ADVERTISEMENT

ಕೋಲಾರ–ಚಿಕ್ಕಬಳ್ಳಾಪುರ DCC ಬ್ಯಾಂಕ್‌: ₹9.87 ಕೋಟಿ ಗುಳುಂ; ವಸೂಲಿ ₹1.84 ಕೋಟಿ!

4 ಶಾಖೆಗಳಲ್ಲಿ ಅವ್ಯವಹಾರ, ಮತ್ತೊಬ್ಬ ವ್ಯವಸ್ಥಾಪಕ ಅಮಾನತು

ಕೆ.ಓಂಕಾರ ಮೂರ್ತಿ
Published 8 ನವೆಂಬರ್ 2024, 6:57 IST
Last Updated 8 ನವೆಂಬರ್ 2024, 6:57 IST
ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿ
ಡಿಸಿಸಿ ಬ್ಯಾಂಕ್‌ ಮುಖ್ಯ ಕಚೇರಿ   

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ಒಟ್ಟು ₹9.87 ಕೋಟಿ ಅವ್ಯವಹಾರ ನಡೆದಿದ್ದು, ಈವರೆಗೆ ಕೇವಲ ₹1.84 ಕೋಟಿಯಷ್ಟೇ ವಸೂಲಿಯಾಗಿದೆ.

2017ರಿಂದ 2022ರವರೆಗಿನ ಅವಧಿಯಲ್ಲಿ ಕೋಲಾರ ಶಾಖೆಯಲ್ಲಿ ₹1.5 ಕೋಟಿ, ಕೆಜಿಎಫ್‌ ಶಾಖೆಯಲ್ಲಿ ₹4.17 ಕೋಟಿ, ಚಿಂತಾಮಣಿ ಶಾಖೆಯಲ್ಲಿ ₹2.28 ಕೋಟಿ ಹಾಗೂ ಗುಡಿಬಂಡೆ ಶಾಖೆಯಲ್ಲಿ ₹1.96 ಕೋಟಿ ಸೇರಿದಂತೆ ಡಿಸಿಸಿ ಬ್ಯಾಂಕ್‌ನ ನಾಲ್ಕು ಶಾಖೆಗಳಲ್ಲಿ ಒಟ್ಟು ₹9.87 ಕೋಟಿ ಅವ್ಯವಹಾರ ನಡೆದಿರುವ ಆರೋಪವಿದೆ.

ಈವರೆಗೆ ಕೋಲಾರ ಶಾಖೆಯಿಂದ ₹55 ಲಕ್ಷ, ಕೆಜಿಎಫ್‌ ಶಾಖೆಯಿಂದ ₹44 ಲಕ್ಷ ಹಾಗೂ ಚಿಂತಾಮಣಿ ಶಾಖೆಯಿಂದ ₹85 ಲಕ್ಷ ಸೇರಿ ಒಟ್ಟು ₹1.84 ಕೋಟಿ ವಸೂಲಾತಿ ಮಾಡಲಾಗಿದೆ. ವಸೂಲಾತಿ ಪ್ರಕ್ರಿಯೆ ಮುಂದುವರಿದಿದೆ ಎಂದು ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ಎನ್‌.ಶೀಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈಗಾಗಲೇ ಅಮಾನತುಗೊಂಡಿರುವ ಕೋಲಾರ ಶಾಖೆಯ ಅಮರೇಶ್‌ ಎಂ. ಹಾಗೂ ಕೆಜಿಎಫ್‌ ಶಾಖೆ ವ್ಯವಸ್ಥಾಪಕರಾಗಿದ್ದ ಗಿರೀಶ್‌ ಜಿ.ಎನ್‌. ವಿರುದ್ಧ ಎಫ್‌ಐಆರ್‌ ದಾಖಲಿಸಲು ಡಿಸಿಸಿ ಬ್ಯಾಂಕ್‌ ಸಿದ್ಧತೆ ನಡೆಸಿದೆ.

ಅಲ್ಲದೇ, ಕೆಜಿಎಫ್‌ ಶಾಖೆಯ ವ್ಯವಸ್ಥಾಪಕರಾಗಿದ್ದ ಟಿ.ಆರ್‌.ಮಂಜುನಾಥ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರು ಸದ್ಯ ಮಾಲೂರು ಶಾಖೆಯಲ್ಲಿ ಹೆಚ್ಚುವರಿ ಪ್ರಭಾರ ವ್ಯವಸ್ಥಾಪಕರಾಗಿದ್ದಾರೆ. ಅವರ ಸ್ಥಾನಕ್ಕೆ ಹೊಸದಾಗಿ ಹೆಚ್ಚುವರಿ ಪ್ರಭಾರ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ.

