ADVERTISEMENT

ಕೋಲಾರ | ಹೈನೋದ್ಯಮ ಜಿಲ್ಲೆಯ ರೈತರ ಜೀವನಾಡಿ: ಕೋಚಿಮುಲ್‌ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 13:59 IST
Last Updated 19 ಜುಲೈ 2020, 13:59 IST
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಶನಿವಾರ ಗಂಗಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಧನಸಹಾಯದ ಚೆಕ್‌ ನೀಡಿದರು.
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಶನಿವಾರ ಗಂಗಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಧನಸಹಾಯದ ಚೆಕ್‌ ನೀಡಿದರು.   

ಕೋಲಾರ: ‘ಹೈನೋದ್ಯಮವು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರ ಸಂಘಗಳ ಸಿಬ್ಬಂದಿ ಒತ್ತು ನೀಡಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕಿವಿಮಾತು ಹೇಳಿದರು.

ತಾಲ್ಲೂಕಿನ ನಾಗನಾಳ ಗ್ರಾಮದ ಗಂಗಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಶನಿವಾರ ₹ 25 ಧನಸಹಾಯ ನೀಡಿ ಮಾತನಾಡಿ, ‘ರೈತರು ಹೈನುಗಾರಿಕೆ ಜತೆಗೆ ಆದಾಯೋತ್ಪನ್ನ ಚಟುವಟಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ರೈತರಿಗೆ ಎಸ್‌ಎನ್‌ಎಫ್‌ ಫಲಿತಾಂಶದ ಆಧಾರದಲ್ಲಿ ದರ ನೀಡಲಾಗುತ್ತಿದೆ. ರಾಸುಗಳ ಆರೋಗ್ಯ ತಪಾಸಣೆ ಮಾಡಿಸಬೇಕು. ಪಶು ವೈದ್ಯರು ಶಿಫಾರಸ್ಸು ಮಾಡಿದ ಔಷಧಗಳನ್ನು ರಾಸುಗಳಿಗೆ ನೀಡಬೇಕು. ಇದರಿಂದ ಒಕ್ಕೂಟಕ್ಕೆ ಲಾಭ ದೊರೆಯುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕೋಚಿಮುಲ್‌ನಿಂದ ಉತ್ಪಾದಕರಿಗೆ ಅನೇಕ ಸೌಲಭ್ಯ ನೀಡುವುದರ ಜತೆಗೆ ಜನಪರ ಕಲ್ಯಾಣ ಕಾರ್ಯಕ್ರಮ ನಡೆಸಲಾಗುತ್ತದೆ. ಅವಿಭಜಿತ ಕೋಲಾರ ಜಿಲ್ಲೆಯ ರೈತರ ಏಳಿಗೆಯಲ್ಲಿ ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ಪ್ರಮುಖ ಪಾತ್ರ ವಹಿಸುತ್ತಿವೆ. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಗಳನ್ನು ಡಿಸಿಸಿ ಬ್ಯಾಂಕ್‌ನಲ್ಲಿ ತೆರೆದು ವಹಿವಾಟು ನಡೆಸಬೇಕು’ ಎಂದು ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್, ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.