಸಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲೆ ಹಾಗೂ ತಾಲ್ಲೂಕಿನ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕು ದಶಕಗಳಿಂದ ಸರ್ಕಾರಿ ಸೌಲಭ್ಯ ಪಡೆದಿದ್ದಾರೆ. ರೈತರ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರ ವೇತನ ಮತ್ತಿತರ ಭತ್ಯೆ ಸೌಲಭ್ಯ ತಡೆಯಬೇಕು. ತಾಲ್ಲೂಕಿನ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರು ರೈತರ ಹಿತರಕ್ಷಣೆ ಮಾಡುವಲ್ಲಿ ಸೋತಿದ್ದಾರೆ ಎಂದು ಹೇಳಿದರು.

ಸರ್ಕಾರ ಮಧ್ಯ ಪ್ರವೇಶಿಸಿ ಮಾವಿನ ಮರಗಳ ಮಾರಣ ಹೋಮ ತಪ್ಪಿಸಬೇಕು. ರೈತರ ಹಿತ ರಕ್ಷಣೆಗೆ ಪೂರಕವಾಗಿ ಅರಣ್ಯ ಜಮೀನು ಕಾಯ್ದೆಗೆ ತಿದ್ದುಪಡಿ ತರಬೇಕು. ಪರಿಸರ ನಾಶಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈಗ ಒತ್ತುವರಿ ಹೆಸರಲ್ಲಿ ತೆರವುಗೊಳಿಸಿರುವ ಮಾವಿನ ತೋಟಗಳ ಮಾಲೀಕರಿಗೆ ಬ್ಯಾಂಕ್ ಮತ್ತು ಆರ್ಥಿಕ ಸಂಸ್ಥೆಗಳು ದೊಡ್ಡ ಮೊತ್ತದ ಸಾಲ ನೀಡಿವೆ. ಬೆಳೆ ನಾಶ ಮಾಡಲಾಗಿರುವುದರಿಂದ ಸಾಲದ ಹೊಣೆ ಯಾರು ವಹಿಸಬೇಕು ಎಂಬ ವಿಚಾರ ಬರುತ್ತದೆ. ರಾಜ್ಯ ಮಾವು ಅಭಿವೃದ್ಧಿ ಮಂಡಲಿ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು, ನಾಗರಾಜ್, ಬಿ.ಎಂ.ಪ್ರಕಾಶ್, ಸತ್ಯನಾರಾಯಣ, ಶ್ರೀನಾಥರೆಡ್ಡಿ, ಓಬಳೇಶ, ಗೋವಿಂದರೆಡ್ಡಿ, ಗುಲ್ಜಾರ್, ನಾರಾಯಣಸ್ವಾಮಿ, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.