ಗುಡಿಬಂಡೆ ಶಾಖೆ ನೌಕರರಾದ ಸುವರ್ಣ ಮೂರ್ತಿ ಹಾಗೂ ಅನಿಲ್‌ ಕುಮಾರ್‌ ವಿರುದ್ಧ ಇಲಾಖೆ ಹಂತದ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಆಂತರಿಕಾ ತನಿಖೆ ಕೂಡ ನಡೆಯುತ್ತಿದೆ. ತಪ್ಪಿಸ್ಥರು ಎಂಬುದು ಸಾಬೀತಾದರೆ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ವ್ಯವಸ್ಥಾಪಕರಾದ (ಮ್ಯಾನೇಜರ್‌) ಕೋಲಾರ ಶಾಖೆಯ ಅಮರೇಶ್‌ ಎಂ., ಕೆಜಿಎಫ್‌ ಶಾಖೆಯ ಗಿರೀಶ್‌ ಜಿ.ಎನ್‌., ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಶಾಖೆಯ ನಾಗರಾಜ್‌ ಜಿ., ಗುಂಡಿಬಂಡೆ ಶಾಖೆಯ ಸುವರ್ಣಮೂರ್ತಿ ಹಾಗೂ ಸಿಬ್ಬಂದಿ ಅನಿಲ್‌ ಕುಮಾರ್ ಅವರನ್ನು ವಿವಿಧ ಹಂತಗಳಲ್ಲಿ ಅಮಾನತುಗೊಳಿಸಲಾಗಿದೆ.

ಮೇಲ್ವಿಚಾರಕರಾದ (ಸೂಪರ್‌ವೈಸರ್‌) ಕೆಜಿಎಫ್‌ ಶಾಖೆಯ ಮನೋಹರ್‌ ವಿ., ಕೋಲಾರ ಶಾಖೆಯ ಅಮೀನ ಎಂ.ಎ ಹಾಗೂ ಚಿಂತಾಮಣಿ ಶಾಖೆಯ ಸಂತೋಷ್‌ ಕೆ. (ಸದ್ಯ ಶಿಡ್ಲಘಟ್ಟ ಶಾಖೆ) ಅವರನ್ನು ಅಮಾನತುಗೊಳಿಸಲಾಗಿದೆ.

ಈ ನಾಲ್ಕು ಶಾಖೆಗಳಲ್ಲಿ 2020–21 ಹಾಗೂ 2021–22 ನೇ ಸಾಲಿನಲ್ಲಿ ಒಟ್ಟು ₹9.87 ಕೋಟಿ ಅವ್ಯವಹಾರ ನಡೆದಿರುವ ಸಂಬಂಧ‌ ಬಂದ ದೂರುಗಳು ಹಾಗೂ ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿಗಳು ತನಿಖೆ ನಡೆಸಿ ನೀಡಿದ ವರದಿ ಆಧಾರದ ಮೇಲೆ ಡಿಸಿಸಿ ಬ್ಯಾಂಕ್‌ನ ಸಿಇಒ ಶೀಲಾ ಕ್ರಮ ವಹಿಸಿದ್ದಾರೆ.

ಚಿಂತಾಮಣಿ ಹಾಗೂ ಗುಂಡಿಬಂಡೆ ಶಾಖೆಗಳಲ್ಲಿ ಈಗಾಗಲೇ ಅಲ್ಲಿನ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ಆಗಿದೆ. ಕೋಲಾರ ಶಾಖೆ ಹಾಗೂ ಕೆಜಿಎಫ್‌ ಶಾಖೆಗಳಿಗೆ ಸಂಬಂಧಿಸಿದಂತೆ ಈವರೆಗೆ ಪ್ರಕರಣ ದಾಖಲಾಗಿಲ್ಲ.

ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಸಾಲವನ್ನು ವಸೂಲಾತಿ ಆಧಾರದ ಮೇಲೆ ಬಡ್ಡಿ ಸಹಾಯಧನ ಪಡೆಯಲು ಅವಕಾಶವಿದೆ. ಈ ಶಾಖೆ ಅಧಿಕಾರಿಗಳು ಸರ್ಕಾರದಿಂದ ಬರಬೇಕಾದ ಬಡ್ಡಿ ಬಾಬತ್ತು ಎಂಬ ನಕಲಿ ಖಾತೆ ಸೃಷ್ಟಿಸಿ, ವಸೂಲಾತಿ ತೋರಿಸಿ ಬಡ್ಡಿ ತೆಗೆದುಕೊಂಡಿದ್ದಾರೆ. ಬೇನಾಮಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲವನ್ನು ಪಡೆದು, ಆ ಸಂಘಗಳ ವಸೂಲಿಗೆ ಬ್ಯಾಂಕ್‌ನ ಬಂಡವಾಳವನ್ನು ಬಳಸಿ ದುರುಪಯೋಗಪಡಿಸಿ ಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಹಣ ದುರುಪಯೋಗ ಸಂಬಂಧ ಚಂಜಿಮಲೆಯ ಮುನೀಶ್ ಡಿ. ಎಂಬುವರು ದೂರು ನೀಡಿದ್ದರು. 

