ADVERTISEMENT

ಹಿಂದುತ್ವ ಜೀವ, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಸಿದ್ದರಾಮಯ್ಯ: ಸಿ.ಟಿ. ರವಿ

'ಹಿಂದೂ ಎಂದರೆ ದೇಹ, ಹಿಂದುತ್ವ ಜೀವ'

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 13:16 IST
Last Updated 9 ಫೆಬ್ರುವರಿ 2023, 13:16 IST
   

ಕೋಲಾರ: ‘ಸಿದ್ದರಾಮಯ್ಯ ತಾವೂ ಹಿಂದೂ ಎಂಬುದಾಗಿ ಹೇಳಿ ಹಿಂದೂ ಬೇರೆ, ಹಿಂದುತ್ವ ಬೇರೆ ಎಂದಿದ್ದಾರೆ. ಆಗಾಗ್ಗೆ ವೇಷ ಬದಲಾಯಿಸುವ ಅವರಿಗೆ ಇದರ ಅರ್ಥ ಗೊತ್ತಿಲ್ಲ. ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ. ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಗುರುವಾರ ಇಲ್ಲಿ ನಡೆದ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಎಸ್‌ಸಿ ಮೋರ್ಚಾ ಸಮಾವೇಶದಲ್ಲಿ ಅವರು ಪದೇಪದೇ ಒತ್ತಿ ಕೇಳಿದ ಪ್ರಶ್ನೆಗೆ ಜನರು ‘ಶವ’ ಎಂದು ಉತ್ತರಿಸಿದರು.

ಆಗ ಸಿ.ಟಿ.ರವಿ, ‘ಈ ಪದವನ್ನು ನಾನು ಬಳಸುತ್ತಿಲ್ಲ; ಜನ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಹಿಂದುತ್ವ ಒಪ್ಪಿಕೊಳ್ಳದಿದ್ದರೆ ಅದೇ ಎರಡು ಅಕ್ಷರ ನೀವಾಗುತ್ತೀರಿ. ಆದರೆ, ನೀವು ಅದಾಗಬಾರದು ಎಂಬುದು ನಮ್ಮ ಬಯಕೆ. ಅದಕ್ಕಾಗಿ ಹಿಂದೂ ಆಗಿದ್ದವನು ಹಿಂದುತ್ವ ಒಪ್ಪಿಕೊಳ್ಳಬೇಕು. ಆಗ ಮಾತ್ರ ಜೀವ ಇರುತ್ತೆ’ ಎಂದು ಪರೋಕ್ಷವಾಗಿ ತಿವಿದರು.

ADVERTISEMENT

'ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ. ಹಿಂದುತ್ವ ಪರ ಎಂದರೆ‌ ಮುಸ್ಲಿಮರ ವಿರುದ್ಧ ಅಲ್ಲ. ಭಾರತ ನಮ್ಮದು ಎಂದವರೆಲ್ಲರೂ ಹಿಂದೂಗಳೇ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.