ಬಂಗಾರಪೇಟೆ: ಕಾಮಸಮುದ್ರ ರೈಲ್ವೆ ಗೇಟ್ ಕ್ರಾಸಿಂಗ್ ವೇಳೆ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬ ಸ್ಥಳೀಯರ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
ಇದರ ಬಗ್ಗೆ ಗಮನಹರಿಸಬೇಕಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಚೆನ್ನೈ–ಬೆಂಗಳೂರು ರೈಲು ಮಾರ್ಗ ಕಾಮಸಮುದ್ರ ಬಳಿ ಹಾದು ಹೋಗುತ್ತದೆ. ಇದೇ ಹಳಿಗೆ ಅಡ್ಡಲಾಗಿರುವ ರಸ್ತೆ ತಾಲ್ಲೂಕಿನ ಮುಖ್ಯ ರಸ್ತೆಯಾಗಿದೆ. ಹಲವು ಗ್ರಾಮಗಳ ಸಂಪರ್ಕ ಕೊಂಡಿಯಾಗಿದೆ. ತಮಿಳುನಾಡಿನ ಕೃಷ್ಣಗಿರಿ, ಹೊಸೂರು, ವೇಪನಪೆಲ್ಲಿ ಮತ್ತು ಬಂಗಾರಪೇಟೆ ಮತ್ತು ಕೆಜಿಎಫ್‌ಗೆ ಸಂಪರ್ಕ ಕಲ್ಪಿಸುತ್ತದೆ.
ಬಂಗಾರಪೇಟೆ–ಕೆಜಿಎಫ್, ಕೋಲಾರ ಸೇರಿದಂತೆ ಹಲವು ಕಡೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ತಮಿಳುನಾಡಿಗೆ ಸಾಗುವ ಸರಕು ಸಾಗಾಣಿಕೆ ವಾಹನಗಳನ್ನು ಇದೇ ರಸ್ತೆಯನ್ನು ಅವಲಂಬಿಸಿವೆ. ಹೀಗಾಗಿ ಸದಾ ಈ ರಸ್ತೆ ವಾಹನ ದಟ್ಟನೆಯಿಂದ ಕೂಡಿರುತ್ತದೆ.
ಈ ಮಾರ್ಗದಲ್ಲಿ ದಿನಕ್ಕೆ 170 ರೈಲುಗಳ ಸಂಚರಿಸುತ್ತವೆ. ಕಾಮಸಮುದ್ರ ರೈಲ್ವೆ ಗೇಟ್ ಅನ್ನು ದಿನಕ್ಕೆ 170 ಬಾರಿ ಮುಚ್ಚಿ, ತೆಗೆಯಲಾಗುತ್ತದೆ. ಇದರಿಂದ ವಾಹನ ಸವಾರರು ಕಾದು ಕಾದು ಸುಸ್ತಾಗುತ್ತಿದ್ದಾರೆ.
ಹೀಗಾಗಿ ಇಲ್ಲೊಂದು ರೈಲ್ವೆಗೇಟ್ ನಿರ್ಮಾಣ ಮಾಡಬೇಕೆಂಬ ಸ್ಥಳೀಯರು ದಶಕದಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೆ ಸ್ಥಳೀಯ ಆಡಳಿತವಾಗಲಿ, ಶಾಸಕರಾಗಲಿ ಜನರ ಮನವಿಗೆ ಇದುವರೆಗೆ ಸ್ಪಂದಿಸಿಲ್ಲ. ಹೊಸ ಸರ್ಕಾರ ಬಂದಾಗಲೆಲ್ಲ ರೈಲ್ವೆ ಮೇಲ್ಸೇತುವೆ ನಿರ್ಮಾಣ ಆಗುತ್ತದೆ ಎಂಬ ನಿರೀಕ್ಷೆ ಪ್ರತಿಬಾರಿಯೂ ಹುಸಿ ಆಗುತ್ತಿದೆ.
ಕಚೇರಿಗೆ ತೆರಳುವ ಸಮಯದಲ್ಲಿ ರೈಲ್ವೆ ಗೇಟ್ ಬಳಿ 30 ನಿಮಿಷ ಕಾಯಬೇಕು. ಇದರಿಂದ ಪ್ರತಿನಿತ್ಯ ಕಚೇರಿಗೆ ಹೋಗುವುದು ತಡವಾಗುತ್ತಿದೆ.ರಾಘವೇಂದ್ರ ಕೀರುಮಂದೆ, ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.