ಕೋಲಾರ: ತಾಲ್ಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಮಣಿಯನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಘಟಕವನ್ನು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಗುರುವಾರ ಉದ್ಘಾಟಿಸಿದರು.
‘ಹೈನೋದ್ಯಮವು ಜಿಲ್ಲೆಯ ರೈತರ ಬೆನ್ನೆಲುಬು. ಬಹುಪಾಲು ರೈತ ಕುಟುಂಬಗಳು ಜೀವನ ನಿರ್ವಹಣೆಗೆ ಹೈನುಗಾರಿಕೆ ಅವಲಂಬಿಸಿವೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ ಕಾರಣ ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ’ ಎಂದು ಹರೀಶ್ ಸಲಹೆ ನೀಡಿದರು.
‘ರೈತರು ಒಕ್ಕೂಟದಿಂದ ಸಿಗುವ ತಾಂತ್ರಿಕ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಹೈನೋದ್ಯಮ ಕ್ಷೇತ್ರದಿಂದ ದೂರ ಸರಿಯಬಾರದು. ಗ್ರಾಮೀಣ ಭಾಗದಲ್ಲಿ ಹಾಲು ಸಂಘಗಳನ್ನು ಅಭಿವೃದ್ಧಿಪಡಿಸಬೇಕು. ಹಾಲು ಖರೀದಿ ದರ ಹೆಚ್ಚಳ ಮಾಡಿದ್ದು, ರೈತರು ಹಾಲು ಶೇಖರಣೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.
‘ಒಕ್ಕೂಟದ ಸವಲತ್ತುಗಳು ಹಾಲು ಉತ್ಪಾದಕರಿಗೆ ಸಕಾಲಕ್ಕೆ ತಲುಪಬೇಕು. ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಮೇವು ಬೆಳೆಯಲು ಆರಂಭಿಸಿ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ತಾಲ್ಲೂಕಿನಾದ್ಯಂತ ಹಂತ ಹಂತವಾಗಿ ಬಿಎಂಸಿ ಕೇಂದ್ರ ಸ್ಥಾಪಿಸುವ ಮೂಲಕ ಹಾಲು ಸಾಗಾಣಿಕೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.
ಅಪರಾಧ: ‘ಖಾಸಗಿ ಡೇರಿಗಳು ಹಾಲು ಉತ್ಪಾದಕರನ್ನು ವಂಚಿಸುತ್ತಿವೆ. ಆದ ಕಾರಣ ರೈತರು ಖಾಸಗಿ ಡೇರಿಗಳಿಗೆ ಹಾಲು ಹಾಕಬಾರದು. ಹಾಲು ಕಲಬೆರಕೆ ಮಾಡುವುದು ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಅಪರಾಧ. ಹಾಲಿನ ಗುಣಮಟ್ಟದ ಜತೆಗೆ ಜೈವಿಕ ಗುಣಮಟ್ಟ ಕಾಪಾಡಬೇಕು’ ಎಂದು ಕೋಚಿಮುಲ್ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಹೇಳಿದರು.
ಮಣಿಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಂ.ಎ.ನರಸಿಂಹಮೂರ್ತಿ, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ವಿ.ರಾಜಬಾಬು, ನಾಗಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.