ಕೋಲಾರ: ‘60 ವರ್ಷಗಳಿಂದ ಜನರಿಗೆ ವಾಂತಿ ಬರುವಷ್ಟರ ಮಟ್ಟಿಗೆ ನೆಹರೂ ಅವರನ್ನು ಕಾಂಗ್ರೆಸ್‌ನವರು ಪ್ರಚಾರ ಮಾಡಿದ್ದಾರೆ. ಅವರ ಹೆಸರು ಕೇಳಿ ಎಲ್ಲರಿಗೂ ಸಾಕಾಗಿ ಹೋಗಿದೆ’ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
‘ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಬಿಟ್ಟು ವೀರ್ ಸಾವರ್ಕರ್ ಫೋಟೊ ಹಾಕಿರುವುದನ್ನು ಕೆಲವರು ಟೀಕಿಸಿದ್ದಾರೆ. ಭಾವಚಿತ್ರ ಬಿಟ್ಟಿರುವುದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ನೆಹರೂ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲಿಲ್ಲ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರನ್ನು ಕತ್ತಲೆಯ ಕೋಣೆಯಲ್ಲಿಟ್ಟು ನೆಹರೂ ಕುಟುಂಬವನ್ನು ದೇಶಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಹೀಗಾಗಿ, ಕತ್ತಲೆ ಕೋಣೆಯಲ್ಲಿದ್ದವರನ್ನು ಬಿಜೆಪಿ ಹೊರಗೆ ತಂದಿದೆ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಜಾಹೀರಾತಿನ ಮೇಲ್ಭಾಗದಲ್ಲಿ ನೆಹರೂ ಭಾವಚಿತ್ರವೂ ಇದೆ. ಆದರೆ, ಅವರಿಗೆ ಅದು ಕಂಡಿಲ್ಲ. ಇನ್ನೂ ಎರಡು ಭಾವಚಿತ್ರ ಹಾಕಬೇಕಿತ್ತೇನೋ? ಅಥವಾ ಎಲ್ಲರನ್ನು ಬದಿಗೆ ಸರಿಸಿ ನೆಹರೂ ಭಾವಚಿತ್ರ ಮಾತ್ರ ಹಾಕಿದ್ದರೆ ಕಾಂಗ್ರೆಸ್‌ನವರಿಗೆ ಖುಷಿ ಆಗುತಿತ್ತು’ ಎಂದು ವ್ಯಂಗ್ಯವಾಡಿದರು.
‘ದೇಶಕ್ಕಾಗಿ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಪ್ರತಿಯೊಬ್ಬರನ್ನೂ ನೆನಪಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಎಲ್ಲದಕ್ಕಿಂತ ಮಿಗಿಲಾಗಿ ಸಾವರ್ಕರ್ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು. ಅವರ ಚರಿತ್ರೆಯನ್ನೇ ಮುಚ್ಚಿ ಹಾಕಿದ್ದರು. ಆ ಚರಿತ್ರೆಯನ್ನು ಹೊರಗೆ ತರುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ’ ಎಂದರು.
‘ಬೇರೆಯವರಿಗೆ ನೋವಾಗಿದ್ದಾರೆ ನಾವೇನು ಮಾಡಲು ಸಾಧ್ಯ? ಪ್ರತಿಯೊಬ್ಬರನ್ನೂ ನೆನಪಿಸುವ ಕೆಲಸವನ್ನು ಬಿಜೆಪಿ ಮಾಡಿದೆ’ ಎಂದು ಹೇಳಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನೆಹರೂ ಕುಟುಂಬ ಒಂದೇ ಕೆಲಸ ಮಾಡಿಲ್ಲ. ಲಕ್ಷಾಂತರ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನೂ ಹಲವರ ಹೆಸರನ್ನು ಹುಡುಕಿ ತೆಗೆಯಬೇಕಿದೆ’ ಎಂದರು.
‘ದೇಶ ವಿಭಜನೆ ಆಗಲು ಯಾರು ಕಾರಣ? ಪ್ರಧಾನಿಯಾಗಲು ಯಾರಿಗೆ ಬಹುಮತ ಇತ್ತು? ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಯಾವ ರೀತಿ ನಿರ್ಲಕ್ಷಿಸಲಾಯಿತು ಎಂಬುದು ದೇಶದ ಜನರಿಗೆ ಗೊತ್ತಿದೆ. ನೆಹರೂ ಅವರನ್ನು ಬಿಜೆಪಿ ನಿರ್ಲಕ್ಷಿಸಿಲ್ಲ. ಇದು ಕಾಂಗ್ರೆಸ್‌ನ ಸ್ವಯಂಕೃತ ಅಪರಾಧ’ ಎಂದು ಹೇಳಿದರು.
‘ಶಿವಮೊಗ್ಗದಲ್ಲಿನ ಕೃತ್ಯವನ್ನು ಖಂಡಿಸುತ್ತೇನೆ. ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ದೇಶವಿರೋಧ ಚಟುವಟಿಕೆಗಳನ್ನು ಯಾರೇ, ಯಾವುದೇ ಸಮುದಾಯ ಮಾಡಿದರೂ ಸಹಿಸಲ್ಲ. ಅಂಥವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಇಂಥ ಕೃತ್ಯ ಎಸಗುವವರಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.