ADVERTISEMENT

ಕೋಲಾರ: ಹುತಾತ್ಮ ಯೋಧರಿಗೆ ಕಾಂಗ್ರೆಸ್‌ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:01 IST
Last Updated 26 ಜೂನ್ 2020, 15:01 IST
ಕೋಲಾರದಲ್ಲಿ ಕಾಂಗ್ರೆಸ್‌ ಮುಖಂಡರು ಶುಕ್ರವಾರ ಹುತಾತ್ಮ ಯೋಧರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ ನಡೆಸಿದರು.
ಕೋಲಾರದಲ್ಲಿ ಕಾಂಗ್ರೆಸ್‌ ಮುಖಂಡರು ಶುಕ್ರವಾರ ಹುತಾತ್ಮ ಯೋಧರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ ನಡೆಸಿದರು.   

ಕೋಲಾರ: ಚೀನಾ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಗಾಂಧಿವನದಲ್ಲಿ ಶುಕ್ರವಾರ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಶಾಸಕರಾದ ಕೆ.ಆರ್ ರಮೇಶ್‌ಕುಮಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಜೀರ್‌ ಅಹಮ್ಮದ್‌ ಹಾಗೂ ಮುಖಂರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹುತಾತ್ಮ ಯೋಧರ ಗುಣಗಾನ ಮಾಡಿದರು.

‘ಚೀನಾ ಜತೆಗಿನ ಸಂಘರ್ಷದಲ್ಲಿ ದೇಶದ ಯೋಧರು ಹುತಾತ್ಮರಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ತುಟಿ ಬಿಚ್ಚುತ್ತಿಲ್ಲ. ಇದರ ಹಿಂದಿನ ಮರ್ಮವೇನು ಎಂಬುದು ಎಲ್ಲರಿಗೂ ಅರ್ಥವಾಗಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಟೀಕಿಸಿದರು.

ADVERTISEMENT

‘ದೇಶದಲ್ಲಿ ಕಳೆದ 15 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ತೈಲೋತ್ಪನ್ನಗಳ ಬೆಲೆ ಏರುತ್ತಲೇ ಸಾಗಿದೆ. ತೈಲೋತ್ಪನ್ನಗಳ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರದ ವೈಫಲ್ಯ ಖಂಡಿಸಿ ಕಿಸಾನ್ ಖೇತ್ ಘಟಕದಿಂದ ಜೂ 28ರಂದು ಪೆಟ್ರೋಲ್ ಬಂಕ್‌ಗಳಲ್ಲಿ ₹ 1 ಚಳವಳಿ ಮತ್ತು ಜೂನ್‌ 29ರಂದು ಬಂಗಾರಪೇಟೆಯಲ್ಲಿ ಬೈಕ್‌ ತಳ್ಳುವ ವಿನೂತನ ಹೋರಾಟ ನಡೆಸುತ್ತೇವೆ’ ಎಂದರು.

‘ಕೋವಿಡ್‌–19ರ ಸಂಕಷ್ಟದ ಪರಿಸ್ಥಿತಿ ನಿಯಂತ್ರಿಸುವಲ್ಲೂ ಕೇಂದ್ರ ವಿಫಲವಾಗಿದೆ. ಮೋದಿ ಅವರು ನಮಸ್ತೇ ಟ್ರಂಪ್ ಕಾರ್ಯಕ್ರಮ ಮಾಡುವ ಮೂಲಕ ಕೊರೊನಾ ಸೋಂಕು ದೇಶಕ್ಕೆ ಕರೆಸಿಕೊಂಡಿದ್ದಾರೆ. ದೇಶದ ಜಿಡಿಪಿ-4.5ಕ್ಕೆ ಕುಸಿದಿದೆ. ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಮೋದಿ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.