ADVERTISEMENT

ಮಲೇರಿಯಾ ಮುಕ್ತ ಭಾರತಕ್ಕೆ ಸಹಕರಿಸಿ: ಕಮಲಾ ಮನವಿ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಮಲಾ ಮನವಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:00 IST
Last Updated 30 ಏಪ್ರಿಲ್ 2021, 15:00 IST
ಡಾ.ಎಂ.ಕಮಲಾ
ಡಾ.ಎಂ.ಕಮಲಾ   

ಕೋಲಾರ: ‘ಮಲೇರಿಯಾ ಮುಕ್ತ ಭಾರತಕ್ಕೆ ಸಹಕರಿಸಿ. 2025ರೊಳಗೆ ಈ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚಿಸುವ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಲೇರಿಯಾ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ರೋಗದ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಮಲೇರಿಯಾ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಯಾವುದೇ ಜ್ವರ ಮಲೇರಿಯಾ ಇರಬಹುದು. ಆದ್ದರಿಂದ ಜ್ವರ ಬಂದ ತಕ್ಷಣ ವ್ಯಕ್ತಿಗಳನ್ನು ಗುರುತಿಸಿ ರಕ್ತ ಪರೀಕ್ಷೆ ಮಾಡಬೇಕು. ರಕ್ತ ಸಂಗ್ರಹಿಸಿದ 24 ತಾಸಿನೊಳಗೆ ಪರೀಕ್ಷಾ ಫಲಿತಾಂಶವನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಖಚಿತಪಡಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ರಕ್ತ ಪರೀಕ್ಷೆಯಿಂದ ಮಲೇರಿಯಾ ರೋಗವೆಂದು ದೃಢಪಟ್ಟರೆ ರೋಗಿಗಳ ವಯಸ್ಸಿಗೆ ಅನುಗುಣವಾಗಿ ಕ್ಲೋರೋಕ್ವಿನ್ ಮತ್ತು ಪ್ರಿಮೋಕ್ವಿನ್ ಮಾತ್ರೆ ನೀಡುವ ಮೂಲಕ ರೋಗ ಗುಣಪಡಿಸಬಹುದು. ಈ ಮಾತ್ರೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಆರೋಗ್ಯ ಕಾರ್ಯಕರ್ತರ ಬಳಿ ಉಚಿತವಾಗಿ ದೊರೆಯುತ್ತವೆ’ ಎಂದರು.

ಲಕ್ಷಣಗಳು: ‘ಹೆಚ್ಚು ಚಳಿ, ನಡುಕದ ಜತೆ ಜ್ವರ, ಚಳಿಯ ನಂತರದ ವಿಪರೀತ ಜ್ವರ, ವಾಂತಿ, ತಲೆ ನೋವು, ಜ್ವರ ಕಡಿಮೆಯಾಗುವ ಸಮಯದಲ್ಲಿ ಬೆವರುವುದು, ಜ್ವರ ಕಡಿಮೆಯಾದ ನಂತರ ಸುಸ್ತು ಮತ್ತು ನಿಶಕ್ತಿಯು ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳು. ಮಲೇರಿಯಾ ಸೋಂಕಿನಿಂದ ಗರ್ಭಿಣಿಯರಲ್ಲಿ ಗರ್ಭಪಾತದ ಸಮಸ್ಯೆ ಕಾಡುತ್ತದೆ’ ಎಂದು ಹೇಳಿದರು.

‘ಮಲೇರಿಯಾ ಪೀಡಿತ ವ್ಯಕ್ತಿಯನ್ನು ಕಚ್ಚಿದ ಹೆಣ್ಣು ಅನಾಪಿಲಿಸ್ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದರೆ ರೋಗ ಹರಡುತ್ತದೆ. 10ರಿಂದ 14 ದಿನದೊಳಗೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತವೆ. ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡುವ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮಲೇರಿಯಾ ರೋಗಿಗಳ ರಕ್ತ ಮಾದರಿ ಸಂಗ್ರಹಿಸಿ ಶಂಕಿತ ಪ್ರಕರಣ ಕಂಡುಬಂದರೆ ಮಾತ್ರೆ ನೀಡುತ್ತಾರೆ’ ಎಂದರು.

ಸೊಳ್ಳೆ ನಿಯಂತ್ರಣ: ‘ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶದ ಜ್ವರ ಚಿಕಿತ್ಸಾ ಕೇಂದ್ರಗಳಲ್ಲಿ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಅನಾಪಿಲಿಸ್ ಸೊಳ್ಳೆಗಳ ಕಡಿತದಿಂದ ರೋಗ ಹರಡುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸುವುದು ಅತಿ ಮುಖ್ಯ’ ಎಂದು ಮಾಹಿತಿ ನೀಡಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಕೀಟನಾಶಕ ಸಿಂಪಡಣೆ, ಧೂಮೀಕರಣ, ಲಾರ್ವ ನಾಶಕ, ಕೀಟನಾಶಕಗಳ ಬಳಕೆ
ಶಿಫಾರಸು ಮಾಡಲಾಗುತ್ತದೆ. ಲಾರ್ವ ನಾಶಕ್ಕೆ ಜೈವಿಕ ಕ್ರಮವಾಗಿ ಲಾರ್ವ ಹಾನಿ ಮೀನುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಅಭಿವೃದ್ಧಿಪಡಿಸಿ ರೋಗವಾಹಕಗಳ ನಿಯಂತ್ರಣ ಮಾಡುವುದು. ಸೊಳ್ಳೆ ಪರದೆ ಬಳಕೆ, ಸೊಳ್ಳೆ ಬತ್ತಿ, ಬೇವಿನ ಸೊಪ್ಪು ಹೊಗೆ ಹಾಕುವುದು, ಕಿಟಕಿಗಳಿಗೆ ಮೆಶ್ ಅಳವಡಿಕೆ, ಸೊಳ್ಳೆ ನಿರೋಧಕ ಲೇಪನಗಳ ಬಳಕೆಯಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.