ಅಮಾನತುಗೊಂಡವರ ಸ್ಥಾನಕ್ಕೆ ಹೊಸಬರ ನಿಯುಕ್ತಿ

ಅಮಾನತುಗೊಂಡಿರುವ ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರ ಸ್ಥಾನಕ್ಕೆ ವಿವಿಧ ಶಾಖೆಗಳಿಂದ ವರ್ಗಾವಣೆ ಮಾಡಿ ಡಿಸಿಸಿ ಬ್ಯಾಂಕ್‌ ಸಿಇಒ ಬಿ.ಎನ್‌.ಶೀಲಾ ಆದೇಶ ಹೊರಡಿಸಿದ್ದಾರೆ. ಕೆಜಿಎಫ್‌ ಶಾಖೆಯ ಹಿರಿಯ ಮೇಲ್ವಿಚಾರಕ ಮನೋಹರ್‌ ವಿ. ಸ್ಥಾನಕ್ಕೆ ಅದೇ ಶಾಖೆಯ ಹಿರಿಯ ಸಹಾಯಕ ಆನಂದ್‌ ಎನ್‌.ಆರ್‌.ಅವರನ್ನು ನಿಯುಕ್ತಿಗೊಳಿಸಲಾಗಿದೆ. ಕೋಲಾರ ಶಾಖೆಯ ಹಿರಿಯ ಮೇಲ್ವಿಚಾರಕ ಅಮೀನ ಎಂ.ಎ ಸ್ಥಾನಕ್ಕೆ ಅದೇ ಶಾಖೆಯ ಹಿರಿಯ ಸಹಾಯಕ ಸತೀಶ್‌ ಜಿ.ಎನ್‌. ಅವರನ್ನು ನಿಯುಕ್ತಿಗೊಳಿಸಲಾಗಿದೆ. ಸದ್ಯ ಶಿಡ್ಲಘಟ್ಟ ಶಾಖೆಯ ಮೇಲ್ವಿಚಾರಕರಾಗಿದ್ದ ಸಂತೋಷ್‌ ಕೆ. ಸ್ಥಾನಕ್ಕೆ ಅದೇ ಶಾಖೆಯ ಹಿರಿಯ ಸಹಾಯಕಿ ಮಿಲನಶ್ರೀ ಬಿ. ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ಮಾಲೂರು ಶಾಖೆಯ ಪ್ರಭಾರ ವ್ಯವಸ್ಥಾಪಕ ಟಿ.ಆರ್‌.ಮಂಜುನಾಥ್‌ ಸ್ಥಾನಕ್ಕೆ ಅದೇ ಶಾಖೆಯ ಹಿರಿಯ ಮೇಲ್ವಿಚಾರಕ ಕೃಷ್ಣಪ್ಪ ವಿ.ಅವರನ್ನು ನಿಯುಕ್ತಿ ಮಾಡಲಾಗಿದೆ. ಕೃಷ್ಣಪ್ಪ ಅವರಿಂದ ತೆರವಾದ ಮೇಲ್ವಿಚಾರಕ ಸ್ಥಾನಕ್ಕೆ ಅದೇ ಶಾಖೆಯ ಕಿರಿಯ ಸಹಾಯಕ ಮಲೇಶ್‌ ಎ.ಎಸ್‌ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಹಣ ದುರುಪಯೋಗ ಪ್ರಕರಣದಲ್ಲಿ ಈವರೆಗೆ ಒಟ್ಟು ₹ 1.84 ಕೋಟಿ ಡಿಸಿಸಿ ಬ್ಯಾಂಕ್‌ ಖಾತೆಗೆ ವಾಪಸ್‌ ಬಂದಿದೆ. ಉಳಿದ ಹಣವನ್ನು ಡಿಸೆಂಬರ್‌ನೊಳಗೆ ವಸೂಲಿ ಮಾಡಲಾಗುವುದು
-ಬಿ.ಎನ್.ಶೀಲಾ ಸಿಇಒ ಡಿಸಿಸಿ ಬ್ಯಾಂಕ್‌ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.