ADVERTISEMENT

ಕೋಲಾರ: ಮಲೇರಿಯಾ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:31 IST
Last Updated 25 ಏಪ್ರಿಲ್ 2019, 19:31 IST

ಕೋಲಾರ: ‘ಕೋಲಾರವನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಕೋರಿದರು.

ನಗರದಲ್ಲಿ ವಾರ್ತಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರವು ಪ್ರತಿ ವರ್ಷ ಏ.25ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬುದು ಈ ವರ್ಷದ ಘೋಷವಾಖ್ಯವಾಗಿದೆ’ ಎಂದರು.

‘2025ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, 2018ರಲ್ಲಿ 8 ಪ್ರಕರಣಗಳು ದೃಢಪಟ್ಟಿದ್ದರೆ ಪ್ರಸಕ್ತ ಸಾಲಿನಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ’ ಎಂದು ಹೇಳಿದರು.

ADVERTISEMENT

‘2018ರಲ್ಲಿ 28,4,370 ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಕೋಲಾರದಲ್ಲಿ 3 ಬಂಗಾರಪೇಟೆ 3, ಮುಳಬಾಗಿಲಿನಲ್ಲಿ 2 ಪ್ರಕರಣ ದೃಢಪಟ್ಟಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 2019ರಲ್ಲಿ ಮಾರ್ಚ್ ಅಂತ್ಯದವರೆಗೆ 76,040 ಮಂದಿಯ ರಕ್ತದ ಮಾದರಿ ಸಂಗ್ರಹ ಮಾಡಲಾಗಿ ಯಾವುದೇ ಪ್ರಕರಣ ಕಂಡು ಬಂದಿಲ್ಲ’ ಎಂದು ವವಿರಿಸಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಮಾತನಾಡಿ, ‘ಮಲೇರಿಯಾವನ್ನು 2025ರೊಳಗೆ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ರೋಗವಾಹಕದ ಶೀಘ್ರ ಪತ್ತೆಗೆ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಸೇರಿದಂತೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಕೀಟನಾಶಕಗಳ ಸಿಂಪರಣೆ, ಜೈವಿಕ ನಿಯಂತ್ರಣ ವಿಧಾನಗಳ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಲಾಗುತ್ತಿದೆ’ ಎಂದರು.

‘2010ರಲ್ಲಿ 739 ಮಲೇರಿಯಾ ಪ್ರಕರಣ ದೃಢಪಟ್ಟಿತ್ತು. 2011ರಲ್ಲಿ 115, 2012ರಲ್ಲಿ 111, 2013ರಲ್ಲಿ 107, 2014ರಲ್ಲಿ 37, 2015ರಲ್ಲಿ 33 ಪ್ರಕರಣ ಪತ್ತೆಯಾಗಿವೆ. ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಕಾರ್ಯಕ್ರಮದಡಿ 2016ರಲ್ಲಿ ಮಲೇರಿಯಾ ನಿರ್ಮೂಲನೆಗೆ ಆಂದೋಲನ ಪ್ರಾರಂಭಿಸಲಾಯಿತು. ಇದರ ಪರಿಣಾಮ ಮಲೇರಿಯಾ ನಿಯಂತ್ರಣಕ್ಕೆ ಬಂದು ಕೇವಲ 14 ಪ್ರಕರಣ ದೃಢಪಟ್ಟರೆ 2017ರಲ್ಲಿ 11 ಪ್ರಕರಣಗಳು ದೃಢಪಟ್ಟಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಭಾರತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್, ಶ್ರೀನಿವಾಸಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.