ADVERTISEMENT

ಆಯೋಜಕರ ವಿರುದ್ಧ ಮುಖಂಡರ ಕಿಡಿ

ದಲಿತ ಸಾಹಿತ್ಯ ಸಮ್ಮೇಳನ: ಸ್ಥಳೀಯರಿಗೆ ಆದ್ಯತೆ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:15 IST
Last Updated 13 ಆಗಸ್ಟ್ 2019, 14:15 IST
ದಲಿತ ಸಾಹಿತ್ಯ ಸಮ್ಮೇಳನ ಸಂಬಂಧ ಕೋಲಾರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರು ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಸಾಹಿತ್ಯ ಸಮ್ಮೇಳನ ಸಂಬಂಧ ಕೋಲಾರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರು ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.   

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ನಡೆಯುವ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ’ ಎಂದು ಕೆಲ ದಲಿತ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸಂಬಂಧ ಇಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಕೆಲ ದಲಿತ ಮುಖಂಡರು ಸಮ್ಮೇಳನದ ಆಯೋಜಕರ ವಿರುದ್ಧ ಕಿಡಿಕಾರಿದರು.

‘ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದಾರೆ. ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಕೋಲಾರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಆದರೆ, ಸ್ಥಳೀಯ ದಲಿತ ಮುಖಂಡರು ಹಾಗೂ ಕಲಾವಿದರಿಗೆ ಆದ್ಯತೆ ನೀಡದಿರುವುದು ಬೇಸರದ ಸಂಗತಿ’ ಎಂದು ದಲಿತ ಮುಖಂಡರಾದ ಕೃಷ್ಣ ಹಾಗೂ ಚೇತನ್‌ಬಾಬು ವಿಷಾದಿಸಿದರು.

ADVERTISEMENT

‘ಈಗಾಗಲೇ ಸಮ್ಮೇಳನದ ಆಹ್ವಾನಪತ್ರಿಕೆ ಮುದ್ರಿಸಿ ಹಂಚಲಾಗಿದೆ. ಸಮುದಾಯದ ಯಾವ ಮುಖಂಡರೊಂದಿಗೆ ಚರ್ಚಿಸಿ ಇದನ್ನೆಲ್ಲಾ ಮಾಡಿದ್ದೀರಿ? ಸಮ್ಮೇಳನಕ್ಕೆ 3 ದಿನ ಬಾಕಿ ಇರುವಾಗ ಏಕೆ ಪೂರ್ವಭಾವಿ ಸಭೆ ನಡೆಸುತ್ತಿದ್ದೀರಿ? ಸಮ್ಮೇಳನ ಮುಂದೂಡಿ’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಕಲಾವಿದರಿಗೆ ಗೌರವ ನೀಡದಿದ್ದರೆ ಬೇರೆ ಜಿಲ್ಲೆಯವರಿಗೆ ಹೇಗೆ ಸಿಗುತ್ತೆ? ನಮ್ಮನ್ನು ಯಾಕೆ ಚರ್ಚೆಗೆ ಕರೆದಿದ್ದೀರಿ. ನಿಮ್ಮ ಪಾಡಿಗೆ ನೀವು ಸಮ್ಮೇಳನ ಮಾಡಿಕೊಳ್ಳಿ, ಅಭ್ಯಂತರವಿಲ್ಲ’ ಎಂದು ಗುಡುಗಿದರು.

ಕಡೆಗಣಿಸುವಂತಿಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ‘ಪ್ರತಿ ಜಿಲ್ಲೆಯಿಂದ ಕಲಾವಿದರು ಬರುತ್ತಿರುವುದರಿಂದ ಎಲ್ಲರಿಗೂ ಅವಕಾಶ ನೀಡಬೇಕಿದೆ. ಯಾರನ್ನೂ ಕಡೆಗಣಿಸುವಂತಿಲ್ಲ. ನಮ್ಮ ಜಿಲ್ಲೆಯ ಕಲಾವಿದರಿಗೂ ನಾಡಗೀತೆ ಸೇರಿದಂತೆ ಬೇರೆ ಬೇರೆ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದು ಸಮಾಧಾನಪಡಿಸಿದರು.

‘ಮಹಿಳಾ ಸಮ್ಮೇಳನ ನಡೆಸುವುದಕ್ಕೂ ನಮಗೆ ಅವಕಾಶವಿತ್ತು. ಆ ಅವಕಾಶ ಪಡೆದು ನೆಮ್ಮದಿಯಾಗಿ ಇರಬಹುದಿತ್ತು. ಆದರೆ, ಅದು ಇಷ್ಟವಾಗಲಿಲ್ಲ. ಆದ ಕಾರಣ ದಲಿತ ಸಾಹಿತ್ಯ ಸಮ್ಮೇಳನವನ್ನೇ ಜಿಲ್ಲೆಯಲ್ಲಿ ಮಾಡಲು ಶ್ರಮಿಸಿದ್ದೇವೆ’ ಎಂದು ಹೇಳಿದರು.

‘ನಮ್ಮ ಆಡಳಿತಾವಧಿ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ನ್ಯಾಯಾಲಯದ ತೀರ್ಪು ಬಂದರೆ ಹೊಸಬರು ನೇಮಕ ಆಗುತ್ತಾರೆ. ಸಮ್ಮೇಳನ ನಡೆಯಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಚರ್ಚಿಸಿ ಕ್ರಮ ಕೈಗೊಂಡಿದ್ದೇವೆಯೇ ಹೊರತು ನಿಮ್ಮನ್ನು ಕಡೆಗಣಿಸುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆ.10ರಂದು ಸಮ್ಮೇಳನದ ಆಹ್ವಾನಪತ್ರಿಕೆ ಸಿಕ್ಕಿತು. ರಾಜ್ಯ ಮಟ್ಟದ ಸಮ್ಮೇಳನ ಆಗಿರುವ ಕಾರಣ ಎಲ್ಲಾ ಸ್ಥಳೀಯ ಮುಖಂಡರ ಹೆಸರು ಹಾಕಿಲ್ಲ. ಸಮ್ಮೇಳನ ಯಶಸ್ವಿಗೊಳಿಸಲು ಸಹಕರಿಸಿ. ಸಣ್ಣಪುಟ್ಟ ವಿಚಾರ ದೊಡ್ಡದು ಮಾಡುವುದು ಬೇಡ’ ಎಂದು ಮನವಿ ಮಾಡಿದರು. ಬಳಿಕ ಎಲ್ಲಾ ಮುಖಂಡರು ಸಮ್ಮತಿಸಿದರು.

ಸಹಕಾರ ನೀಡುತ್ತೇವೆ: ‘ಮೊದಲ ಬಾರಿಗೆ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನಸು ಬಹಳ ದಿನಗಳದ್ದಾಗಿದ್ದರೂ ಶ್ರಮ ವಹಿಸಿ ಜಿಲ್ಲೆಗೆ ಸಮ್ಮೇಳನ ತರಲಾಗಿದೆ. ಸರ್ಕಾರದ ಬದಲಾವಣೆ, ಪ್ರವಾಹ ಮತ್ತಿತರ ಸಮಸ್ಯೆ ನಡುವೆಯೂ ಸಮ್ಮೇಳನ ನಡೆಯುತ್ತಿದೆ. ಇದು ದಲಿತ ಸಾಹತ್ಯ ಸಮ್ಮೇಳನವೇ ಹೊರತು ಸಂಘಗಳ ಸಮ್ಮೇಳನವಲ್ಲ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.