ADVERTISEMENT

ಮಾವು ಅಭಿವೃದ್ಧಿ: ₹ 100 ಕೋಟಿ ಪ್ರಸ್ತಾವ

ರಾಜ್ಯ ಸರ್ಕಾರಕ್ಕೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 3:00 IST
Last Updated 12 ಫೆಬ್ರುವರಿ 2021, 3:00 IST
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಮಾವು ಬೆಳೆಗಾರರಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಉದ್ಘಾಟಿಸಿದರು
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಮಾವು ಬೆಳೆಗಾರರಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಉದ್ಘಾಟಿಸಿದರು   

ಶ್ರೀನಿವಾಸಪುರ: ರಾಜ್ಯದಲ್ಲಿ ಮಾವಿನ ಬೆಳೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ₹ 100 ಕೋಟಿ ಅನುದಾನ ಕೋರಿ ಸಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಹೇಳಿದರು.

ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದಿಂದ ಮಾವು ಬೆಳೆಗಾರರಿಗೆ ಮಾವಿನ ಬೆಳೆ ರಕ್ಷಣೆ ಕುರಿತು ಬುಧವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣ್ಣುಗಳ ರಾಜ ಎನಿಸಿರುವ ಮಾವು ಅತ್ಯಂತ ಪ್ರಿಯವಾದ ಹಣ್ಣಾಗಿದೆ. ರಾಜ್ಯದಲ್ಲಿ ಮಾವು ಕೃಷಿ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ತೋಟಗಾರಿಕಾ ಸಚಿವರಿಗೆ ಮನವಿ ಮಾಡಲಾಗುವುದು. ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿಗೆ ಪೂರಕವಾಗಿ ಶಕ್ತಿಮೀರಿ ಶ್ರಮಿಸಲಾಗುವುದು ಎಂದು ಹೇಳಿದರು.

ADVERTISEMENT

ಮಾವು ಬೆಳೆಗಾರರು ತಜ್ಞರ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಮಾವಿನ ಬೆಳೆ ರಕ್ಷಣೆಗೆ ಅಗತ್ಯವಾದ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಮಾವು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಬೇಕು. ಉತ್ತಮ ಗುಣಮಟ್ಟದ ಮಾವನ್ನು ಉತ್ಪಾದಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಮಾತನಾಡಿ, ಮಾವು ಇಲ್ಲಿನ ಜನರ ಜೀವನಾಡಿ. ಈ ಬೆಳೆಯಿಂದ ಆರ್ಥಿಕ ಲಾಭ ಪಡೆಯಲು ಹೆಚ್ಚಿನ ಅವಕಾಶಗಳಿವೆ. ನಿಗಮದ ಅಧ್ಯಕ್ಷರು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮಾವು ಕೃಷಿಯನ್ನು ಅಭಿವೃದ್ಧಿ ಪಡಿಸಬೇಕು. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಬದಲಾದ ಪರಿಸ್ಥಿತಿಯಲ್ಲಿ ಮಾವಿನ ಇಳುವರಿ ಅನಿಶ್ಚಿತವಾಗುತ್ತಿದೆ. ಮಳೆ ಹಾಗೂ ಅಂತರ್ಜಲದ ಕೊರತೆ ಕಾಡುತ್ತಿದೆ. ಇದು ಮಾವಿನ ಮರಗಳಿಗೆ ಉರುಳಾಗಿ ಪರಿಣಮಿಸಿದೆ. ಹೂವಿನ ಹಂತದಿಂದ ಕಾಯಿ ಕೊಯ್ಲಿನವರೆಗೆ ರೋಗ ಹಾಗೂ ಕೀಟಬಾಧೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಮಾವಿನ ಬೆಳೆ ನಿರ್ವಹಣೆ ವೆಚ್ಚದಾಯಕವಾಗುತ್ತಿದೆ. ಆದ್ದರಿಂದ ರೈತರು ಇರುವುದರಲ್ಲಿ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಹಾಗೂ ಸಮರ್ಪಕವಾಗಿ ಮಾರುಕಟ್ಟೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ತೋಟಗಾರಿಕಾ ತಜ್ಞರಾದ ಡಾ.ಹಿತ್ತಲಮನಿ, ಡಾ.ಅಶ್ವತ್ಥನಾರಾಯಣರೆಡ್ಡಿ, ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಜೆ. ಗುಣವಂತ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಚ್. ಮಂಜುನಾಥ್, ಪ್ರಸಕ್ತ ಹಂಗಾಮಿನಲ್ಲಿ ಮಾವಿನ ಬೆಳೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ನಿರ್ವಹಣಾ ಕ್ರಮಗಳು ಹಾಗೂ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ತಿಳಿಸಿಕೊಟ್ಟರು. ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಮಾವು ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ನಿಗಮದ ಅಧ್ಯಕ್ಷರಿಗೆ ನೀಡಲಾಯಿತು. ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.