ADVERTISEMENT

ಹಿರಿಯ ರಾಜಕಾರಣಿ ಜಾಲಪ್ಪ ನಿಧನ: ಅಂತಿಮ ದರ್ಶನ ಪಡೆದ ಸಿ.ಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 5:19 IST
Last Updated 18 ಡಿಸೆಂಬರ್ 2021, 5:19 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಲಾರದಲ್ಲಿ ಶುಕ್ರವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಲಾರದಲ್ಲಿ ಶುಕ್ರವಾರ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು   

ಕೋಲಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಹಲವು ಸಚಿವರು ಶುಕ್ರವಾರ ರಾತ್ರಿ ಕೇಂದ್ರದ ಮಾಜಿ ಆರ್‌.ಎಲ್‌.ಜಾಲಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಜಾಲಪ್ಪರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಜಾಲಪ್ಪರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಾಲಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ADVERTISEMENT

ಹಿರಿಯ ರಾಜಕಾರಣಿ ಹಾಗೂ ಅಹಿಂದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಕೇಂದ್ರದ ಮಾಜಿ ಜಾಲಪ್ಪರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಆರ್.ಎಲ್.ಜಾಲಪ್ಪ ಅವರು ದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಿದ ಹಾಗೂ ಅಹಿಂದ ವರ್ಗಗಳ ಅಭಿವೃದ್ಧಿಗೆ ದುಡಿದ ಮಹಾನ್ ಚೇತನ. ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ವಿವಿಧ ಇಲಾಖೆಗಳ ಸಚಿವರಾಗಿ, 4 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಮಾಡಿರುವ ಸೇವೆ ಸ್ಮರಣೀಯ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪತ್ರಿಕಾ ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಜಾಲಪ್ಪ ರೈತಪರ ಕಾಳಜಿಯಿಂದ ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದರು. ಅಹಿಂದ ವರ್ಗಗಳನ್ನು ಸಂಘಟಿಸಿ ಕೋಲಾರದಲ್ಲಿ ಸಮ್ಮೇಳನ ಮಾಡಿ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್, ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಿಸಿ ಸಮುದಾಯಗಳಿಗೆ ಚೈತನ್ಯ ತುಂಬಿದರು ಎಂದು ಹೇಳಿದ್ದಾರೆ.

ಜಾಲಪ್ಪ ಅವರು ಪಿಎಲ್‌ಡಿ ಬ್ಯಾಂಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅಹಿಂದ ವರ್ಗಗಳಿಗೆ ಅವರು ಸ್ಫೂರ್ತಿಯಾಗಿದ್ದರು. ಕಳೆದ ಕೆಲ ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರವಿದ್ದರೂ ಅನೇಕರು ಅವರ ಮಾರ್ಗದರ್ಶನ ಪಡೆಯುತ್ತಿದ್ದರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವರ ನೀಡಿರುವ ಕೊಡುಗೆ ಮರೆಯಲಾಗದು ಎಂದು ಬಣ್ಣಿಸಿದ್ದಾರೆ.

ಸಮಾಜಕ್ಕೆ ಮಾದರಿ: ನೇರ ನಡೆ ನುಡಿಯ ಜಾಲಪ್ಪ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರು ಕೋಲಾರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ಆಸ್ಪತ್ರೆಯಲ್ಲಿ ಜಿಲ್ಲೆಯ ಜತೆಗೆ ಅಕ್ಕಪಕ್ಕದ ಗಡಿ ರಾಜ್ಯಗಳ ರೋಗಿಗಳಿಗೂ ವೈದ್ಯಕೀಯ ಸೇವೆ ಪಡೆಯುತ್ತಿದ್ದಾರೆ. ಜಾಲಪ್ಪರ ಜನಪರ ಕಾಳಜಿ ಸಮಾಜಕ್ಕೆ ಮಾದರಿ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಜಾಲಪ್ಪ ಅವರು ನಿಜಕ್ಕೂ ಬಡವರ ಪಾಲಿನ ಆಶಾಕಿರಣ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮೂಲಕ ಲಕ್ಷಾಂತರ ರೋಗಿಗಳ ಜೀವ ಉಳಿಸಿರುವ ಅವರ ಸೇವೆ ಮರೆಯಲಾಗದು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಧೀಮಂತ ರಾಜಕಾರಣಿ ಜಾಲಪ್ಪ ಅವರು ಸಹಕಾರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಸಹಕಾರ ಸಚಿವರಾಗಿದ್ದ ವೇಳೆ ಮಾಡಿದ ಬಡ್ಡಿ ಮನ್ನಾದಿಂದ ರೈತರ ಬದುಕು ಹಸನಾಯಿತು ಮತ್ತು ಸಹಕಾರಿ ಸಂಸ್ಥೆಗಳ ಚೇತರಿಕೆ ಆಯಿತು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.