ಮಾಲೂರು: ಹಳೆಪಾಳ್ಯ ಗ್ರಾಮದ ಸರ್ವೆ ನಂ. 93ರಲ್ಲಿ ಜಲ್ಲಿ ಕ್ರಷರ್‌ಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸೇನೆ, ಹಳೆಪಾಳ್ಯ ಮತ್ತು ವೀರಕಪುತ್ರ ಗ್ರಾಮಸ್ಥರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರೈತ ಸೇನೆಯ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಮಾತನಾಡಿ, ಟೇಕಲ್ ಹೋಬಳಿಯ ಹಳೆಪಾಳ್ಯ ಗ್ರಾಮದ ಗೋಮಾಳ ಜಮೀನಿನಲ್ಲಿ ಇತ್ತೀಚೆಗೆ ಕ್ರಷರ್ ಸ್ಥಾಪನೆಗೆ ತಯಾರಿ ನಡೆಸಲಾಗಿದೆ. ಈ ಜಮೀನಿನ ಬೆಟ್ಟದಲ್ಲಿ ಪುರಾತನ ಕಾಲದಿಂದಲೂ ಸುಗ್ಗಲಮ್ಮ, ಕುಂಟಗಂಗಮ್ಮ, ಸಪ್ಲಾಮ್ಮ ಮತ್ತು ಕಾಟೇರಮ್ಮ ದೇವಾಲಯಗಳಿವೆ. ಇವುಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿದರು.
100 ಮೀಟರ್ ಅಂತರದಲ್ಲಿ ಆಂಜನೇಯಸ್ವಾಮಿ ದೇವಾಲಯ ಇದೆ. ಪಕ್ಕದಲ್ಲೇ ಕುಡಿಯುವ ನೀರಿನ ಬಾವಿ ಇದೆ. ಈ ಬೆಟ್ಟಕ್ಕೆ ಹೊಂದಿಕೊಂಡಂತೆ ರೈತರು ಕೃಷಿ ಭೂಮಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಈ ಬೆಟ್ಟದ ಅಕ್ಕಪಕ್ಕದಲ್ಲಿ ಹಳೆಪಾಳ್ಯ, ಕೆಂಪಸಂದ್ರ, ಬಸಾಪುರ, ವೀರಕಪುತ್ರ, ಅನಿಗಾನಹಳ್ಳಿ, ಕದಿರೆನಹಳ್ಳಿ ಗ್ರಾಮಗಳಿವೆ. ಕ್ರಷರ್ ಆರಂಭ ಮಾಡುವುದರಿಂದ ಮನೆಗಳಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.
ಕಲ್ಲು ಬಂಡೆ ಸಿಡಿಸಲು ಬಳಸುವ ಸಿಡಿಮದ್ದುಗಳಿಂದ ಬೆಳೆಗಳು ಸಹ ಹಾಳಾಗುತ್ತವೆ. ಇದರಿಂದ ರೈತರು ತೊಂದರೆಗೆ ಈಡಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಿಡಿಕಾರಿದರು.
ಸರ್ಕಾರ ಕಲ್ಲು ಕುಟಿಗರ ಗಣಿಗಾರಿಕೆಗೆ ಬ್ಲಾಕ್‌ಗಳನ್ನು ಮಾಡಿ ಟೆಂಡರ್ ಕರೆದಿದೆ. ಇದರಿಂದ ದಿನನಿತ್ಯ ಕಲ್ಲು ಕುಟಿಗರ ಜೀವನ ನಡೆಸುವ ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಹಾಗಾಗಿ, ಬ್ಲಾಕ್ ಮಾಡುವುದನ್ನು ನಿಲ್ಲಿಸಬೇಕು. ಈ ಕೂಡಲೇ ಕ್ರಷರ್‌ಗೆ ನೀಡಿರುವ ಅನುಮತಿ ರದ್ದುಪಡಿಸಿ ಇಲ್ಲಿನ ಹತ್ತಾರು ಗ್ರಾಮಗಳ ಜನರನ್ನು ಬದುಕಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ರೈತ ಸೇನೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ವೆಂಕಟೇಶಪ್ಪ, ಕಾರ್ಯಾಧ್ಯಕ್ಷ ಕೊಮ್ಮನಹಳ್ಳಿ ಆಂಜಿನಪ್ಪ, ಉಪಾಧ್ಯಕ್ಷ ಕೆ. ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ವಿ. ಶಶಿಧರ್, ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಳುಬಾಗಿಲು ಅಧ್ಯಕ್ಷ ಚಂದ್ರಶೇಖರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.