ಕೋಲಾರ: ‘ನಾನು ಅಚಾನಕ್ಕಾಗಿ ಶಾಸಕನಾದೆ, ಒಂದೊಳ್ಳೆ ಅವಕಾಶ ಸಿಕ್ಕಿ ಸಚಿವನೂ ಆದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಕಷ್ಟು ಒತ್ತಡವಿರುವುದರಿಂದ ನನ್ನ ರಾಜೀನಾಮೆ ಪಡೆದಿದ್ದಾರೆ’ ಎಂದು ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ನಾಗೇಶ್ ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಗುರುವಾರ ಜಿಲ್ಲೆಗೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಸಂಪುಟ ವಿಸ್ತರಣೆಯ ಸಂಕಷ್ಟಕ್ಕೆ ಸಿಲುಕಿದ್ದ ಮುಖ್ಯಮಂತ್ರಿಗಳಿಗೆ ನನ್ನ ಬೆಂಬಲ ಕೂಡ ಬೇಕಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಕೊಟ್ಟ ಮೊದಲನೇ ಸಚಿವ ನಾನು’ ಎಂದು ತಿಳಿಸಿದರು.
‘ರಾಜೀನಾಮೆ ಕೊಟ್ಟಾಗ ಸಾಕಷ್ಟು ಮಂದಿ ಆಡಿಕೊಂಡರು. ನಾನು ರಾಜೀನಾಮೆ ಕೊಟ್ಟಿರುವುದು ಮಿತ್ರ ಮಂಡಳಿಯ ಸಾಕಷ್ಟು ಮಂದಿಗೆ ನೋವು ತಂದಿದೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಈಗಾಗಲೇ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನನಗೆ ಮತ್ತು ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆಯಿದೆ. ಮಿತ್ರ ಮಂಡಳಿಯ ಎಲ್ಲರೂ ಒಟ್ಟಾಗಿದ್ದೇವೆ, ನಮ್ಮಲ್ಲಿ ಒಡಕಿಲ್ಲ’ ಎಂದರು.
‘ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿಗಳು ಒಳ್ಳೆಯ ಖಾತೆ ಕೊಟ್ಟಿದ್ದರು. ಅವರಿಗೆ ಕೃತಜ್ಞನಾಗಿದ್ದೇನೆ. ಭವಿಷ್ಯದಲ್ಲಿ ನನಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷಗಾದಿ ನೀಡಿರುವುದಕ್ಕೆ ಸಮಾಧಾನವಿದೆ. ರಾಜ್ಯದೆಲ್ಲೆಡೆ ಓಡಾಡಿ ಜನರ ಸೇವೆ ಮಾಡುತ್ತೇನೆ. ಯಾರೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದರೂ ಅವರಿಗೆ ನನ್ನ ಬೆಂಬಲವಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.