ವೇಮಗಲ್: ಚೋಳಘಟ್ಟ ಗ್ರಾಮದ ಚೋಳಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ರಾಸುಗಳಿಗೆ ಚುಚ್ಚಮದ್ದು ಮತ್ತು ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮದ್ದೇರಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಿತ್ಯಾನಂದ ಮಾತನಾಡಿ, ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹವಾಮಾನ ವೈಪರಿತ್ಯವು ಹೈನುಗಾರಿಕೆ ಮೇಲೆ ಪರಿಣಾಮ ಬೀರದಂತೆ ದನ, ಕರು, ಹೆಮ್ಮೆಗಳಿಗೆ ಕಾಲುಬಾಯಿ ರೋಗ ಬರದಂತೆ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಸ್ವಚ್ಛತೆ, ಗುಣಮಟ್ಟದ ಆಹಾರ ಹಿಂಡಿ, ಬೂಸ, ಫೀಡ್, ಹಸಿಮೇವು ಇತ್ಯಾದಿ ಆಹಾರವನ್ನು ನೀಡಬೇಕು. ಮೂರು ತಿಂಗಳು ಒಳಗಿರುವ ಕರುಗಳು, 9 ತಿಂಗಳು ಗರ್ಭ ಧರಿಸಿದ ಜಾನುವಾರು ಹೊರತುಪಡಿಸಿ, ಉಳಿದ ಎಲ್ಲಾ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಮುಂದಿನ ತಿಂಗಳ 21ರವರೆಗೆ ಈ ಅಭಿಯಾನ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ವೇಳೆ ಮದ್ದೇರಿ ಪಶು ವೈದ್ಯಕೀಯ ಕಿರಿಯ ಪರಿವೀಕ್ಷಕ ಮಂಜುನಾಥ್, ರಾಜಕಲ್ಲಹಳ್ಳಿ ಪಶು ವೈದ್ಯಕೀಯ ಕಿರಿಯ ಪರಿವೀಕ್ಷಕ ಸುನಿಲ್, ರಾಜು, ನಾಗರಾಜ್, ಪಶುಸಖಿ ವೆಂಕಟರತ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.